ADVERTISEMENT

IPL 2025 | CSK vs PBKS: ಕೊನೆಗೊಳ್ಳುವುದೇ ಸಿಎಸ್‌ಕೆ ಪರದಾಟ?

ಇಂದು ಚೆ‍ಪಾಕ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯ

ಪಿಟಿಐ
Published 30 ಏಪ್ರಿಲ್ 2025, 1:18 IST
Last Updated 30 ಏಪ್ರಿಲ್ 2025, 1:18 IST
ಎಂ.ಎಸ್‌.ಧೋನಿ
ಎಂ.ಎಸ್‌.ಧೋನಿ   

ಚೆನ್ನೈ: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಾಲಿ ಐಪಿಎಲ್‌ನಲ್ಲಿ ಪ್ಲೇಆಫ್‌ ಅವಕಾಶ ದೂರವಾಗಿದೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಪ್ರಬಲ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ‍‍ಪರದಾಟವನ್ನು ಕೊನೆಗೊಳಿಸುವ ವಿಶ್ವಾಸದಲ್ಲಿದೆ.

ಒಂಬತ್ತು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದಿರುವ ಮಹೇಂದ್ರ ಸಿಂಗ್ ಧೋನಿ ಬಳಗ ಈಗ ಅಂಕಪಟ್ಟಿಯ ತಳದಲ್ಲಿದೆ. ಇನ್ನೊಂದು ಕಡೆ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್ ಕಿಂಗ್ಸ್ ಇಷ್ಟೇ ಪಂದ್ಯಗಳಿಂದ ಐದರಲ್ಲಿ ಜಯಗಳಿಸಿದೆ. ಆಘಾತದಲ್ಲಿರುವ ಸಿಎಸ್‌ಕೆ ಮೇಲೆ ಗೆದ್ದು ತನ್ನ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಈ ಬಾರಿ ಚೆನ್ನೈ ತಂಡದ ಸಂಯೋಜನೆಗಳು ಕೈಕೊಟ್ಟಿವೆ. ಭದ್ರ ನೆಲೆ ಚೆಪಾಕ್‌ನಲ್ಲಿಯೇ ಸಾಲು ಸಾಲು ಸೋಲು ಕಂಡಿದ್ದು ತಂಡಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ. ಮೂರನೇ ಗೆಲುವಿನೊಡನೆ ಪ್ಲೇಆಫ್‌ನ ಕುಟುಕು ಆಸೆಗೆ ಜೀವತರುವ ಯತ್ನದಲ್ಲಿ ತಂಡ ಇದೆ.

ADVERTISEMENT

ಮುಖಾಮುಖಿ:

ಈ ಬಾರಿ ಚೆನ್ನೈ ತಂಡಕ್ಕೆ ತಡವಾಗಿ ಸೇರ್ಪಡೆಯಾಗಿರುವ ಯುವಮುಖ ಆಯುಷ್‌ ಮ್ಹಾತ್ರೆ ಅವರು ಅನುಭವಿ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಯಾವ ರೀತಿ ನಿಭಾಯಿಸುವರು ಎಂಬುದು ಕುತೂಹಲಕಾರಿ. ಮಧ್ಯಮ ಹಂತದ ಓವರುಗಳಲ್ಲಿ ಶಿವಂ ದುಬೆ ಮತ್ತು ಪಂಜಾಬ್‌ ಬೌಲರ್‌ ಯಜುವೇಂದ್ರ ಚಾಹಲ್ ನಡುವಣ ಮುಖಾಮುಖಿ ನಿರೀಕ್ಷಿಸಲಾಗಿದೆ.

ಕಿಂಗ್ಸ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಸದ್ಯ ಉತ್ತಮ ಲಯದಲ್ಲಿದ್ದಾರೆ. ಆರಂಭ ಆಟಗಾರರಾದ ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಸವಾಲು ಎಡಗೈ ವೇಗಿ ಖಲೀಲ್ ಅಹ್ಮದ್ ಮೇಲಿದೆ. ಕಿಂಗ್ಸ್‌ ನಾಯಕ ಅಯ್ಯರ್ ಕೂಡ ಪಂದ್ಯದ ಗತಿ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.

43 ವರ್ಷ ವಯಸ್ಸಿನ ಧೋನಿ ಅಲ್ಲೊಮ್ಮೆ, ಇಲ್ಲೊಮ್ಮೆ ಗಮನ ಸೆಳೆದಿದ್ದಾರೆ. ಗಾಯಾಳು ಋತುರಾಜ್ ಗಾಯಕವಾಡ ಅವರಿಂದ ನಾಯಕತ್ವ ವಹಿಸಿಕೊಂಡಿರುವ ಈ ಚಾಣಾಕ್ಷ ತಂತ್ರಗಾರ ತಂಡವನ್ನು ಗೆಲುವಿನ ಹಳಿಗೆ ತರಲು ಪರದಾಡುತ್ತಿದ್ದಾರೆ. ಆರಂಭ ಆಟಗಾರ ರಚಿನ್ ರವೀಂದ್ರ ಸ್ಥಿರ ಪ್ರದರ್ಶನ ನೀಡಿಲ್ಲ. ದಿಗ್ಗಜ ಆಟಗಾರರಾದ ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್ ಕೂಡ ತಂಡವನ್ನು ಕಾಪಾಡಿಲ್ಲ.

ಬ್ಯಾಟರ್‌ಗಳಾದ ವಿಜಯಶಂಕರ್, ದೀಪಕ್ ಹೂಡ ಮತ್ತು ರಾಹುಲ್ ತ್ರಿಪಾಠಿ ನಿರೀಕ್ಷೆಗೆ ತಕ್ಕಂತೆ ಆಡಿಲ್ಲದಿರುವುದು ತಂಡಕ್ಕೆ ಹಿನ್ನಡೆ ತಂದಿದೆ.

ಪಂದ್ಯ ಆರಂಭ: ರಾತ್ರಿ 7.30.‌

ಶ್ರೇಯಸ್ ಅಯ್ಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.