ಅಹಮದಾಬಾದ್: ಈ ಬಾರಿಯ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಭಾನುವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ದಾಖಲೆ ಮೊತ್ತ (277) ಪೇರಿಸಿದ್ದ ಪ್ಯಾಟ್ ಕಮಿನ್ಸ್ ಪಡೆಯನ್ನು ಕಟ್ಟಿಹಾಕಬೇಕಾದರೆ ಗುಜರಾತ್ ಟೈಟನ್ಸ್ ತಂಡ, ವಿಶೇಷವಾಗಿ ಬೌಲಿಂಗ್‌ನಲ್ಲಿ ಸಾಕಷ್ಟು ಸುಧಾರಿತ ಪ್ರದರ್ಶನ ನೀಡಬೇಕಾಗಿದೆ.
ಟೈಟನ್ ಒಂದು ಗೆದ್ದು ಒಂದು ಸೋತಿದೆ. ಸನ್‌ರೈಸರ್ಸ್ ಕೂಡ ಅಷ್ಟೇ. ಆದರೆ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ನಾಲ್ಕು ರನ್‌ಗಳಿಂದ ಸೋಲುವ ಮುನ್ನ ಹೆನ್ರಿಚ್ ಕ್ಲಾಸೆನ್ ವೀರೋಚಿತ ಹೋರಾಟ ಪ್ರದರ್ಶಿಸಿದ್ದರು.
ಗಾಯಾಳಾಗಿರುವ ಮೊಹಮ್ಮದ್ ಶಮಿ ಅವರ ಜಾಗ ತುಂಬಲು ಉಮೇಶ್ ಯಾದವ್ ಅವರಿಂದ ಸಾಧ್ಯವಾಗಿಲ್ಲ. ಕಳೆದ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ್ದ ಸಮತೋಲನವೂ ಈಗ ಇಲ್ಲ.
ಚೆನ್ನೈ ಸೂಪರ್‌ಕಿಂಗ್ಸ್ ಎದುರು ಟೈಟನ್ಸ್ ಅನುಭವಿಸಿದ 63 ರನ್‌ಗಳ ಸೋಲು ಈ ಋತುವಿನ ಐಪಿಎಲ್‌ನಲ್ಲಿ ಅತಿ ದೊಡ್ಡದೆನಿಸಿದೆ.
ತಂಡದಿಂದ ಸ್ಫೂರ್ತಿಯುತ ಆಟ ಹೊಮ್ಮಿಸುವ ಸವಾಲು ಗಿಲ್ ಮುಂದಿದೆ. ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್, ತೆವಾಟಿಯಾ ಯಾರೂ ಅಬ್ಬರದ ಆಟವಾಡಿಲ್ಲ. ಸಾಯಿ ಸುದರ್ಶನ್ ಬಿಟ್ಟರೆ ಉಳಿದವರು ಯಾರೂ 30ರ ಗಡಿ ದಾಟಿಲ್ಲ. ಏಕದಿನ ಪಂದ್ಯಗಳ ರೀತಿಯಲ್ಲೇ ಬ್ಯಾಟರ್‌ಗಳು ಆಟವಾಡುತ್ತಿದ್ದಾರೆ. ಮಿಲ್ಲರ್ ಅವರಿಂದ ಅಬ್ಬರದ ಆಟ ಬರಬೇಕಾಗಿದೆ.
ಟ್ರಾವಿಸ್ ಹೆಡ್, ಹೈದರಾಬಾದ್ ಪರ ಪದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧ ಶತಕ (18 ಎಸೆತ) ಹೊಡೆದಿದ್ದರೆ, ಕೆಲಹೊತ್ತಿನಲ್ಲೇ ಅಭಿಷೇಕ್ ಶರ್ಮಾ 16 ಎಸೆತಗಳ್ಲೇ ಅರ್ಧ ಶತಕ ದಾಟಿ ಆ ದಾಖಲೆ ಸುಧಾರಿಸಿದ್ದರು. ಹೆನ್ರಿಚ್ ಕ್ಲಾಸೆನ್ ಅವರೂ ಸ್ಫೋಟಕ ಇನಿಂಗ್ಸ್ ಆಡಿದ್ದಾರೆ.
ಮೇಲ್ನೋಟಕ್ಕೆ ಸನ್‌ರೈಸರ್ಸ್ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.