ADVERTISEMENT

ಟೀಕಾಕಾರರ ಬಾಯಿ ಮುಚ್ಚಿಸಿದ ಯುವರಾಜ: ನಾಯಕತ್ವ ಹೊಣೆ ಸಮರ್ಥವಾಗಿ ನಿಭಾಯಿಸಿದ ಗಿಲ್

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 23:53 IST
Last Updated 28 ಜುಲೈ 2025, 23:53 IST
<div class="paragraphs"><p> ಶುಭಮನ್ ಗಿಲ್ </p></div>

ಶುಭಮನ್ ಗಿಲ್

   

(ರಾಯಿಟರ್ಸ್ ಚಿತ್ರ)

ಮ್ಯಾಂಚೆಸ್ಟರ್: ಶುಭಮನ್ ಗಿಲ್‌ ಅವರನ್ನು ಭಾರತ ಕ್ರಿಕೆಟ್‌ ತಂಡದ ನಾಯಕನಾಗಿ ಘೋಷಣೆ ಮಾಡುವಾಗ, ಯುವರಾಜನ ನೇಮಕದ ನಿರ್ಧಾರ ಅವಸರದ ಕ್ರಮವಾಗಿತ್ತೇ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಅವರಿಗೆ 25 ವರ್ಷ ವಯಸ್ಸು. ಜೊತೆಗೆ ‘ಸೇನಾ’ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ) ತಂಡಗಳ ವಿರುದ್ಧ ಅವರ ದಾಖಲೆಗಳು ಅಷ್ಟೇನೂ ಉತ್ತಮ ಮಟ್ಟದಲ್ಲಿರಲಿಲ್ಲ.

ADVERTISEMENT

ಅವರಿಗೆ ಪಳಗಲು ಅವಕಾಶ ನೀಡಿ, ಅನುಭವಿ ಆಟಗಾರರಾದ ಕೆ.ಎಲ್‌.ರಾಹುಲ್‌, ಜಸ್‌ಪ್ರೀತ್ ಬೂಮ್ರಾ ಅಥವಾ ರಿಷಭ್ ಪಂತ್ ಅವರಲ್ಲಿ ಒಬ್ಬರಿಗೆ ಈ ಹೊಣೆ ವಹಿಸಬಹುದಿತ್ತಲ್ಲವೇ? ಪರಿವರ್ತನೆಯಲ್ಲಿರುವ ತಂಡದ ನಾಯಕತ್ವದ ಜೊತೆಗೆ ಭಾರತ ಇಂಗ್ಲೆಂಡ್‌ ನೆಲದಲ್ಲಿ ಕೇವಲ ಮೂರೇ ಸರಣಿ ಗೆದ್ದಿರುವಾಗ ಈ ಜವಾಬ್ದಾರಿ ಅವರನ್ನು ಕುಗ್ಗಿಸುವುದಿಲ್ಲವೇ? ಭಾರತ ತಂಡದ ನಾಯಕನಾಗಿ ಐದು ಟೆಸ್ಟ್‌ಗಳ ಸರಣಿಗೆ ನಾಯಕತ್ವ ವಹಿಸುವುದು ಅವರನ್ನು ಮಾನಸಿಕ ಮತ್ತು ದೈಹಿಕವಾಗಿ ದಣಿಸುವುದಿಲ್ಲವೇ?.... ಹೀಗೆ ಹಲವು ಆಯಾಮಗಳಲ್ಲಿ ಚರ್ಚೆಗಳಾಗಿದ್ದವು.

ಮೃದುಭಾಷಿ ಆದರೆ ದೃಢ ಮನಸ್ಸಿನ ಗಿಲ್‌ ಈ ಪ್ರಶ್ನೆಗಳಿಗೆಲ್ಲಾ ಸಮರ್ಥ ರೀತಿಯಲ್ಲೇ ಉತ್ತರ ನೀಡಿದ್ದಾರೆ. ವೈಯಕ್ತಿಕ ಆಟದ ಜೊತೆಗೆ ನಾಯಕತ್ವ ಹೊಣೆಯನ್ನೂ ನಿಭಾಯಿಸಬಲ್ಲೆ ಎಂಬುದನ್ನು ಸಾಧಿಸಿತೋರಿಸಿದ್ದಾರೆ.

ಮೊದಲಿಗೆ, ಗಿಲ್‌ ಅವರು ಬ್ಯಾಟಿಂಗ್‌ನಲ್ಲಿ ದೀರ್ಘ ಕಾಲದ ದಾಖಲೆಗಳನ್ನು ಮುರಿದಿದ್ದಾರೆ. ಜುಲೈ 31ರಂದು ಅಂತಿಮ ಟೆಸ್ಟ್‌ ಆರಂಭವಾಗಲಿದ್ದು ಅವರು ಇನ್ನೂ ಹೆಚ್ಚಿನದನ್ನು ಸಾಧಿಸುವ ಹಾದಿಯಲ್ಲಿದ್ದಾರೆ. ಆ್ಯಂಡರ್ಸನ್‌– ತೆಂಡೂಲ್ಕರ್‌ ಟ್ರೋಫಿ ಸರಣಿಗೆ ಮೊದಲು ಪಂಜಾಬ್‌ನ ಆಟಗಾರ, ‘ಸೇನಾ’ ದೇಶಗಳ ವಿರುದ್ಧ ಒಂದೂ ಶತಕ ಬಾರಿಸಿರಲಿಲ್ಲ. ಇಲ್ಲಿಗೆ ಬರುವ ಮೊದಲು ಅವರು ಹೊಡೆದ ಐದೂ ಶತಕಗಳು ಉಪಖಂಡದಲ್ಲಿ ದಾಖಲಾಗಿದ್ದವು. ವಿರಾಟ್‌ ಕೊಹ್ಲಿ ಅವರ ಪರಂಪರೆಯಲ್ಲಿ ಸಾಗುತ್ತಿರುವ ಆಟಗಾರ ಎನಿಸಿಕೊಂಡ ಗಿಲ್‌ ಅವರು ಆಸ್ಟ್ರೇಲಿಯಾ ವಿರುದ್ಧ 6 ಟೆಸ್ಟ್‌ಗಳಲ್ಲಿ ಕೇವಲ ಎರಡು ಅರ್ಧ ಶತಕ ಹೊಡೆದಿದ್ದು, 91 ಅವರ ಅತ್ಯಧಿಕ ಗಳಿಕೆಯಾಗಿತ್ತು. ಅವರ ವರ್ಚಸ್ಸು ಗಮನಿಸಿದರೆ ಇದು ಸಾಧಾರಣ ಪ್ರದರ್ಶನ.

ಲೀಡ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಅವರ ಹೆಗಲ ಮೇಲಿದ್ದ ಹೊಣೆ ಸಾಮಾನ್ಯ ರೀತಿಯದಾಗಿರಲಿಲ್ಲ. ಅವರು ಆಕರ್ಷಕ 147 ರನ್‌ ಹೊಡೆದು ತಮ್ಮ ಮೇಲಿನ ಅನುಮಾನಗಳಿಗೆಲ್ಲಾ ತೆರೆಯೆಳೆದರು. ಅಲ್ಲಿಂದ ಅವರು ಹಿಂತಿರುಗಿ ನೋಡಿಲ್ಲ. ಡಾನ್‌ ಬ್ರಾಡ್ಮನ್‌ ರೀತಿಯ ಲಯದಲ್ಲೇ ಆಡಿ ಕ್ರಿಕೆಟ್‌ ಜಗತ್ತಿನ ನವತಾರೆಯ ಪಟ್ಟ ಉಳಿಸಿಕೊಂಡಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಸೊಗಸಾದ 269 ಮತ್ತು ಅಧಿಕಾಯುತ 161 ರನ್ ಗಳಿಸಿದರು. ಲಾರ್ಡ್ಸ್‌ನಲ್ಲಿ ಮಾತ್ರ ಹಿನ್ನಡೆ (16 ಮತ್ತು 6) ಅನುಭವಿಸಿದರು.

ಓಲ್ಡ್‌ ಟ್ರಾಫರ್ಡ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 12 ರನ್‌ಗೆ ನಿರ್ಗಮಿಸಿದಾಗ ಒಳಕ್ಕೆ ಬರುವ ಎಸೆತಗಳು ಅವರ ದೌರ್ಬಲ್ಯ, ಅವರ ತಂತ್ರದ ಬಗ್ಗೆ ಪ್ರಶ್ನೆಗಳೆದುರಾದವು. ಆದರೆ ಮುಂದಿನ ಸರದಿಯಲ್ಲಿ 238 ಎಸೆತಗಳನ್ನು ನಿಭಾಯಿಸಿ ಕೆಚ್ಚಿನ 103 ರನ್ ಹೊಡೆಯುವ ಮೂಲಕ ಆ ಟೀಕೆಗಳಿಗೂ ತಕ್ಕ ಉತ್ತರವನ್ನು ಗಿಲ್‌ ನೀಡಿದ್ದಾರೆ. ಭಾರತ ಎರಡನೇ ಇನಿಂಗ್ಸ್‌ನಲ್ಲಿ ಕುಸಿತದಿಂದ ಪಾರಾಗಲು ಅವರು ರಾಹುಲ್ ಜೊತೆ ದೊಡ್ಡ ಜೊತೆಯಾಟ ಕಟ್ಟಿದರು. ಭಾರತ ಅಮೋಘ ಡ್ರಾ ಸಾಧಿಸಲು ಆ ಜೊತೆಯಾಟ ಅಡಿಪಾಯ ಹಾಕಿತು.

ನಾಯಕತ್ವದ ಬಗ್ಗೆ ಹೇಳುವುದಾದರೆ, ಅವರು ತಮ್ಮ ಇತಿಮಿತಿಯಲ್ಲಿ ಉತ್ತಮವಾಗಿ ಹೊಣೆ ನಿರ್ವಹಿಸಿದ್ದಾರೆ. ತಂಡದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಉತ್ತಮ ಬೌಲರ್‌ಗಳನ್ನು ಹೊಂದಿಲ್ಲ. ಬೂಮ್ರಾ ಮೂರು ಪಂದ್ಯಗಳಿಗೆ ಲಭ್ಯರಾದರು. ಆಕಾಶ್ ದೀಪ್‌, ನಿತೀಶ್ ಗಾಯಾಳಾದರು. ಆದರೆ ಇರುವ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿದರು. ಅವರ ಕೆಲವು ನಿರ್ಧಾರಗಳು– ಬ್ಯಾಟರ್ ಬದಲು ವಿಕೆಟ್‌ ಕೀಳಬಲ್ಲ ಕುಲದೀಪ್‌ ಅವರನ್ನು ಆಡಿಸಲು ಹಿಂಜರಿಕೆ– ರಕ್ಷಣಾತ್ಮಕ ಕ್ರಮವೆನಿಸಿವೆ. ಆದರೆ ತಮ್ಮ ನಿರ್ಧಾರಗಳಿಂದ ಹಿಂದೆ ಸರಿಯಲಿಲ್ಲ.

ಅವರು ಕೊಹ್ಲಿ ಅವರ ರೀತಿಯಲ್ಲಿ ಅಥವಾ ಧೋನಿ, ರೋಹಿತ್ ಶರ್ಮಾ ರೀತಿಯ ನಾಯಕರಲ್ಲ. ಅವರು ತಮ್ಮ ಕೆಲಸದಲ್ಲಿ ಏಕಾಗ್ರತೆ ಹೊಂದಿರುವವರು. ಆದರೆ ಅಗತ್ಯ ಬಿದ್ದಾಗ ಆಕ್ರಮಣಕಾರಿ ನಿರ್ಧಾರಕ್ಕೂ ಮುಂದಾಗುವವರು. ಇದು ಅವರಿಗೆ ನಾಯಕನಾಗಿ ಮೊದಲ ಸರಣಿ. ಅವರಿಗೆ ಕಲಿಯುವ ಅವಕಾಶ ಸಾಕಷ್ಟು ಇದೆ. ಆದರೆ ಯುವರಾಜ ಭರವಸೆ ಮೂಡಿಸಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.