ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯಟಿಸಿ) ಫೈನಲ್‌ಗೆ ಭಾರತ ತಂಡ ಅರ್ಹತೆ ಗಳಿಸದಿರಬಹುದು. ಆದರೆ ಭಾರತ ತಂಡದ ವೇಗದ ಬೌಲರ್ ಜಾವಲ್ ಶ್ರೀನಾಥ್ ಅವರು ಮಹತ್ವದ ಈ ಫೈನಲ್ ಪಂದ್ಯಕ್ಕೆ ಮ್ಯಾಚ್ ರೆಫ್ರಿಯಾಗಿ ನೇಮಕಗೊಂಡಿದ್ದಾರೆ. ಭಾರತದ ಅಂಪೈರ್ ನಿತಿನ್ ಮೆನೋನ್ ಅವರು ನಾಲ್ಕನೇ ಅಂಪೈರ್ ಆಗಿದ್ದಾರೆ.
ಲಾರ್ಡ್ಸ್‌ನಲ್ಲಿ ಜೂನ್ 11 ರಿಂದ 15ರವರೆಗೆ ನಡೆಯಲಿರುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು, ಮೊದಲ ಬಾರಿ ಫೈನಲ್ ತಲುಪಿರುವ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
ಇಂಗ್ಲೆಂಡ್‌ನ ರಿಚರ್ಡ್ ಇಲಿಂಗ್‌ವರ್ತ್ ಮತ್ತು ನ್ಯೂಜಿಲೆಂಡ್‌ನ ಕ್ರಿಸ್ ಗಫಾನಿ ಅವರು ಆನ್‌ಫೀಲ್ಡ್ ಅಂಪೈರ್ ಆಗಿರಲಿದ್ದಾರೆ.
ಪುರುಷರ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಐಸಿಸಿಯ ಹಲವು ಪ್ರಮುಖ ಪಂದ್ಯಗಳನ್ನು ನಿರ್ವಹಿಸಿರುವ ಇಂಗ್ಲೆಂಡ್‌ನ ರಿಚರ್ಡ್ ಕೆಟೆಲ್‌ಬರೊ ಅವರನ್ನು ಟಿ.ವಿ ಅಂಪೈರ್ ಆಗಿ ನೇಮಕ ಮಾಡಲಾಗಿದೆ. 2021ರಲ್ಲಿ ಮೊದಲ ಬಾರಿ ಡಬ್ಲ್ಯುಟಿಸಿ ಫೈನಲ್ (ಭಾರತ– ನ್ಯೂಜಿಲೆಂಡ್) ನಡೆದಾಗಲೂ ಅವರು ಇದೇ ಪಾತ್ರ ವಹಿಸಿದ್ದರು.
ನಿತಿನ್ ಮೆನೋನ್ ಅವರು 2021ರ ಪುರುಷರ ಟಿ20 ವಿಶ್ವಕಪ್ ಫೈನಲ್‌ಗೆ ಟಿ.ವಿ. ಅಂಪೈರ್ ಆಗಿದ್ದರು.
ಇಲಿಂಗ್‌ವರ್ತ್ ದಾಖಲೆ:
ರಿಚರ್ಡ್ ಇಲಿಂಗ್‌ವರ್ತ್ ಅವರು ಮೂರನೇ ಬಾರಿ ಡಬ್ಲ್ಯುಟಿಸಿ ಫೈನಲ್‌ಗೆ ಆನ್‌ಫೀಲ್ಡ್ ಅಂಪೈರ್ ಆಗುವ ಮೂಲಕ ಇತಿಹಾಸ ಸ್ಥಾಪಿಸಲು ಸಜ್ಜಾಗಿದ್ದಾರೆ.
ಭಾರತ ತಂಡ ಎರಡು ಬಾರಿ ಡಬ್ಲ್ಯಟಿಸಿ ಫೈನಲ್‌ನಲ್ಲಿ ಆಡಿದ್ದು, ಮೂರನೇ ಆವೃತ್ತಿಯಲ್ಲೂ ಆಡುವಂತೆ ಕಂಡಿತ್ತು. ಆದರೆ ಬಹುಭಾಗ ಮುನ್ನಡೆಯಲ್ಲಿದ್ದ ರೋಹಿತ್ ಶರ್ಮಾ ಪಡೆ 2024ರ ಕೊನೆಯಲ್ಲಿ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋತ ನಂತರ ಹಿನ್ನಡೆ ಕಂಡಿತು.
ಇಲಿಂಗ್‌ವರ್ತ್ ಅವರು 2021, 2023ರ ಫೈನಲ್ ಪಂದ್ಯ ನಿರ್ವಹಣೆಯ ಜೊತೆಗೆ ಪ್ರಮುಖ ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅವರು 2024ರಲ್ಲಿ ನಾಲ್ಕನೇ ಬಾರಿ ‘ಐಸಿಸಿ ವರ್ಷದ ಅಂಪೈರ್’ ಗೌರವಕ್ಕೆ ಪಾತ್ರರಾಗಿದ್ದು, ಡೇವಿಡ್ ಶೆಫರ್ಡ್ ಟ್ರೋಫಿ ಪುರಸ್ಕೃತರಾಗಿದ್ದರು.
ಗಫಾನಿ ಮತ್ತು ಇಲಿಂಗ್‌ವರ್ತ್ ಅವರು ಕಳೆದ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ಗೂ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.