ADVERTISEMENT

ಟೀಮ್ ಇಂಡಿಯಾದಲ್ಲಿ ಇಬ್ಬಗೆಯ ನೀತಿ ಖಂಡಿಸಿದ ಸುನಿಲ್ ಗವಾಸ್ಕರ್

ವಿರಾಟ್ ಕೊಹ್ಲಿಗೆ ಪಿತೃತ್ವ ರಜೆ, ನಟರಾಜನ್‌ಗೆ ಪಿತೃತ್ವ ರಜೆಯಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2020, 6:23 IST
Last Updated 24 ಡಿಸೆಂಬರ್ 2020, 6:23 IST
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್   

ಮೆಲ್ಬೋರ್ನ್: ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಇಬ್ಬಗೆಯ ನೀತಿ ಪ್ರಶ್ನಿಸಿರುವ ಮಾಜಿ ನಾಯಕ ಸುನಿಲ್ ಗವಾಸ್ಕರ್, ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು ಎಂದು ಟೀಕೆ ಮಾಡಿದರು.

ಸ್ಪೋಟ್ಸ್‌ಸ್ಟಾರ್ ಅಂಕಣದಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿಭಿನ್ನ ಆಟಗಾರರನ್ನು ವಿಭಿನ್ನ ರೀತಿಯಲ್ಲಿ ನಡೆಸಿಕೊಂಡ ರೀತಿ ಬಗ್ಗೆ ಸುನಿಲ್ ಗವಾಸ್ಕರ್ ಬೆಳಕು ಚೆಲ್ಲಿದರು.

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಯಾರಿಗೂ ಸಂದೇಹಗಳಿಲ್ಲ. ಆದರೆ ಮೀಟಿಂಗ್‌ನಲ್ಲಿ ಮನಬಿಚ್ಚಿ ನೇರವಾಗಿ ಮಾತನಾಡುವುದರಿಂದ ಇತರರು ಅದನ್ನು ಒಪ್ಪಿಕೊಳ್ಳದಿದ್ದರೂ ತಲೆಯಾಡಿಸುತ್ತಾರೆ. ಒಂದು ಪಂದ್ಯದಲ್ಲಿ ಅಶ್ವಿನ್ ವಿಕೆಟ್‌ಗಳನ್ನು ಪಡೆಯದಿದ್ದರೆ ಮುಂದಿನ ಪಂದ್ಯದಿಂದ ಕೈಬಿಡಲಾಗುತ್ತದೆ. ಆದರೆ ತಂಡದ ನೆಲೆಯೂರಿದ ಬ್ಯಾಟ್ಸ್‌ಮನ್‌ಗಳಿಗೆ ಹಾಗಾಗುವುದಿಲ್ಲ ಎಂದು ಗವಾಸ್ಕರ್ ಬೊಟ್ಟು ಮಾಡಿದರು.

ADVERTISEMENT

ಭಾರತ ಟೆಸ್ಟ್ ತಂಡಕ್ಕೆ ಮಾತ್ರ ಸೀಮಿತವಾಗಿರುವ ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್, ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು.

ಪಿತೃತ್ವ ರಜೆಯೆ ಮೆರೆಗೆ ಆಸೀಸ್ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಲು ವಿರಾಟ್ ಕೊಹ್ಲಿಗೆ ಅವಕಾಶ ಮಾಡಿಕೊಟ್ಟಿರುವ ಬಿಸಿಸಿಐ ನೀತಿಯನ್ನು ಗವಾಸ್ಕರ್ ಪ್ರಶ್ನಿಸಿದರು. ಅತ್ತ ತಮ್ಮ ಚೊಚ್ಚಲ ಸರಣಿಯಲ್ಲೇ ಗಮನಾರ್ಹ ಪ್ರದರ್ಶನ ನೀಡಿರುವ ಯುವ ಎಡಗೈ ವೇಗಿ ತಂಗರಸು ನಟರಾಜನ್ ಅವರನ್ನು ಕಡೆಗಣಿಸಿರುವುದು ಗವಾಸ್ಕರ್ ಅಸಮಾಧಾನಕ್ಕೆ ಕಾರಣವಾಯಿತು.

ಇನ್ನೊಬ್ಬ ಆಟಗಾರ ನಿಮಯಗಳ ಬಗ್ಗೆ ಆಶ್ಚರ್ಯಪಟ್ಟುಕೊಳ್ಳುತ್ತಾನೆ. ಆದರೆ ಹೊಸಬರಗಾಗಿ ಅದರ ಬಗ್ಗೆ ಶಬ್ದ ಎತ್ತುವ ಹಾಗಿಲ್ಲ. ಅವರೇ ಟೀ. ನಟರಾಜನ್. ಟಿ20 ಸರಣಿಯಲ್ಲಿ ಈ ಬೌಲರ್ ಪ್ರಭಾವಶಾಲಿ ಡೆಬ್ಯು ಮಾಡಿದ್ದರು ಎಂದು ಹೇಳಿದರು.

ಐಪಿಎಲ್ ಪ್ಲೇ-ಆಫ್ ನಡೆಯುತ್ತಿರುವಾಗಲೇ ಅವರು ಮೊದಲ ಬಾರಿಗೆ ಅಪ್ಪನಾಗಿದ್ದರು. ಆದರೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಮುಂದುವರಿಯಲು ಕೇಳಲಾಯಿತು. ಅದು ಕೂಡಾ ತಂಡದ ಭಾಗವಾಗದೇ ನೆಟ್ ಬೌಲರ್ ಆಗಿ ಉಳಿಯಬೇಕಾಯಿತು. ಅದನ್ನುಊಹಿಸಿ ನೋಡಿ. ಓರ್ವ ಮ್ಯಾಚ್ ವಿನ್ನರ್ ಬೌಲರ್‌ಗೆ ನೆಟ್ ಬೌಲರ್ ಆಗಿ ಉಳಿದುಕೊಳ್ಳಲು ಹೇಳಲಾಗುತ್ತಿದೆ. ಅಂದರೆ ಅವರು ಜನವರಿ ಮೂರನೇ ವಾರದಲ್ಲಷ್ಟೇ ಸರಣಿ ಮುಗಿದ ಬಳಿಕ ಮನೆಗೆ ಮರಳಿ ಮೊದಲ ಬಾರಿಗೆ ಮಗಳನ್ನು ನೋಡಲಿದ್ದಾರೆ. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ತನ್ನ ಮಗುವಿನ ಜನನದ ನಿಮಿತ್ತ ಮೊದಲ ಟೆಸ್ಟ್ ಬಳಿಕ ತವರಿಗೆ ಹಿಂತಿರುಗಿದ್ದಾರೆ ಎಂದು ಗವಾಸ್ಕರ್ ಟೀಮ್ ಇಂಡಿಯಾದ ಇಬ್ಬಗೆಯ ನೀತಿಖಂಡಿಸುತ್ತಾ ಹೇಳಿದರು.

ಅದುವೇ ಟೀಮ್ ಇಂಡಿಯಾ. ವಿಭಿನ್ನ ಆಟಗಾರರಿಗೆ ವಿಭಿನ್ನ ನಿಯಮಗಳು. ನೀವು ನನ್ನನ್ನು ನಂಬದಿದ್ದರೆ ಅಶ್ವಿನ್ ಹಾಗೂ ನಟರಾಜನ್ ಅವರನ್ನೇ ಕೇಳಿ ಎಂದು ಗವಾಸ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.