ADVERTISEMENT

ಅಭ್ಯಾಸ ಆರಂಭಿಸಿದ ಸ್ಟೋಕ್ಸ್, ಆರ್ಚರ್‌, ಬರ್ನ್ಸ್

ಭಾರತ–ಇಂಗ್ಲೆಂಡ್‌ ಕ್ರಿಕೆಟ್‌ ಸರಣಿ: ಕ್ವಾರಂಟೈನ್ ಪೂರ್ಣಗೊಳಿಸಿದ ಮೂವರು ಆಟಗಾರರು

ಪಿಟಿಐ
Published 30 ಜನವರಿ 2021, 12:39 IST
Last Updated 30 ಜನವರಿ 2021, 12:39 IST
ಬೆನ್‌ ಸ್ಟೋಕ್ಸ್ (ಎಡ) ಮತ್ತು ಜೋಫ್ರಾ ಆರ್ಚರ್‌–ರಾಯಿಟರ್ಸ್ ಚಿತ್ರ
ಬೆನ್‌ ಸ್ಟೋಕ್ಸ್ (ಎಡ) ಮತ್ತು ಜೋಫ್ರಾ ಆರ್ಚರ್‌–ರಾಯಿಟರ್ಸ್ ಚಿತ್ರ   

ಚೆನ್ನೈ: ಭಾರತ ತಂಡದ ವಿರುದ್ಧದ ಕ್ರಿಕೆಟ್‌ ಸರಣಿಗೆ ಸಜ್ಜಾಗುತ್ತಿರುವ ಇಂಗ್ಲೆಂಡ್ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್, ವೇಗದ ಬೌಲರ್ ಜೋಫ್ರಾ ಆರ್ಚರ್‌ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ರೋರಿ ಬರ್ನ್ಸ್‌ ಅವರು ಶನಿವಾರ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಚೆಪಾಕ್ ಅಂಗಣದಲ್ಲಿ ಅಭ್ಯಾಸ ಆರಂಭಿಸಿದರು. ತಂಡದ ಇತರ ಸದಸ್ಯರು ಎರಡನೇ ಬಾರಿ ಕೋವಿಡ್–19 ಪರೀಕ್ಷೆಗೆ ಒಳಗಾದರು.

ಈ ಮೂವರೂ ಆಟಗಾರರು ಇತ್ತೀಚೆಗೆ ಕೊನೆಗೊಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ಸ್ಟೋಕ್ಸ್ ಹಾಗೂ ಆರ್ಚರ್‌ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಮೊದಲ ಮಗುವಿನ ಜನಿಸಿದ ಹಿನ್ನೆಲೆಯಲ್ಲಿ ಬರ್ನ್ಸ್ ಸರಣಿಯಿಂದ ಹಿಂದೆ ಸರಿದಿದ್ದರು.

ತಂಡದ ಇತರ ಆಟಗಾರರಿಗಿಂತ ಮೊದಲೇ ಭಾರತಕ್ಕೆ ಬಂದಿದ್ದ ಈ ಮೂವರು, ಈಗಾಗಲೇ ಮೂರು ಬಾರಿ ಕಡ್ಡಾಯ ಕೋವಿಡ್‌ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ

ADVERTISEMENT

‘ಆರ್ಚರ್‌, ಬರ್ನ್ಸ್ ಹಾಗೂ ಸ್ಟೋಕ್ಸ್ ಮುಂದಿನ ಮೂರು ದಿನಗಳು ತಾಲೀಮು ನಡೆಸಲಿದ್ದಾರೆ. ಪ್ರತಿದಿನ ಎರಡು ಗಂಟೆ ಸೀಮಿತ ಅವಧಿಗೆ ಅವರು ಅಭ್ಯಾಸ ನಡೆಸಲಿದ್ದಾರೆ‘ ಎಂದು ಇಂಗ್ಲೆಂಡ್‌ ತಂಡದ ಮಾಧ್ಯಮ ವ್ಯವಸ್ಥಾಪಕ ಡ್ಯಾನಿ ರುಬೆನ್ ತಿಳಿಸಿದ್ದಾರೆ.

‘ಇಂಗ್ಲೆಂಡ್‌ ತಂಡದ ಎಲ್ಲ ಸದಸ್ಯರು ಶುಕ್ರವಾರ ಎರಡನೇ ಬಾರಿ ಕೋವಿಡ್‌ ಟೆಸ್ಟ್ ಮಾಡಿಸಿಕೊಂಡಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ‘ ಎಂದು ರುಬೆನ್ ಹೇಳಿದರು.

ಇಂಗ್ಲೆಂಡ್ ತಂಡದ ಎಲ್ಲ ಆಟಗಾರರು ಫೆಬ್ರುವರಿ 2ರಿಂದ ಅಭ್ಯಾಸ ನಡೆಸಲಿದ್ದಾರೆ. ಭಾರತ–ಇಂಗ್ಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯವು ಫೆಬ್ರುವರಿ 5ರಂದು ಚೆನ್ನೈನಲ್ಲಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.