ಪ್ರಭಾತ್ ಜಯಸೂರ್ಯ ಸಂಭ್ರಮ...
-ಎಎಫ್‌ಪಿ ಚಿತ್ರ
ಕೊಲಂಬೊ: ಶ್ರೀಲಂಕಾ ತಂಡ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಭೋಜನ ವಿರಾಮದ ಒಳಗೆ ಬಾಂಗ್ಲಾದೇಶ ತಂಡವನ್ನು ಇನಿಂಗ್ಸ್ ಮತ್ತು 78 ರನ್‌ಗಳಿಂದ ಸೋಲಿಸಿ ಎರಡು ಪಂದ್ಯಗಳ ಸರಣಿಯನ್ನು 1–0 ಯಿಂದ ಜಯಿಸಿತು.
ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಎರಡನೇ ಇನಿಂಗ್ಸ್‌ನಲ್ಲಿ 18 ಓವರುಗಳಲ್ಲಿ 56 ರನ್ನಿಗೆ 5 ವಿಕೆಟ್ ಪಡೆದು ಆತಿಥೇಯ ತಂಡದ ಗೆಲುವಿನಲ್ಲಿ ಮಿಂಚಿದರು.
ಇನಿಂಗ್ಸ್ ಸೋಲು ತಪ್ಪಿಸಲು 211 ರನ್ ಗಳಿಸುವ ಗುರಿ ಹೊಂದಿದ್ದ ಬಾಂಗ್ಲಾದೇಶ ಮೂರನೇ ದಿನದಾಟದ ಕೊನೆಗೆ 6 ವಿಕೆಟ್‌ಗೆ 115 ರನ್ ಗಳಿಸಿತ್ತು. ಶನಿವಾರ ಆ ಮೊತ್ತಕ್ಕೆ 18 ರನ್ ಸೇರಿಸಲಷ್ಟೇ ಶಕ್ತವಾಗಿ 133 ರನ್‌ಗಳಿಗೆ ಆಟ ಮುಗಿಸಿತು.
ಈ ಪಂದ್ಯದಲ್ಲಿ 158 ರನ್ ಹೊಡೆದ ಮತ್ತು ಸರಣಿಯಲ್ಲಿ 369 ರನ್ ಕಲೆಹಾಕಿದ ಪಥುಮ್ ನಿಸಾಂಕ ಅವರು ಪಂದ್ಯದ ಪುರುಷೋತ್ತಮ ಮತ್ತು ಸರಣಿಯ ಸರ್ವೋತ್ತಮ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 247, ಶ್ರಿಲಂಕಾ: 458; ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 44.2 ಓವರುಗಳಲ್ಲಿ 133 (ಮುಷ್ಫಿಕುರ್ ರಹೀಂ 26; ಪ್ರಭಾತ್ ಜಯಸೂರ್ಯ 56ಕ್ಕೆ5, ಧನಂಜಯ ಡಿ ಸಿಲ್ವ 13ಕ್ಕೆ2, ತರಿಂದು ರತ್ನಾಯಕೆ 19ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.