ADVERTISEMENT

ಕೊಹ್ಲಿ ಅದ್ಭುತ ವ್ಯಕ್ತಿ: ಟೀಂ ಇಂಡಿಯಾ ನಾಯಕನ ಹೊಗಳಿದ ಆಸ್ಟ್ರೇಲಿಯ ಕ್ರಿಕೆಟಿಗ

ಏಜೆನ್ಸೀಸ್
Published 21 ಜೂನ್ 2020, 10:42 IST
Last Updated 21 ಜೂನ್ 2020, 10:42 IST
ಸ್ಟೀವ್‌ ಸ್ಮಿತ್‌
ಸ್ಟೀವ್‌ ಸ್ಮಿತ್‌   

ನವದೆಹಲಿ: ‘ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅದ್ಭುತ ವ್ಯಕ್ತಿ. ಜೊತೆಗೆ ಚಾಣಾಕ್ಷ ನಾಯಕ’ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರ ಸ್ಟೀವ್‌ ಸ್ಮಿತ್‌, ಗುಣಗಾನ ಮಾಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ ಜೊತೆ ಮಾತನಾಡಿರುವ ಸ್ಮಿತ್‌ ‘ಮೈದಾನದ ಹೊರಗೆ ನಾನು ಹಲವು ಬಾರಿ ಕೊಹ್ಲಿ ಜೊತೆ ಮಾತನಾಡಿದ್ದೇನೆ. ಭಾರತ ಮತ್ತು ಆಸ್ಟ್ರೇಲಿಯಾದ ಪ್ರಚಲಿತ ವಿದ್ಯಮಾನಗಳ ಕುರಿತು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ.

2017ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದ ವೇಳೆ ಕೊಹ್ಲಿ ಹಾಗೂ ಸ್ಮಿತ್‌ ‘ಹಾವು–ಮುಂಗುಸಿ’ಯಂತೆ ವರ್ತಿಸಿದ್ದರು. ಆಗ ತಂಡದ ನಾಯಕರಾಗಿದ್ದ ಸ್ಮಿತ್‌, ಡಿಆರ್‌ಎಸ್‌ ಪಡೆಯುವ ಮುನ್ನ ಪದೇ ಪದೇ ಡ್ರೆಸಿಂಗ್‌ ಕೊಠಡಿಯತ್ತ ನೋಡಿ ಅಲ್ಲಿ ಕುಳಿತಿದ್ದ ಸಹಾಯಕ ಸಿಬ್ಬಂದಿಯ ನೆರವು ಪಡೆಯಲು ಯತ್ನಿಸಿದ್ದರು. ಹೀಗಾಗಿ ಕೊಹ್ಲಿ, ಎದುರಾಳಿ ನಾಯಕನನ್ನು ‘ವಂಚಕ’ ಎಂದು ಮೂದಲಿಸಿದ್ದರು.

ADVERTISEMENT

2018ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯದ ವೇಳೆ ನಡೆದಿದ್ದ ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಮಿತ್‌, ನಿಷೇಧ ಶಿಕ್ಷೆಗೂ ಗುರಿಯಾಗಿದ್ದರು. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಭಾರತದ ಎದುರಿನ ಪಂದ್ಯದ ವೇಳೆ ಸ್ಮಿತ್‌ ಅವರನ್ನು ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರು ‘ವಂಚಕ’ ಎಂದು ಕೆಣಕಿದ್ದರು. ಪಂದ್ಯ ಗೆದ್ದ ಬಳಿಕ ಸ್ಮಿತ್‌ ಬಳಿ ಹೋಗಿದ್ದ ಕೊಹ್ಲಿ, ಅಭಿಮಾನಿಗಳ ಪರವಾಗಿ ಕ್ಷಮೆಯಾಚಿಸಿದ್ದರು. ಕೊಹ್ಲಿ ನಡೆಯಿಂದ ಸ್ಮಿತ್‌ ಅಚ್ಚರಿಗೊಂಡಿದ್ದರು.

‘ವಿಶ್ವಕಪ್‌ ಪಂದ್ಯದ ಬಳಿಕ ನನ್ನ ಬಳಿ ಬಂದ ಕೊಹ್ಲಿ, ಭಾರತದ ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದರು. ಅವರ ಆ ಗುಣ ನನಗೆ ತುಂಬಾ ಹಿಡಿಸಿತು. ಮೈದಾನದಲ್ಲಿ ನಾವಿಬ್ಬರೂ ಆಕ್ರಮಣಕಾರಿ ಮನೋಭಾವದೊಂದಿಗೆ ಆಡುತ್ತೇವೆ. ಅವರು ಭಾರತ ತಂಡವನ್ನು ತುಂಬಾ ಚೆನ್ನಾಗಿ ಮುನ್ನಡೆಸುತ್ತಿದ್ದಾರೆ’ ಎಂದು ಸ್ಮಿತ್‌ ಹೇಳಿದ್ದಾರೆ.

‘ಭಾರತವು ವಿಶ್ವದ ಬಲಿಷ್ಠ ತಂಡ. ಕೊಹ್ಲಿ ಬಳಗ ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆ ತಂಡದ ವಿರುದ್ಧ ಟೆಸ್ಟ್‌ ಸರಣಿಯನ್ನಾಡಲು ಉತ್ಸುಕನಾಗಿದ್ದೇನೆ. ಈ ಸರಣಿ ವಿಭಿನ್ನ ಮತ್ತು ವಿಶೇಷ ಅನುಭವ ನೀಡಲಿದೆ’ ಎಂದು ಅವರು ನುಡಿದಿದ್ದಾರೆ.

ಸ್ಮಿತ್‌ ಅವರು ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.