ADVERTISEMENT

ಶ್ರೀಲಂಕಾದಲ್ಲಿ ಐಪಿಎಲ್‌ ಆಯೋಜಿಸುವುದು ಸೂಕ್ತ: ಸುನಿಲ್ ಗವಾಸ್ಕರ್

ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 2:05 IST
Last Updated 14 ಜೂನ್ 2020, 2:05 IST
ಸುನಿಲ್‌ ಗಾವಸ್ಕರ್‌
ಸುನಿಲ್‌ ಗಾವಸ್ಕರ್‌   

ನವದೆಹಲಿ (ಪಿಟಿಐ): ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ 13ನೇ ಆವೃತ್ತಿಯನ್ನು ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಶ್ರೀಲಂಕಾದಲ್ಲಿ ನಡೆಸುವುದು ಸೂಕ್ತ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್‌ ಗಾವಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ.

‘ಈಗಾಗಲೇ ಮಳೆಗಾಲ ಶುರು ವಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಐಪಿಎಲ್‌ ಆಯೋಜಿಸಿದರೆ ಬಹುತೇಕ ಪಂದ್ಯಗಳು ಮಳೆಗೆ ಆಹುತಿಯಾಗುವ ಸಾಧ್ಯತೆ ಇದೆ. ಶ್ರೀಲಂಕಾ ಅಥವಾ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಪಂದ್ಯಗಳನ್ನು ನಡೆಸಿದರೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಅಲ್ಲಿನ ಸರ್ಕಾರವು ಹಸಿರು ನಿಶಾನೆ ತೋರಿದೆ. ಕ್ರೀಡಾಂಗಣಗಳಲ್ಲಿರುವ ಪ್ರೇಕ್ಷಕರ ಆಸನ ಸಾಮರ್ಥ್ಯದ ಶೇ 25ರಷ್ಟು ಮಂದಿಗೆ ಪ್ರವೇಶಾವಕಾಶ ನೀಡಲು ನಿಯಮಗಳನ್ನು ರೂಪಿಸುತ್ತಿರುವುದಾಗಿ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಟ್ವೆಂಟಿ–20 ವಿಶ್ವಕಪ್‌, ನಿಗದಿಯಂತೆ ಕಾಂಗರೂ ನಾಡಿನಲ್ಲೇ ನಡೆಯುವ ನಿರೀಕ್ಷೆ ಇದೆ. ಒಂದೊಮ್ಮೆ ಅಕ್ಟೋಬರ್‌ನಲ್ಲಿ ವಿಶ್ವಕಪ್‌ ನಡೆದರೆ ಎಲ್ಲಾ ತಂಡಗಳು ಮೂರು ವಾರ ಮುಂಚಿತವಾಗಿ ಆಸ್ಟ್ರೇಲಿಯಾಕ್ಕೆ ಹೋಗಿ 14 ದಿನಗಳ ಸ್ವಯಂ ಪ್ರತ್ಯೇಕವಾಸದಲ್ಲಿರಬೇಕಾಗುತ್ತದೆ’ ಎಂದಿದ್ದಾರೆ.

ADVERTISEMENT

‘ವಿಶ್ವಕಪ್‌ ಆಯೋಜನೆಯಾದರೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಐಪಿಎಲ್‌ ನಡೆಸುವ ಯೋಜನೆಯನ್ನು ಕೈಬಿಡಬೇಕಾಗಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.