ADVERTISEMENT

T20 World Cup: ಕೆನಡಾ ಮಣಿಸಿದ ದಕ್ಷಿಣ ಆಫ್ರಿಕಾ ಶುಭಾರಂಭ

ಎನ್‌ಗಿಡಿ ಮಿಂಚು, ಮರ್ಕರಂ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 18:00 IST
Last Updated 9 ಫೆಬ್ರುವರಿ 2026, 18:00 IST
<div class="paragraphs"><p>ದಕ್ಷಿಣ ಆಫ್ರಿಕಾ</p></div>

ದಕ್ಷಿಣ ಆಫ್ರಿಕಾ

   

ಐಸಿಸಿ ಚಿತ್ರ

ಅಹಮದಾಬಾದ್‌: ವೇಗಿ ಲುಂಗಿ ಎನ್‌ಗಿಡಿ (31ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಮತ್ತು ನಾಯಕ ಏಡನ್‌ ಮರ್ಕರಂ (59;32ಎ) ಅವರ ಮಿಂಚಿನ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ADVERTISEMENT

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಹಾಲಿ ರನ್ನರ್ಸ್‌ ಅಪ್‌ ದಕ್ಷಿಣ ಆಫ್ರಿಕಾ ತಂಡವು 57 ರನ್‌ಗಳಿಂದ ಅನನುಭವಿ ಕೆನಡಾ ತಂಡವನ್ನು ಸುಲಭವಾಗಿ ಮಣಿಸಿತು. 

214 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಕೆನಡಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156 ರನ್‌ ಗಳಿಸಿ ಹೋರಾಟ ಮುಗಿಸಿತು. ಮೂರನೇ ಕ್ರಮಾಂಕದ ನವನೀತ್ ಧಲಿವಾಲ್ (64;49ಎ, 4x7, 6x1) ಮತ್ತು ಹರ್ಷ್ ಥಾಕರ್ (33;29ಎ) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಇದಕ್ಕೂ ಮೊದಲು ಟಾಸ್ ಗೆದ್ದ ಕೆನಡಾ ಫೀಲ್ಡಿಂಗ್‌ ಆಯ್ಡುಕೊಂಡಿತು. ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮರ್ಕರಂ ಮತ್ತು ಕ್ವಿಂಟನ್‌ ಡಿಕಾಕ್‌ (25;22ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 6.5 ಓವರ್‌ಗಳಲ್ಲಿ 70 ರನ್‌ ಸೇರಿಸಿದರು.

ಡಿಕಾಕ್‌ ನಿರ್ಗಮನದ ಬಳಿಕ ಮರ್ಕರಂ ಅವರನ್ನು ಸೇರಿಕೊಂಡ ರಿಯಾನ್ ರಿಕಲ್ಟನ್ (33;21ಎ) ತಂಡದ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿದರು. ಒಂದು ವಿಕೆಟ್‌ಗೆ 126 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ತಂಡಕ್ಕೆ ಎಡಗೈ ಸ್ಪಿನ್ನರ್‌ ಅಂಶ್‌ ಪಟೇಲ್‌ (31ಕ್ಕೆ 3) ಕಡಿವಾಣ ಹಾಕುವ ಪ್ರಯತ್ನ ನಡೆಸಿದರು. 12 ರನ್‌ಗಳ ಅಂತರದಲ್ಲಿ ಮರ್ಕರಂ, ರಿಕಲ್ಟನ್ ಮತ್ತು ಡೆವಾಲ್ಡ್ ಬ್ರೆವಿಸ್ (6) ಅವರಿಗೆ ಅಂಶ್‌ ಪೆವಿಲಿಯನ್ ದಾರಿ ತೋರಿಸಿದರು. 

ಈ ಹಂತದಲ್ಲಿ ಡೇವಿಡ್‌ ಮಿಲ್ಲರ್‌ (ಔಟಾಗದೇ 39;23ಎ) ಮತ್ತು ಟ್ರಿಸ್ಟನ್‌ ಸ್ಟಬ್ಸ್‌ (ಔಟಾಗದೇ 34;19ಎ) ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ನಡೆಸಿದ ಅವರು ಮುರಿಯದ ಐದನೇ ವಿಕೆಟ್‌ ಜೊತೆಯಾಟದಲ್ಲಿ 75 (39ಎ) ರನ್‌ ಸೇರಿಸಿದರು. ಹೀಗಾಗಿ, ದಕ್ಷಿಣ ಆಫ್ರಿಕಾ ತಂಡವು 4 ವಿಕೆಟ್‌ಗೆ 213 ರನ್‌ ಗಳಿಸಿತು. ಇದು ಈ ವರ್ಷದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಈವರೆಗಿನ ಅತ್ಯಧಿಕ ಮೊತ್ತವಾಗಿದೆ.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 213 (ಏಡನ್‌ ಮರ್ಕರಂ 59, ಕ್ವಿಂಟನ್‌ ಡಿಕಾಕ್‌ 25, ರಿಯಾನ್ ರಿಕಲ್ಟನ್ 33, ಡೇವಿಡ್‌ ಮಿಲ್ಲರ್‌ ಔಟಾಗದೇ 39, ಟ್ರಿಸ್ಟನ್‌ ಸ್ಟಬ್ಸ್‌ ಔಟಾಗದೇ 34; ಅಂಶ್‌ ಪಟೇಲ್‌ 31ಕ್ಕೆ 3)

ಕೆನಡಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156 (ನವನೀತ್ ಧಲಿವಾಲ್ 64, ಹರ್ಷ್ ಥಾಕರ್ 33; ಲುಂಗಿ ಎನ್‌ಗಿಡಿ 31ಕ್ಕೆ 4, ಮಾರ್ಕೊ ಯಾನ್ಸೆನ್‌ 30ಕ್ಕೆ 2). ಪಂದ್ಯದ ಆಟಗಾರ: ಲುಂಗಿ ಎನ್‌ಗಿಡಿ

ಅರ್ಧಶತಕ ದಾಖಲಿಸಿದ ಏಡನ್‌ ಮರ್ಕರಂ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.