ADVERTISEMENT

‘ಸಿಕ್ಸ್‌ ಸಿಕ್ಸರ್‌’ನಿಂದ 600 ವಿಕೆಟ್‌ಗಳವರೆಗೆ ಸ್ಟುವರ್ಟ್ ಬ್ರಾಡ್‌ ಪಯಣ

ಗಿರೀಶದೊಡ್ಡಮನಿ
Published 31 ಜುಲೈ 2023, 5:43 IST
Last Updated 31 ಜುಲೈ 2023, 5:43 IST
ಲಂಡನ್‌ನ ಒವಲ್ ಕ್ರೀಡಾಂಗಣದಲ್ಲಿ ಆ್ಯಷಸ್ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಸ್ಟುವರ್ಟ್ ಬ್ರಾಡ್ ಅವರಿಗೆ ಆಸ್ಟ್ರೇಲಿಯಾ ಮತ್ತು  ಇಂಗ್ಲೆಂಡ್ ಆಟಗಾರರು ಗೌರವ ರಕ್ಷೆ ನೀಡಿದರು. ಬ್ರಾಡ್ ಜೊತೆಗೆ ಜಿಮ್ಮಿ ಆ್ಯಂಡರ್ಸನ್ ಕೂಡ ಇದ್ದರು 
ಲಂಡನ್‌ನ ಒವಲ್ ಕ್ರೀಡಾಂಗಣದಲ್ಲಿ ಆ್ಯಷಸ್ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಸ್ಟುವರ್ಟ್ ಬ್ರಾಡ್ ಅವರಿಗೆ ಆಸ್ಟ್ರೇಲಿಯಾ ಮತ್ತು  ಇಂಗ್ಲೆಂಡ್ ಆಟಗಾರರು ಗೌರವ ರಕ್ಷೆ ನೀಡಿದರು. ಬ್ರಾಡ್ ಜೊತೆಗೆ ಜಿಮ್ಮಿ ಆ್ಯಂಡರ್ಸನ್ ಕೂಡ ಇದ್ದರು     

ಸ್ಟುವರ್ಟ್‌ ಬ್ರಾಡ್ ಎಂದರೆ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಯುವರಾಜ್ ಸಿಂಗ್ ಕೂಡ ನೆನಪಾಗುತ್ತಾರೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬ್ರಾಡ್ ಹಾಕಿದ ಒಂದು ಓವರ್‌ನ ಎಲ್ಲ ಆರು ಎಸೆತಗಳನ್ನೂ ಸಿಕ್ಸರ್‌ಗೆ ಎತ್ತಿದ್ದರು ಯುವರಾಜ್ ಸಿಂಗ್. ಬ್ರಾಡ್ ವೃತ್ತಿಜೀವನ ಆಗಲೇ ಮುಗಿಯಿತು ಎಂದುಕೊಂಡವರು ಬಹಳಷ್ಟು ಮಂದಿ ಇದ್ದರು.  ಏಕೆಂದರೆ; ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಒಂದು ವರ್ಷ ಕಳೆಯುವ ಮುನ್ನವೇ ಯುವಿಯ ಪ್ರಹಾರಕ್ಕೆ ತುತ್ತಾಗಿದ್ದರು.

ಆದರೆ, ಹಾಗಾಗಲಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಬ್ರಾಡ್ ಪ್ರತಿಭೆ ಮತ್ತು ಛಲ ಬಿಡದ ಪರಿಶ್ರಮ ಗುಣಗಳಿಗೆ ಮನ್ನಣೆ ನೀಡಿತು. ಅದೇ ವರ್ಷ ಟೆಸ್ಟ್ ಕ್ರಿಕೆಟ್‌ ಪದಾರ್ಪಣೆ ಮಾಡಲು ಅವಕಾಶ ನೀಡಿತು. ಸ್ಟುವರ್ಟ್‌ ಬ್ರಾಡ್ ಕೂಡ ತಮ್ಮ ಮಂಡಳಿಯ ವಿಶ್ವಾಸ ಉಳಿಸಿಕೊಂಡರು. ಯಾವಾಗಲೂ ಹೆಡ್‌ಬ್ಯಾಂಡ್ ಕಟ್ಟಿಕೊಂಡು ಕಣಕ್ಕಿಳಿದ ಅವರು ತಮ್ಮ ಭುಜಬಲ ಪರಾಕ್ರಮ ಮೆರೆದರು. ಅಂದಿನಿಂದ ಇಂದಿನವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 600 ವಿಕೆಟ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಈಗ 37 ವರ್ಷದ ಬ್ರಾಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಾರೆ. ಸೋಮವಾರ ನಡೆಯಲಿರುವ ಆ್ಯಷಸ್ ಸರಣಿಯ ಕೊನೆಯ ಪಂದ್ಯದ ಅಂತಿಮ ದಿನದಾಟದ ನಂತರ ಅವರೂ ನಿರ್ಗಮಿಸಲಿದ್ದಾರೆ.

ಆಪ್ತವಲಯದಲ್ಲಿ ಬ್ರಾಡಿ ಎಂದೇ ಕರೆಸಿಕೊಳ್ಳುವ ಈ ‘ಚಾಕೋಲೆಟ್ ಹೀರೊ‘ ಮುಖಭಾವ ಹೊಂದಿರುವ ಕ್ರಿಕೆಟಿಗ. ಕ್ರಿಕೆಟ್‌ ಕುಟುಂಬದ ಕುಡಿಯೂ ಹೌದು. ಐಸಿಸಿ ರೆಫರಿಯಾಗಿರುವ ಅಪ್ಪ ಕ್ರಿಸ್ ಬ್ರಾಡ್ ಮಾರ್ಗದರ್ಶನವೂ ಅವರನ್ನು ಕ್ರಿಕೆಟಿಗನನ್ನಾಗಿ ರೂಪಿಸಿತು. ಆದರೆ ಅವರು ’ಅಪ್ಪನ ಮಗ‘ ಆಗಿ ಉಳಿಯಲಿಲ್ಲ. ವಿಶ್ವದ ಪ್ರಮುಖ ಕ್ರಿಕೆಟಿಗರಲ್ಲಿ ಗೌರವಯುತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ADVERTISEMENT

ಅವರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಎಲ್ಲ ದೇಶಗಳ ತಂಡಗಳಲ್ಲಿಯೂ ಶ್ರೇಷ್ಠ ಬ್ಯಾಟರ್‌ಗಳಿದ್ದರು. ಭಾರತ ತಂಡದಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಮಹೇಂದ್ರಸಿಂಗ್ ಧೋನಿ ಇದ್ದರು. ಆಸ್ಟ್ರೇಲಿಯಾದಲ್ಲಿ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದಲ್ಲಿ ಎಬಿ ಡಿವಿಲಿಯರ್ಸ್, ಶ್ರೀಲಂಕಾದಲ್ಲಿ ಮಹೇಲಾ ಜಯವರ್ಧನೆ, ದಿಲ್ಶಾನ್ ತಿಲಕರತ್ನೆ ಅವಂತಹ ಬ್ಯಾಟರ್‌ಗಳು ಗರ್ಜಿಸುತ್ತಿದ್ದರು. ಅವರೆಲ್ಲರ ಎದುರು ಬೌಲಿಂಗ್ ಮಾಡುವುದು ಸಾಮಾನ್ಯ ಮಾತಲ್ಲ. ಆ ಸವಾಲುಗಳನ್ನು ಗೆದ್ದವರು ಬ್ರಾಡಿ. 167 ಟೆಸ್ಟ್, 121 ಏಕದಿನ ಮತ್ತು 56 ಟಿ20 ಪಂದ್ಯಗಳನ್ನು ಆಡಿದರು.

ಇಂಗ್ಲೆಂಡ್‌ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಜೊತೆಗೆ ಇವರು ಬೌಲಿಂಗ್ ವಿಭಾಗಕ್ಕೆ ನೀಡಿದ ಕೊಡುಗೆ ಹಲವು. ಈ ಜೋಡಿಯು ಒಂದು ಹಂತದಲ್ಲಿ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವೇ ಆಗಿತ್ತು. ಟೆಸ್ಟ್‌ನಲ್ಲಿ ಆರನೂರು ವಿಕೆಟ್‌ಗಳ ಗಡಿ ದಾಟಿದ್ದು ಈ ಇಬ್ಬರು ವೇಗಿಗಳು ಮಾತ್ರ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮತ್ತು ಭಾರತದ ಅನಿಲ್ ಕುಂಬ್ಳೆ (619) ಈ ಸಾಧನೆ ಮಾಡಿರುವ ಸ್ಪಿನ್ನರ್‌ಗಳಾಗಿದ್ದಾರೆ.

ಹೊಸಚೆಂಡಿನಲ್ಲಿ ಮೊನಚಾದ ಸ್ವಿಂಗ್ ಹಾಕುವ ಕಲೆ ಕರಗತ ಮಾಡಿಕೊಂಡಿದ್ದ ಬ್ರಾಡಿ, ರಿವರ್ಸ್ ಸ್ವಿಂಗ್‌ನಲ್ಲಿಯೂ ಎತ್ತಿದ ಕೈ. ಅದಕ್ಕಾಗಿಯೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ಐದು ಮತ್ತು ಐದಕ್ಕಿಂತ ಹೆಚ್ಚು ವಿಕೆಟ್‌ ಗೊಂಚಲುಗಳನ್ನು 20 ಬಾರಿ ಗಳಿಸಿದ್ದಾರೆ. ಎಂಟು ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಂಡವು ಆ್ಯಷಸ್ ಟೆಸ್ಟ್ ಪಂದ್ಯದ ಇನಿಂಗ್ಸ್‌ನಲ್ಲಿ 60 ರನ್‌ಗಳಿಗೆ ಆಲೌಟ್ ಆಗಲು ಕಾರಣರಾಗಿದ್ದರು. ಆ ಪಂದ್ಯದಲ್ಲಿ 15 ರನ್‌ಗಳಿಗೆ 8 ವಿಕೆಟ್ ಗಳಿಸಿದ್ದರು.

ಬ್ಯಾಟಿಂಗ್‌ನಲ್ಲಿಯೂ ಅವರು ತಮ್ಮ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ. 8 ಅಥವಾ 9ನೇ ಕ್ರಮಾಂಕದಲ್ಲಿ ಆಡಿದರೂ ಟೆಸ್ಟ್‌ನಲ್ಲಿ 3655 ರನ್‌ಗಳನ್ನು ಗಳಿಸಿದ್ದಾರೆ. ಒಂದು ಶತಕ ಕೂಡ ಇದೆ. 13 ವರ್ಷಗಳಹಿಂದೆ ಲಾರ್ಡ್ಸ್‌ನಲ್ಲಿ ಪಾಕಿಸ್ತಾನ ಎದುರು 169 ರನ್‌ ಗಳಿಸಿದ್ದು ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್.

ಅವರ ಬ್ಯಾಟಿಂಗ್, ಬೌಲಿಂಗ್ ಸಾಧನೆಗಳಾಚೆಯೂ ಗಮನಾರ್ಹ ವ್ಯಕ್ತಿತ್ವದ ಆಟಗಾರ.
‘ಟೆಸ್ಟ್ ಕ್ರಿಕೆಟ್‌ ನನಗೆ ಹವ್ಯಾಸದಂತೆ. ಅದನ್ನು ಬಿಟ್ಟಿರಲು ಕಷ್ಟ. ಫ್ರ್ಯಾಂಚೈಸಿ ಲೀಗ್‌ಗಳನ್ನು ಬಿಡಲು ಸಿದ್ಧ. ಅದರೆ ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದ ಅಪರೂಪದ ಆಟಗಾರ.

ಐಪಿಎಲ್ ಮತ್ತಿತರ ಲೀಗ್ ಟೂರ್ನಿಗಳಲ್ಲಿ ಆಡಲು ಕೆಲವು ಆಟಗಾರರು ತಮ್ಮ ದೇಶದ ಮಂಡಳಿಗಳ ಗುತ್ತಿಗೆಯನ್ನೇ ತಿರಸ್ಕರಿಸುತ್ತಿರುವ ಈ ಕಾಲಘಟ್ಟದಲ್ಲಿಯೂ ಸಾಂಪ್ರದಾಯಿಕ ಕ್ರಿಕೆಟ್‌ಗಾಗಿ ತುಡಿಯುವ ಸ್ಟುವರ್ಟ್ ಬ್ರಾಡ್ ಯುವ ಆಟಗಾರರಿಗೆ ಮಾದರಿಯಾಗುತ್ತಾರೆ. ‘ಸಿಕ್ಸ್‌ ಸಿಕ್ಸರ್‌‘ ಪೆಟ್ಟಿನಿಂದ ಚೇತರಿಸಿಕೊಂಡು ಬೆಳೆದು ನಿಂತ ಪರಿಯೂ ಅನುಕರಣಿಯವೇ ಆಗುತ್ತದೆ.

ಸ್ಟುವರ್ಟ್‌ ಬ್ರಾಡ್
 ಸ್ಟುವರ್ಟ್ ಬ್ರಾಡ್ ಅವರ ಜೀವನಸಂಗಾತಿ ಮೊಲೀ ಕಿಂಗ್ ಮತ್ತು ಮಗಳು ಅನಾಬೆಲ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.