ADVERTISEMENT

ಸೂಪರ್‌ ಓವರ್‌ ಅಗತ್ಯವಿಲ್ಲ; ಜಂಟಿಯಾಗಿ ಪ್ರಶಸ್ತಿ ನೀಡಿ

ನ್ಯೂಜಿಲೆಂಡ್‌ ತಂಡದ ಅನುಭವಿ ಆಟಗಾರ ರಾಸ್‌ ಟೇಲರ್‌ ಅಭಿಪ್ರಾಯ

ಪಿಟಿಐ
Published 26 ಜೂನ್ 2020, 8:20 IST
Last Updated 26 ಜೂನ್ 2020, 8:20 IST
ರಾಸ್‌ ಟೇಲರ್‌
ರಾಸ್‌ ಟೇಲರ್‌   

ನವದೆಹಲಿ: ‘ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯಲ್ಲಿ ಫೈನಲ್‌ ಪಂದ್ಯವು ಟೈ ಆದರೆ ಉಭಯ ತಂಡಗಳಿಗೂ ಜಂಟಿಯಾಗಿ ಪ್ರಶಸ್ತಿ ನೀಡಬೇಕು. ಏಕದಿನ ಮಾದರಿಯಲ್ಲಿ ‘ಸೂಪರ್‌ ಓವರ್‌’ ಅಗತ್ಯವೇ ಇಲ್ಲ’ ಎಂದು ನ್ಯೂಜಿಲೆಂಡ್‌ನ ಅನುಭವಿ ಆಟಗಾರ ರಾಸ್‌ ಟೇಲರ್‌ ಅಭಿಪ್ರಾಯಪಟ್ಟಿದ್ದಾರೆ.

ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ಮುಖಾಮುಖಿಯಾಗಿದ್ದವು. ನಿಗದಿತ ಓವರ್‌ಗಳ (50) ಆಟ ಮುಗಿದಾಗ ಪಂದ್ಯ ‘ಟೈ’ ಆಗಿತ್ತು. ಸೂಪರ್‌ ಓವರ್‌ ಕೂಡ ‘ಟೈ’ ಆಗಿತ್ತು. ಹೀಗಾಗಿ ಅತಿ ಹೆಚ್ಚು ಬೌಂಡರಿ ಗಳಿಸಿದ್ದ (ಬೌಂಡರಿ ಕೌಂಟ್‌) ಇಂಗ್ಲೆಂಡ್‌ ತಂಡವನ್ನು ಚಾಂಪಿಯನ್‌ ಎಂದು ಘೋಷಿಸಲಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಈ ನಿಯಮವನ್ನು ಹಲವರು ಟೀಕಿಸಿದ್ದರು.

‘ಏಕದಿನ ಪಂದ್ಯವು ಟೈ ಆದರೆ ಆ ಫಲಿತಾಂಶವೇ ಅಂತಿಮವಾಗಬೇಕು. ವಿಜೇತರನ್ನು ನಿರ್ಧರಿಸಲು ಸೂಪರ್‌ ಓವರ್‌ ಆಡಿಸುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಇಎಸ್‌ಪಿಎನ್‌ ಕ್ರಿಕ್‌ ಇನ್ಫೊ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.

ADVERTISEMENT

‘ಟ್ವೆಂಟಿ–20 ಮಾದರಿಯ ಪಂದ್ಯದಲ್ಲಿ ಫಲಿತಾಂಶ ಬರುವವರೆಗೂ ‘ಸೂಪರ್‌ ಓವರ್‌’ ಆಡಿಸಬಹುದು. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಏಕದಿನ ಮಾದರಿಯು ಸುದೀರ್ಘವಾದುದು. ಅದಕ್ಕೆ ಈ ನಿಯಮ ಸರಿಹೊಂದುವುದಿಲ್ಲ’ ಎಂದು ನುಡಿದಿದ್ದಾರೆ.

‘ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯವು ಟೈ ಆದ ಬಳಿಕ ನಾನು ಅಂಪೈರ್‌ಗಳ ಕೈಕುಲುಕಲು ಹೋಗಿದ್ದೆ. ಇನ್ನೂ ‘ಸೂಪರ್ ‌ಓವರ್‌’ ಬಾಕಿ ಇದೆ ಎಂಬುದು ನನಗೆ ಅರಿವಾಗಿದ್ದು ಆಗಲೇ. ಅಲ್ಲಿಯವರೆಗೂ ಅದರ ಕಲ್ಪನೆಯೇ ಇರಲಿಲ್ಲ’ ಎಂದೂ 36 ವರ್ಷ ವಯಸ್ಸಿನ ಆಟಗಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.