ADVERTISEMENT

ಭಾರತದಲ್ಲಿ ಟಿ20 ವಿಶ್ವಕಪ್ ನಡೆಸಲು ಆಸ್ಟ್ರೇಲಿಯಾ ಕೈಜೋಡಿಸಲಿ: ಸುನಿಲ್ ಗಾವಸ್ಕರ್

ಪಿಟಿಐ
Published 21 ಏಪ್ರಿಲ್ 2020, 14:56 IST
Last Updated 21 ಏಪ್ರಿಲ್ 2020, 14:56 IST
   

ನವದೆಹಲಿ: ಕೊರೊನಾ ವೈರಸ್‌ ಹಾವಳಿಯಿಂದಾಗಿ ವಿಶ್ವದ ಎಲ್ಲ ಕ್ರೀಡಾಕೂಟಗಳೂ ಸ್ತಬ್ಧವಾಗಿವೆ. ಇದೇ ವರ್ಷ ನಡೆಯಲಿರುವ ಕೆಲವು ಮಹತ್ವದ ಕ್ರಿಕೆಟ್ ಟೂರ್ನಿಗಳೂ ಅನಿಶ್ಚಿತವಾಗಿವೆ.

ಐಪಿಎಲ್, ಟಿ20 ವಿಶ್ವಕಪ್ ಮತ್ತು ಟಿ20 ಏಷ್ಯಾ ಕಪ್ ಟೂರ್ನಿಗಳನ್ನು ಇದೇ ವರ್ಷ ನಡೆಸುವುದು ಹೇಗೆಂಬ ದ್ವಂದ್ವದಲ್ಲಿ ಆಯೋಜಕರಿದ್ದಾರೆ. ಅದಕ್ಕಾಗಿ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಒಂದು ಸಲಹೆಯನ್ನು ಮುಂದಿಟ್ಟಿದ್ದಾರೆ.

"ಆಸ್ಟ್ರೇಲಿಯಾವು ಸೆ.30ರವರೆಗೆ ವಿದೇಶಿ ವಿಮಾನಗಳನ್ನು ತನ್ನ ದೇಶಕ್ಕೆ ಬರದಂತೆ ನಿಷೇಧ ಹೇರಿದೆ. ಅ ಮೂಲಕ ವಿದೇಶಿಗರಿಗೂ ಪ್ರವೇಶ ನಿರ್ಬಂಧಿಸಿರುವ ವಿಷಯ ನಮಗೆ ಗೊತ್ತಿದೆ. ಟೂರ್ನಿಯು ಟಿ20 ವಿಶ್ವಕಪ್ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಆರಂಭವಾಗುತ್ತದೆ. ಆ ಹೊತ್ತಿಗೆ ಭಾರತದಲ್ಲಿ ಕೊರೊನಾ ಪ್ರಭಾವವು ಸಂಪೂರ್ಣ ಕಮ್ಮಿಯಾಗುವ ನಿರೀಕ್ಷೆ ಇದೆ. ಆದ್ದರಿಂದ 2021ರಲ್ಲಿ ಭಾರತವು ಟಿ20 ವಿಶ್ವಕಪ್ ನಡೆಸಲು ಯೋಜಿಸಲಾಗಿದೆ. ಅದಕ್ಕಿಂತ ಈಗ ಆಸ್ಟ್ರೇಲಿಯಾ ಮತ್ತು ಭಾರತವು ಕೈಜೋಡಿಸಿ ಈ ವರ್ಷ ಇಲ್ಲಿಯೇ ನವೆಂಬರ್‌ನಲ್ಲಿ ಆಯೋಜಿಸಲಿ’ ಎಂದಿದ್ದಾರೆ.

ADVERTISEMENT

‘ಇಲ್ಲಿ ವಿಶ್ವಕಪ್ ನಡೆಯುವಂತಾದರೆ, ಅದಕ್ಕೂ ಮುನ್ನ ಐಪಿಎಲ್ ನಡೆಸಬಹುದು. ಅದರಿಂದ ಆಟಗಾರರಿಗೂ ಒಂದಿಷ್ಟು ಅಭ್ಯಾಸ ಅವಕಾಶ ಸಿಗುತ್ತದೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಏಷ್ಯಾಕಪ್ ಟೂರ್ನಿ ಆಯೋಜಿಸಲಾಗಿದೆ. ಅದನ್ನು ಡಿಸೆಂಬರ್‌ಗೆ ಸ್ಥಳಾಂತರ ಮಾಡಿ ಯುಎಇಯಲ್ಲಿಯೇ ನಡೆಸಲಿ. ಅದು ಸೂಕ್ತ ಸಮಯವೂ ಹೌದು’ ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.