ADVERTISEMENT

ಮ್ಯಾಚ್‌ ಫಿಕ್ಸಿಂಗ್‌: ನುವಾನ್‌ ಜೊಯ್ಸಾಗೆ ಆರು ವರ್ಷ ನಿಷೇಧ

ಪಿಟಿಐ
Published 28 ಏಪ್ರಿಲ್ 2021, 13:42 IST
Last Updated 28 ಏಪ್ರಿಲ್ 2021, 13:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವೇಗಿ ಹಾಗೂ ಕೋಚ್ ನುವಾನ್ ಜೊಯ್ಸಾ ಮೇಲೆ ಆರು ವರ್ಷಗಳ ನಿಷೇಧ ಹೇರಲಾಗಿದೆ. ಭಾರತದ ಶಂಕಿತ ಬುಕಿಯೊಬ್ಬರು ಸಂಪರ್ಕಿಸಿದ್ದನ್ನು ಬಹಿರಂಗಪಡಿಸದ ಕಾರಣಕ್ಕೂ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಜೊಯ್ಸಾಗೆ ಈ ಶಿಕ್ಷೆ ವಿಧಿಸಿದೆ.

ಜೊಯ್ಸಾ ಮೇಲಿನ ನಿಷೇಧವು, ಅವರು ತಾತ್ಕಾಲಿಕವಾಗಿ ಅಮಾನತುಗೊಂಡ 2018ರ ಅಕ್ಟೋಬರ್‌ 31ರಿಂದಲೇ ಪೂರ್ವಾನ್ವಯವಾಗಲಿದೆ.

‘ರಾಷ್ಟ್ರೀಯ ತಂಡದ ಕೋಚ್ ಆಗಿ ಜೊಯ್ಸಾ ಮಾದರಿಯಾಗಬೇಕಿತ್ತು. ಬದಲಾಗಿ ಅವರು ಭ್ರಷ್ಟಾಚಾರಿಯೊಂದಿಗೆ ಭಾಗಿಯಾಗಿ ಇತರರನ್ನು ಭ್ರಷ್ಟರನ್ನಾಗಿಸಲು ಯತ್ನಿಸಿದರು‘ ಎಂದು ಐಸಿಸಿ ಇಂಟಿಗ್ರೆಟಿ ಘಟಕದ ಮುಖ್ಯ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

ADVERTISEMENT

42 ವರ್ಷದ ಜೊಯ್ಸಾ ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2017ರಲ್ಲಿ ಯುಎಇಯಲ್ಲಿ ನಡೆದ ಟಿ–10 ಟೂರ್ನಿಯೊಂದರಲ್ಲಿ ಫಿಕ್ಸಿಂಗ್‌ಗೆ ಪ್ರಯತ್ನಿಸಿದರು ಎನ್ನಲಾಗಿದ್ದು, 2018ರಲ್ಲಿ ತಂಡದ ಬೌಲಿಂಗ್ ಕೋಚ್ ಆಗಿದ್ದ ವೇಳೆ ಅವರ ಮೇಲೆ ಆರೋಪವನ್ನು ದಾಖಲಿಸಲಾಗಿತ್ತು.

ಶ್ರೀಲಂಕಾದ ಆಟಗಾರರು ಒಬ್ಬರ ಹಿಂದೆ ಒಬ್ಬರಾಗಿ ಭ್ರಷ್ಟಾಚಾರ ಆರೋಪದ ಮೇಲೆ ಇತ್ತೀಚೆಗೆ ನಿಷೇಧಕ್ಕೆ ಒಳಪಡುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಜೊಯ್ಸಾ.

ಇತ್ತೀಚೆಗೆ ದಿಲ್ಹಾರ ಲೋಕುಹೆಟ್ಟಿಗೆ ಭ್ರಷ್ಟಾಚಾರ ಆರೋಪದಲ್ಲಿ ಎಂಟು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರ ಮೇಲೆ 2019ರಲ್ಲಿ ಎರಡು ವರ್ಷ ನಿಷೇಧ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.