ADVERTISEMENT

ಮಹಿಳೆಯರಿಗೆ ಪ್ರತ್ಯೇಕ ಐಪಿಎಲ್‌ ನಡೆಸಲಿ: ಸುನಿಲ್‌ ಗಾವಸ್ಕರ್ ಸಲಹೆ

ಪಿಟಿಐ
Published 9 ಮಾರ್ಚ್ 2020, 19:30 IST
Last Updated 9 ಮಾರ್ಚ್ 2020, 19:30 IST
ಸುನಿಲ್‌ ಗಾವಸ್ಕರ್‌ (ಎಡ) ಮತ್ತು ಸಚಿನ್‌ ತೆಂಡೂಲ್ಕರ್‌
ಸುನಿಲ್‌ ಗಾವಸ್ಕರ್‌ (ಎಡ) ಮತ್ತು ಸಚಿನ್‌ ತೆಂಡೂಲ್ಕರ್‌   

ನವದೆಹಲಿ: ‘ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮುಂದಿನ ವರ್ಷದಿಂದಲೇ ಮಹಿಳಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಬೇಕು. ಇದರಿಂದ ಪ್ರತಿಭಾನ್ವೇಷಣೆ ಸುಲಭವಾಗುತ್ತದೆ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ನಡೆದಿದ್ದ ಟ್ವೆಂಟಿ–20 ವಿಶ್ವಕಪ್‌ ಫೈನಲ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಮುಂದಾಳತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 85ರನ್‌ಗಳಿಂದ ಸೋತಿತ್ತು.

‘ಭಾರತದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತ ಆಟಗಾರ್ತಿಯರು ಇದ್ದಾರೆ. ಈಗಿರುವ ತಂಡ ಬಲಿಷ್ಠವಾಗಿದೆ. ಮಹಿಳೆಯರಿಗಾಗಿಯೇ ಪ್ರತ್ಯೇಕ ಐಪಿಎಲ್‌ ಆಯೋಜಿಸಿದರೆ ಇನ್ನಷ್ಟು ಪ್ರತಿಭೆಗಳನ್ನು ಹೆಕ್ಕಬಹುದು. ಇದರಿಂದ ತಂಡದ ಶಕ್ತಿ ಇಮ್ಮಡಿಸಲಿದೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಹೆಚ್ಚೆಚ್ಚು ಪ್ರಶಸ್ತಿಗಳನ್ನು ಗೆಲ್ಲಲೂ ಸಹಕಾರಿಯಾಗಲಿದೆ. ಈ ವಿಷಯವನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಗಾವಸ್ಕರ್‌ ಹೇಳಿದ್ದಾರೆ.

ADVERTISEMENT

‘ಐಪಿಎಲ್‌ ವೇಳೆ ಬಿಸಿಸಿಐ, ಮಹಿಳಾ ಟಿ–20 ಚಾಲೆಂಜರ್‌ ಟೂರ್ನಿ ನಡೆಸುತ್ತಿದೆ. ಇದರಲ್ಲಿ ನಾಲ್ಕು ತಂಡಗಳಷ್ಟೇ ಪಾಲ್ಗೊಳ್ಳುತ್ತಿವೆ. ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ), ಪುರುಷರಂತೆ ಮಹಿಳೆಯರಿಗೆ ಪ್ರತ್ಯೇಕ ಬಿಗ್‌ ಬ್ಯಾಷ್‌ ಲೀಗ್‌ (ಬಿಬಿಎಲ್‌) ಆಯೋಜಿಸುತ್ತಿದೆ. ಹೀಗಾಗಿ ಆ ತಂಡ ಬಲಿಷ್ಠವಾಗಿದೆ. ನಮ್ಮಲ್ಲೂ ಮಹಿಳಾ ಐಪಿಎಲ್‌ ನಡೆಸಿದರೆ ಸಾಕಷ್ಟು ಮಂದಿಗೆ ಆಡುವ ಅವಕಾಶ ಸಿಗಲಿದೆ. ತಂಡದ ಶಕ್ತಿಯೂ ಹೆಚ್ಚುತ್ತದೆ’ ಎಂದಿದ್ದಾರೆ.

‘ಬಿಸಿಸಿಐ, ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಅಗತ್ಯವಿರುವ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ವಿಶ್ವಕಪ್‌ಗೆ ಒಂದೂವರೆ ತಿಂಗಳು ಬಾಕಿ ಇರುವಾಗ ಕಾಂಗರೂ ನಾಡಿನಲ್ಲಿ ತ್ರಿಕೋನ ಸರಣಿ ಆಯೋಜಿಸಿದ್ದು ಉತ್ತಮ ನಿರ್ಧಾರ. ಇದರಿಂದಾಗಿ ಹರ್ಮನ್‌ಪ್ರೀತ್‌ ಪಡೆಯ ಆಟಗಾರ್ತಿಯರು ಆಸ್ಟ್ರೇಲಿಯಾದ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗಿತ್ತು’ ಎಂದು ನುಡಿದಿದ್ದಾರೆ.

ಶಫಾಲಿ ಕಣ್ಣೀರು ಹಾಕುವುದನ್ನು ನೋಡುವುದು ಕಷ್ಟ: ‘ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಸೋತ ಬಳಿಕ ಆ ತಂಡದ ಶಫಾಲಿ ವರ್ಮಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅವರನ್ನು ಆ ಪರಿಸ್ಥಿತಿಯಲ್ಲಿ ನೋಡಿ ಮನಸ್ಸು ಭಾರವಾಯಿತು’ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಬ್ರೆಟ್‌ ಲೀಗ್‌ ಹೇಳಿದ್ದಾರೆ.

‘ಶಫಾಲಿ ಪಾಲಿಗೆ ಈ ವಿಶ್ವಕಪ್‌ ಸವಾಲಿನದ್ದಾಗಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಅವರಾಡಿದ ರೀತಿ ಮೆಚ್ಚುವಂತಹುದು. ಹೊಸ ವಿಷಯಗಳನ್ನು ಕಲಿಯಲು ಈ ಟೂರ್ನಿ ಅವರಿಗೆ ಉತ್ತಮ ವೇದಿಕೆಯಾಗಿತ್ತು. ಮುಂದಿನ ಬಾರಿ ಆಸ್ಟ್ರೇಲಿಯಾಕ್ಕೆ ಬಂದಾಗ ಅವರು ಇನ್ನಷ್ಟು ಚೆನ್ನಾಗಿ ಆಡಬಹುದು’ ಎಂದಿದ್ದಾರೆ.

ಅಭಿನಂದನೆಗಳ ಮಹಾಪೂರ: ಟ್ವೆಂಟಿ–20 ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ ಮಹಿಳಾ ತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಹಿರಿಯ ಆಟಗಾರ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವರು ಹರ್ಮನ್‌ಪ್ರೀತ್‌ ಪಡೆಯ ಆಟಗಾರ್ತಿಯರನ್ನು ಅಭಿನಂದಿಸಿದ್ದಾರೆ.

ವಿಶ್ವಕಪ್‌ ಇಲೆವನ್‌ ತಂಡದಲ್ಲಿ ಪೂನಂ
ದುಬೈ (ಪಿಟಿಐ):
ಲೆಗ್‌ ಸ್ಪಿನ್ನರ್‌ ಪೂನಂ ಯಾದವ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸೋಮವಾರ ಪ್ರಕಟಿಸಿರುವ 2020ನೇ ಸಾಲಿನ ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಇಲೆವನ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆರಂಭಿಕ ಬ್ಯಾಟ್ಸ್‌ವುಮನ್‌ ಶಫಾಲಿ ವರ್ಮಾ ಅವರು 12ನೇ ಆಟಗಾರ್ತಿಯಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟೂರ್ನಿಯಲ್ಲಿ ಐದು ಪಂದ್ಯಗಳನ್ನಾಡಿದ್ದ ಪೂನಂ 11.90ರ ಸರಾಸರಿಯಲ್ಲಿ 10 ವಿಕೆಟ್‌ ಉರುಳಿಸಿದ್ದರು. 16 ವರ್ಷ ವಯಸ್ಸಿನ ಶಫಾಲಿ, ಐದು ಪಂದ್ಯಗಳಿಂದ 163ರನ್‌ ದಾಖಲಿಸಿದ್ದರು.

ಆಸ್ಟ್ರೇಲಿಯಾದ ಐದು ಹಾಗೂ ಇಂಗ್ಲೆಂಡ್‌ನ ನಾಲ್ಕು ಮಂದಿ ಆಟಗಾರ್ತಿಯರು ತಂಡದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಲೌರಾ ವೂಲ್ವಾರ್ಡ್ತ್‌ ಅವರಿಗೂ ಅವಕಾಶ ಸಿಕ್ಕಿದೆ.

ತಂಡ ಇಂತಿದೆ: ಅಲಿಸಾ ಹೀಲಿ, ಬೆಥ್‌ ಮೂನಿ, ನ್ಯಾಟ್‌ ಶೀವರ್‌, ಹೀದರ್‌ ನೈಟ್‌, ಮೆಗ್‌ ಲ್ಯಾನಿಂಗ್‌, ಲೌರಾ ವೂಲ್ವಾರ್ಡ್ತ್‌, ಜೆಸ್‌ ಜೊನಾಸನ್‌, ಸೋಫಿ ಎಕ್ಸ್ಲೆಸ್ಟೋನ್‌, ಅನ್ಯಾ ಶ್ರಬ್‌ಸೋಲ್‌, ಮೇಗನ್ ಶುಟ್‌ ಮತ್ತು ಪೂನಂ ಯಾದವ್‌. 12ನೇ ಆಟಗಾರ್ತಿ: ಶಫಾಲಿ ವರ್ಮಾ.

**
ಟೂರ್ನಿಯಲ್ಲಿ ನೀವು ತುಂಬಾ ಚೆನ್ನಾಗಿ ಆಡಿದಿರಿ. ನಿಮಗೆಲ್ಲಾ ಅಭಿನಂದನೆಗಳು. ಈ ಬಾರಿ ಫೈನಲ್‌ನಲ್ಲಿ ಸೋತಿರಬಹುದು. ಮುಂದೊಂದು ದಿನ ನಮ್ಮ ತಂಡ ಖಂಡಿತಾ ಪ್ರಶಸ್ತಿ ಗೆಲ್ಲಲಿದೆ.
-ಸೌರವ್‌ ಗಂಗೂಲಿ, ಬಿಸಿಸಿಐ ಅಧ್ಯಕ್ಷ

**
ಟೂರ್ನಿಯುದ್ದಕ್ಕೂ ಅಮೋಘ ಸಾಮರ್ಥ್ಯ ತೋರಿ ಚೊಚ್ಚಲ ಬಾರಿ ರನ್ನರ್ಸ್‌ ಅಪ್‌ ಆಗಿದ್ದೀರಿ. ನಿಮ್ಮ ಈ ಚಾರಿತ್ರಿಕ ಸಾಧನೆಯಿಂದ ನಾವೆಲ್ಲಾ ಹೆಮ್ಮೆಯಿಂದ ಬೀಗುವಂತಾಗಿದೆ.
-ವಿರಾಟ್‌ ಕೊಹ್ಲಿ, ಭಾರತ ತಂಡದ ನಾಯಕ

**
ಭಾನುವಾರ ಭಾರತದ ಪಾಲಿಗೆ ಕಠಿಣ ದಿನವಾಗಿತ್ತು. ನಮ್ಮ ತಂಡದಲ್ಲಿ ಯುವ ಆಟಗಾರ್ತಿಯರೇ ಹೆಚ್ಚಿದ್ದರು. ಎಲ್ಲರೂ ಚೆನ್ನಾಗಿಯೇ ಆಡಿದ್ದರು. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿ.
-ಸಚಿನ್‌ ತೆಂಡೂಲ್ಕರ್‌, ಭಾರತದ ಹಿರಿಯ ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.