ADVERTISEMENT

ಶ್ರೀಲಂಕಾ: ಟೆಸ್ಟ್‌ ಕ್ರಿಕೆಟ್‌ಗೆ ಹಸರಂಗಾ ವಿದಾಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 12:37 IST
Last Updated 15 ಆಗಸ್ಟ್ 2023, 12:37 IST
ವಣಿಂದು ಹಸರಂಗಾ
ವಣಿಂದು ಹಸರಂಗಾ   

ಕೊಲಂಬೊ (ಪಿಟಿಐ): ಶ್ರೀಲಂಕಾ ಕ್ರಿಕೆಟ್ ತಂಡದ ಆಲ್‌ರೌಂಡರ್ ವಣಿಂದು ಹಸರಂಗಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದೀರ್ಘ ಕಾಲ ಆಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

26 ವರ್ಷದ ಹಸರಂಗಾ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾರೆ.

‘ಹಸರಂಗಾ ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ನಾವು ರೂಪಿಸಿಕೊಂಡಿರುವ ಯೋಜನೆಗಳಿಗೆ ಅವರ ನಿರ್ಧಾರ ಪೂರಕವಾಗಿದೆ. ಅವರು ತಮ್ಮ ಸಂಪೂರ್ಣ ಸಾಮರ್ಥ್ಯ ಮತ್ತು ಸಮಯವನ್ನು ನಿಗದಿಯ ಓವರ್‌ಗಳ ಕ್ರಿಕೆಟ್‌ಗೆ ಸಮರ್ಪಿಸಲು ಸಾಧ್ಯವಾಗಲಿದೆ‘ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಷ್ಲೆ ಡಿಸಿಲ್ವಾ ಹೇಳಿದ್ದಾರೆ.

ADVERTISEMENT

2020ರಲ್ಲಿ ದಕ್ಷಿಣ ಆಫ್ರಿಕಾ ಎದುರು ಸೆಂಚುರಿಯನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಹಸರಂಗಾ ಪದಾರ್ಪಣೆ ಮಾಡಿದ್ದರು. ಒಟ್ಟು ನಾಲ್ಕು ಟೆಸ್ಟ್ ಆಡಿರುವ ಅವರು 196 ರನ್ ಗಳಿಸಿ, ನಾಲ್ಕು ವಿಕೆಟ್ ಪಡೆದಿದ್ದಾರೆ.

48 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು 67 ವಿಕೆಟ್ ಪಡೆದಿದ್ದು, 832 ರನ್‌ ಸೇರಿಸಿದ್ದಾರೆ. 58 ಟ್ವೆಂಟಿ–20 ಪಂದ್ಯಗಳನ್ನೂ ಆಡಿರುವ ಅವರು 533 ರನ್‌ ಗಳಿಸಿದ್ದು, 91 ವಿಕೆಟ್ ಪಡೆದಿದ್ದಾರೆ.

ಐಪಿಎಲ್ ಅಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳ ಲೀಗ್‌ಗಳಲ್ಲಿಯೂ ಆಡುತ್ತಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯಾಟ್ಸ್, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲೇಡಿಯೇಟರ್ಸ್, ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಂಡಿ ಫಾಲ್ಕನ್ಸ್‌ ಮತ್ತು ಜಾಫ್ನಾ ಕಿಂಗ್ಸ್‌ ಹಾಗೂ ಮೇಜರ್ ಪ್ರೀಮಿಯರ್ ಲೀಗ್‌ನಲ್ಲಿ ವಾಷಿಂಗ್ಟನ್ ಫ್ರೀಡಂ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.