ADVERTISEMENT

ಕೊಹ್ಲಿ, ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಲು ಒಂದು ಇನ್ನಿಂಗ್ಸ್ ಸಾಕು: ಗವಾಸ್ಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 9:37 IST
Last Updated 22 ಏಪ್ರಿಲ್ 2022, 9:37 IST
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (ಪಿಟಿಐ ಸಂಗ್ರಹ ಚಿತ್ರ)
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (ಪಿಟಿಐ ಸಂಗ್ರಹ ಚಿತ್ರ)   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಿಂದ ರನ್‌ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಬೆಂಬಲ ಸೂಚಿಸಿದ್ದಾರೆ.

ಇಬ್ಬರೂ ಆಟಗಾರರು ಮತ್ತೆ ಅದ್ಭುತವಾಗಿ ಫಾರ್ಮ್‌ಗೆ ಮರಳಲಿದ್ದಾರೆ. ಅವರು ಫಾರ್ಮ್‌ಗೆ ಮರಳಲು ಕೇವಲ ಒಂದು ಇನ್ನಿಂಗ್ಸ್‌ ಸಾಕು ಎಂದು ‘ಸ್ಟಾರ್ ಸ್ಪೋರ್ಟ್ಸ್’ಗೆ ಗವಾಸ್ಕರ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ತಂಡಕ್ಕೆ ಗಮನಾರ್ಹ ಕೊಡುಗೆ ನೀಡಿಲ್ಲ. ಒಂದೂ ಅರ್ಧಶತಕ ದಾಖಲಿಸಿಲ್ಲ.

ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿರುವವರಲ್ಲಿ ಒಬ್ಬರಾಗಿರುವ ಕೊಹ್ಲಿ ಈ ಬಾರಿ ಕೇವಲ 119 ರನ್ ಗಳಿಸಿದ್ದು, 48 ಗರಿಷ್ಠ ರನ್ ಆಗಿದೆ. ರೋಹಿತ್ ಕೇವಲ 114 ರನ್ ಗಳಿಸಿದ್ದು, ಸರಾಸರಿ 20ಕ್ಕಿಂತ ಕಡಿಮೆ ಇದೆ.

ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿದರೆ ಮುಂಬೈ ಇಂಡಿಯನ್ಸ್‌ ಅದೃಷ್ಟವೇ ಬದಲಾಗಲಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

‘ಅವರು (ಮುಂಬೈ ಇಂಡಿಯನ್ಸ್) ಸದ್ಯ ಅಂಕಪಟ್ಟಿಯಲ್ಲಿ ಕೆಳ ಹಂತದಲ್ಲಿದ್ದಾರೆ. ಅವರದ್ದು ಚಾಂಪಿಯನ್ ತಂಡ. 5 ಬಾರಿ ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಹತಾಶೆಯಾಗುವುದು ಸಹಜ. ಸತತ 7 ಪಂದ್ಯಗಳನ್ನು ಸೋತಿರುವುದರಿಂದ ಅವರು ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆಯೇ. ಈ ಹಿಂದೆ ಅವರು (ರೋಹಿತ್ ಶರ್ಮಾ) ಹೇಳಿದ್ದಂತೆಯೇ ತಂಡದ ಬ್ಯಾಟರ್‌ಗಳು ಹೆಚ್ಚು ರನ್ ಗಳಿಸಬೇಕಿದೆ. ತಂಡದ ಪ್ರದರ್ಶನ ಮೂಡಿಬರಬೇಕಿದೆ’ ಎಂದು ಗವಾಸ್ಕರ್ ಹೇಳಿದ್ದಾರೆ.

ಕೊಹ್ಲಿಗೂ ಫಾರ್ಮ್ ಸಮಸ್ಯೆ. ಇವರಿಬ್ಬರೂ ಫಾರ್ಮ್‌ಗೆ ಮರಳಲು ಒಂದು ಇನ್ನಿಂಗ್ಸ್ ಸಾಕು. ಒಂದು ಇನ್ನಿಂಗ್ಸ್‌ನಲ್ಲಿ ಅವರು 30 ರನ್ ಗಳಿಸಿದರೆ ಸಾಕು. ನಂತರ ಅವರು ದೊಡ್ಡ ಮೊತ್ತ ಕಲೆಹಾಕುತ್ತಾರೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.