ADVERTISEMENT

ಏಕದಿನ ಕ್ರಿಕೆಟ್ ಸರಣಿ: ಶ್ರೀಲಂಕಾ ಎಗೆ ‘ಮೊದಲ’ ಜಯ

ಶ್ರೀಕಾಂತ ಕಲ್ಲಮ್ಮನವರ
Published 11 ಜೂನ್ 2019, 7:44 IST
Last Updated 11 ಜೂನ್ 2019, 7:44 IST
ಶತಕ ಗಳಿಸಿದ ಚೋಪ್ರಾ ಬ್ಯಾಟಿಂಗ್ ಶೈಲಿ –ಬಿಸಿಸಿಐ ಚಿತ್ರ
ಶತಕ ಗಳಿಸಿದ ಚೋಪ್ರಾ ಬ್ಯಾಟಿಂಗ್ ಶೈಲಿ –ಬಿಸಿಸಿಐ ಚಿತ್ರ   

ಬೆಳಗಾವಿ: ಹತ್ತು ಓವರ್‌ಗಳಲ್ಲಿ ಕೇವಲ 36 ರನ್‌ ನೀಡಿ ಐದು ವಿಕೆಟ್‌ ಕಬಳಿಸಿದ ಚಮಿಕಾ ಕರುಣಾರತ್ನೆ ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದರು.

ಇದರ ನೆರವಿನಿಂದ ಶ್ರೀಲಂಕಾ ‘ಎ’ ತಂಡ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ‘ಎ’ತಂಡದ ವಿರುದ್ಧ ಜಯಿಸಿತು.

ಸತತ ಎರಡು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಶ್ರೀಲಂಕಾಕ್ಕೆ ಇದು ಸಮಾಧಾನಕರ ಜಯ. ಪಂದ್ಯ ಸೋತರೂ ಐದು ಪಂದ್ಯಗಳ ಸರಣಿಯಲ್ಲಿ ಭಾರತ ‘ಎ’ 2–1ರ ಮುನ್ನಡೆ ಕಾಯ್ದುಕೊಂಡಿತು.

ADVERTISEMENT

ಆಟೊನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ಶ್ರೀಲಂಕಾ ತಂಡ ಆಲ್‌ರೌಂಡ್ ಆಟವಾಡಿತು. ಹೀಗಾಗಿ ಆರು ವಿಕೆಟ್‌ಗಳ ಜಯ ಒಲಿಯಿತು.

ಮೊದಲು ಬ್ಯಾಟ್‌ ಮಾಡಿದ ಭಾರತ ‘ಎ’ ತಂಡದವರು 292 ರನ್‌ ಗಳಿಸಿದರು.

ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ‘ಎ’ 40 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿದ್ದ ಸಂದರ್ಭದಲ್ಲಿ ಮಳೆ ಸುರಿಯಿತು. ಮಳೆ ಬಿರುಸು ಪಡೆದುಕೊಂಡ ಕಾರಣ ಡಕ್ವರ್ಥ್‌ ಲೂಯಿಸ್‌ ನಿಯಮ ಅನ್ವಯಿಸಿ 46 ಓವರ್‌ಗಳಲ್ಲಿ 265 ರನ್‌ಗಳ ಪರಿಷ್ಠತ ಗುರಿ ನೀಡಲಾಯಿತು. ತಂಡ 4ನೇ ಓವರ್‌ನಲ್ಲಿ ಗುರಿ ತಲುಪಿತು.

ನಿಧಾನಗತಿಯ ಬ್ಯಾಟಿಂಗ್‌: ಟಾಸ್‌ ಗೆದ್ದ ಭಾರತ ‘ಎ’ ತಂಡ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕ ಇಶಾನ್‌ ಕಿಶನ್ ಹಾಗೂ ಪ್ರಶಾಂತ ಎಸ್‌. ಚೋಪ್ರಾ ಮೊದಲ ವಿಕೆಟ್‌ಗೆ 72 ರನ್‌ ಸೇರಿಸಿದರು.

ಇಶಾನ್‌ ಔಟಾದ ನಂತರ ಚೋಪ್ರಾ ಜೊತೆಗೂಡಿದ ದೀಪಕ್‌ ಹೂಡಾ 105 ಎಸೆತಗಳಲ್ಲಿ 109 ರನ್‌ಗಳನ್ನು ಕಲೆ ಹಾಕಿದರು.

ಚೋಪ್ರಾ 125 ಎಸೆತಗಳಲ್ಲಿ 129 ರನ್‌ ಗಳಿಸಿದರು. ದೀಪಕ್‌ ಹೂಡ ಅರ್ಧ ಶತಕ ಪೂರೈಸಿದ ನಂತರ ಬಿರುಸಿನ ಆಟಕ್ಕೆ ಇಳಿದರು.

ಇವರಿಬ್ಬರು ವಾಪಸಾದ ನಂತರ ಯಾರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ತಳವೂರಲು ಆಗಲಿಲ್ಲ. ಶಿವಂ ದುಬೆ (28), ವಾಷಿಂಗ್ಟನ್‌ ಸುಂದರ್‌ (26) ಸ್ವಲ್ಪ ಪ್ರತಿರೋಧ ಒಡ್ಡಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 50 ಓವರ್‌ಗಳಲ್ಲಿ 8ಕ್ಕೆ 291 (ಇಶಾನ್‌ ಕಿಶನ್ 25, ಪಿ.ಎಸ್‌. ಚೋಪ್ರಾ 129, ದೀಪಕ್‌ ಹೂಡಾ 53, ಶಿವಂ ದುಬೆ 28, ವಾಷಿಂಗ್ಟನ್‌ ಸುಂದರ್‌ 26; ಇಶಾನ್ ಜಯರತ್ನೆ 20ಕ್ಕೆ1, ಲಾಹಿರು ಕುಮಾರ 61ಕ್ಕೆ1, ಚಮಿಕಾ ಕರುಣರತ್ನೆ 36ಕ್ಕೆ5); ಶ್ರೀಲಂಕಾ ‘ಎ’: 43.5 ಓವರ್‌ಗಳಲ್ಲಿ 266 (ನಿರೋಷನ್ ಡಿಕ್ವೆಲ್ಲಾ 62, ಸಂಗೀತ ಕೂರೆ 88, ಶೆಹಾನ್‌ ಜಯಸೂರ್ಯ ಔಟಾಗದೆ 66, ದಾಸುನ್‌ ಶನಕ 36; ಸಂದೀಪ್ ವಾರಿಯರ್ 74ಕ್ಕೆ1, ಶಿವಂ ದುಬೆ 27ಕ್ಕೆ2, ಶ್ರೇಯಸ್ ಗೋಪಾಲ್ 46ಕ್ಕೆ1). ಫಲಿತಾಂಶ: ಶ್ರೀಲಂಕಾ ‘ಎ’ ತಂಡಕ್ಕೆ ಆರು ವಿಕೆಟ್‌ಗಳ ಜಯ (ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ).

ಪಂದ್ಯಶ್ರೇಷ್ಠ: ಚಮಿಕ ಕರುಣಾರತ್ನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.