ADVERTISEMENT

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಸ್ಮಿತ್‌ ಅಗ್ರಸ್ಥಾನ ಇನ್ನಷ್ಟು ಭದ್ರ

ಬೌಲಿಂಗ್‌ನಲ್ಲಿ ಮುಂದುವರಿದ ಕಮಿನ್ಸ್ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:29 IST
Last Updated 10 ಸೆಪ್ಟೆಂಬರ್ 2019, 20:29 IST
ಸ್ಟೀವ್‌ ಸ್ಮಿತ್‌–ಎಪಿ/ಪಿಟಿಐ ಚಿತ್ರ
ಸ್ಟೀವ್‌ ಸ್ಮಿತ್‌–ಎಪಿ/ಪಿಟಿಐ ಚಿತ್ರ   

ದುಬೈ:ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಹಾಗೂ ಪ್ಯಾಟ್ ಕಮಿನ್ಸ್ ಅವರು ಐಸಿಸಿ ಬ್ಯಾಟ್ಸಮನ್‌ ಹಾಗೂ ಬೌಲರ್‌ಗಳ ‍ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಗಳನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಆ್ಯಷಸ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡವನ್ನು 185 ರನ್‌ಗಳಿಂದ ಮಣಿಸಿತ್ತು. ಆ್ಯಷಸ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು.

ಸ್ಮಿತ್‌ ಅವರು ನಾಲ್ಕನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 211 ಹಾಗೂ 82 ರನ್‌ ಗಳಿಸಿ ಪಂದ್ಯಶ್ರೇಷ್ಠರಾಗಿದ್ದರು. ಈ ಸೊಗಸಾದ ಆಟ ಅವರ ರೇಟಿಂಗ್‌ ಪಾಯಿಂಟ್‌ಗಳನ್ನು 937ಕ್ಕೆ ಏರಿಸಿದೆ. ಇದು ಡಿಸೆಂಬರ್‌ 2017ರಲ್ಲಿ ಅವರು ಸಂಪಾದಿಸಿದ ಸಾರ್ವಕಾಲಿಕ ಶ್ರೇಷ್ಠ ಸರಾಸರಿಗಿಂತ ಕೇವಲ 10 ಪಾಯಿಂಟ್ಸ್ ಕಡಿಮೆ.

ಭಾರತದ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗಿಂತಸ್ಮಿತ್‌ 34 ಪಾಯಿಂಟ್ಸ್ ಮುನ್ನಡೆಯಲ್ಲಿದ್ದಾರೆ. ಐದು ಪಂದ್ಯಗಳ ಆ್ಯಷಸ್‌ ಸರಣಿ ಮುಕ್ತಾಯದವರೆಗೂ ಸ್ಮಿತ್‌ ಸ್ಥಾನಕ್ಕೆ ಯಾವುದೇ ಧಕ್ಕೆಯಿಲ್ಲ.

ADVERTISEMENT

ಆ್ಯಷಸ್‌ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ 103 ರನ್‌ ನೀಡಿ 7 ವಿಕೆಟ್‌ ಕಿತ್ತ ಪ್ಯಾಟ್‌ ಕಮಿನ್ಸ್ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಬೌಲಿಂಗ್‌ ಸರಾಸರಿ (914 ಪಾಯಿಂಟ್ಸ್) ಸರಿಗಟ್ಟಿದ್ದಾರೆ. ಇದು ಸಾರ್ವಕಾಲಿಕಜಂಟಿ ಐದನೇ ಶ್ರೇಷ್ಠ ಸರಾಸರಿಯಾಗಿದೆ. ಆಸ್ಟ್ರೇಲಿಯಾ ಪರ ಜಂಟಿ ಶ್ರೇಷ್ಠ ಸರಾಸರಿ. 2001ರಲ್ಲಿ ಗ್ಲೆನ್‌ ಮೆಕ್‌ಗ್ರಾತ್‌ ಈ ಸಾಧನೆ ಮಾಡಿದ್ದರು.

ಕಮಿನ್ಸ್, ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (851) ಅವರಿಗಿಂತ 63 ಪಾಯಿಂಟ್ಸ್‌ ಮುಂದೆ ಇದ್ದಾರೆ. ಭಾರತದ ಜಸ್‌ಪ್ರೀತ್‌ ಬೂಮ್ರಾ (835) ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾದ ಜೋಷ್‌ ಹ್ಯಾಜಲ್‌ವುಡ್‌ ಈ ವರ್ಷದಲ್ಲಿ ಮೊದಲ ಬಾರಿ ಅಗ್ರ 10ರ (8ನೇ ಸ್ಥಾನ) ಗಡಿಯೊಳಗೆ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ತಂಡದ ಜೋಸ್‌ ಬಟ್ಲರ್‌ (ನೇ ಸ್ಥಾನ) ರೋರಿ ಬರ್ನ್ಸ್ (ವೈಯಕ್ತಿಕ ಶ್ರೇಷ್ಠ 61ನೇ ಸ್ಥಾನ) ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್‌ ಪೇನ್‌ಬ್ಯಾಟ್ಸಮನ್‌ಗಳ‍ರ‍್ಯಾಂಕಿಂಗ್‌ನಲ್ಲಿ ಜಿಗಿತ ಕಂಡಿದ್ದಾರೆ.

ಅಫ್ಗಾನಿಸ್ತಾನ ಆಟಗಾರರ ರ‍್ಯಾಂಕಿಂಗ್‌ನಲ್ಲೂ ಏರಿಕೆ: ಬಾಂಗ್ಲಾದೇಶ ತಂಡದ ವಿರುದ್ಧ ಛತ್ತೊಗ್ರಾಮ್‌ ಟೆಸ್ಟ್‌ನಲ್ಲಿ 224 ರನ್‌ ಜಯ ಸಂಪಾದಿಸಿದ ಅಫ್ಗಾನಿಸ್ತಾನ ತಂಡದ ಆಟಗಾರರ ರ‍್ಯಾಂಕಿಂಗ್‌ನಲ್ಲೂ ಏರಿಕೆ ಕಂಡುಬಂದಿದೆ. ಅಸ್ಗರ್‌ ಅಫ್ಗಾನ್‌ (63ನೇ ಸ್ಥಾನ), ರಹಮತ್‌ ಶಾ (65ನೇ ಸ್ಥಾನ) ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ಬಡ್ತಿ ಪಡೆದಿದ್ದರೆ, ನಾಯಕ ರಶೀದ್‌ ಖಾನ್‌ (37ನೇ ಸ್ಥಾನ) ಹಾಗೂ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾದ ಮೊಹಮ್ಮದ್‌ ನಬಿ (85ನೇ ಸ್ಥಾನ) ಬೌಲರ್‌ಗಳ ‌ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.

ಬಾಂಗ್ಲಾ ತಂಡದ ಶಕೀಬ್‌ ಅಲ್‌ ಹಸನ್‌ (21) ಹಾಗೂ ತೈಜುಲ್‌ ಇಸ್ಲಾಂ (22) ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ಒಂದೊಂದು ಸ್ಥಾನ ಮೇಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.