ADVERTISEMENT

ಏಷ್ಯಾ ಕಪ್‌| ‘ಯುಎಇ’ಯಲ್ಲಿ ವಿಪರೀತ ಉಷ್ಣಾಂಶ: ಅರ್ಧ ಗಂಟೆ ತಡವಾಗಿ ಪಂದ್ಯಗಳು ಆರಂಭ

ಪಿಟಿಐ
Published 30 ಆಗಸ್ಟ್ 2025, 11:33 IST
Last Updated 30 ಆಗಸ್ಟ್ 2025, 11:33 IST
   

ದುಬೈ: ಯುಎಇಯಲ್ಲಿ ವಿಪರೀತ ಉಷ್ಣಾಂಶದ ಕಾರಣ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ 19 ಪಂದ್ಯಗಳಲ್ಲಿ 18 ಪಂದ್ಯಗಳು ನಿಗದಿಗಿಂತ ಅರ್ಧ ಗಂಟೆ ತಡವಾಗಿ ಆರಂಭವಾಗಲಿವೆ ಎಂದು ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ ಶನಿವಾರ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪಂದ್ಯಗಳು ಸ್ಥಳೀಯ ಕಾಲಮಾನ 6.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.00) ಆರಂಭವಾಗಲಿವೆ. ಟೂರ್ನಿಯು ಸೆ. 9 ರಿಂದ 28ವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದೆ.

ಮೂಲ ವೇಳಾಪಟ್ಟಿಯಂತೆ ಭಾರತದ ಕಾಲಮಾನ 7.30ಕ್ಕೆ ಪಂದ್ಯಗಳು ಆರಂಭವಾಗಬೇಕಿದ್ದವು.

ADVERTISEMENT

ಸೆ. 15ರಂದು ಅಬುಧಾಬಿಯ ಝಾಯೆದ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಯುಎಇ ಮತ್ತು ಒಮಾನ್ ನಡುವಣ ಪಂದ್ಯ ಮಾತ್ರ ನಿಗದಿಯಂತೆ ಸ್ಥಳೀಯ ಕಾಲಮಾನ 4 ಗಂಟೆಗೆ ಆರಂಭವಾಗಲಿದೆ ಎಂದು ಇಸಿಬಿಯ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಭಾರತ, ‍ಪಾಕಿಸ್ತಾನ, ಯುಎಇ ಮತ್ತು ಒಮಾನ್‌ ‘ಎ’ ಗುಂಪಿನಲ್ಲಿವೆ. ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಹಾಂಗ್‌ಕಾಂಗ್‌ ‘ಬಿ’ ಗುಂಪಿನಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.