ADVERTISEMENT

ಕ್ರಿಕೆಟ್‌ | ಸೂಪರ್‌ ಫ್ಯಾನ್‌ಗಳ ಆರಾಧನಾ ಕಥನ

ನಾಗೇಶ್ ಶೆಣೈ ಪಿ.
Published 9 ಡಿಸೆಂಬರ್ 2023, 15:35 IST
Last Updated 9 ಡಿಸೆಂಬರ್ 2023, 15:35 IST
ಸುಗುಮಾರ್ ಮತ್ತು ದೀಪಕ್
ಸುಗುಮಾರ್ ಮತ್ತು ದೀಪಕ್   

ಕ್ರಿಕೆಟ್‌ನ ಸೂಪರ್‌ ಫ್ಯಾನ್‌ಗಳು ನೆಚ್ಚಿನ ಆಟಗಾರರನ್ನು ಆರಾಧಿಸುವ ಪರಿಗೆ ಸಾಟಿಯೇ ಇಲ್ಲ. ದೇಶ, ವಿದೇಶಗಳ ಹಲವೆಡೆಗಳಲ್ಲಿ ಸೂಪರ್‌ ಫ್ಯಾನ್‌ಗಳು ಪಯಣಿಸುವುದಾದರೂ ಹೇಗೆ? ಇಷ್ಟಕ್ಕೂ ಮೆಚ್ಚಿದ ಆಟಗಾರರ ಮನ ಗೆದ್ದ ಬಗೆಯಾದರೂ ಏನು?

‘ಅಂದು ನಾನು ವಿವಿಧ ದಿರಿಸುಗಳನ್ನು ತೊಟ್ಟು ಆರ್‌ಸಿಬಿ ತಂಡ ಪ್ರೋತ್ಸಾಹಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುವಾಗ ‘ಇವನಿಗೇನೂ ಉದ್ಯೋಗವಿಲ್ಲ. ಪ್ರಚಾರಕ್ಕೆ ಈ ರೀತಿ ಮಾಡುತ್ತಾನೆ’ ಎಂದು ಹಂಗಿಸಿದ್ದವರೇ ಇಂದು ನನ್ನ ಬಳಿ ದೇಶದ ಕ್ರಿಕೆಟಿಗರ ಹಸ್ತಾಕ್ಷರ, ಪರಿಚಯ ಮಾಡಿಕೊಡುವಂತೆ ಕೇಳುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನು ಬೇಕು.... ’ ಎನ್ನುವಾಗ ಬೆಂಗಳೂರಿನ ದೊಮ್ಮಲೂರು ನಿವಾಸಿ ಸುಗುಮಾರ್ ಮೊಗದಲ್ಲಿ ಏನೋ ಸಾಧಿಸಿದ ಭಾವ. ಸುಗುಮಾರ್ ಅವರು ಟೀಮ್ ಇಂಡಿಯಾದ ಮತ್ತು ಆರ್‌ಸಿಬಿಯ ಸೂಪರ್‌ ಫ್ಯಾನ್‌.

ದೇಶದಲ್ಲಿ ತಾರಾ ವರ್ಚಸ್ಸು ಪಡೆದಿರುವ ಕ್ರಿಕೆಟಿಗರನ್ನು ಆರಾಧಿಸುವವರು ಹೇರಳವಾಗಿದ್ದಾರೆ. ಅದರ ನಡುವೆ ಸುಗುಮಾರ್‌ ಅವರಂಥ ಸೂಪರ್‌ಫ್ಯಾನ್‌ಗಳ ಮಿಂಚೂ ಉಂಟು. ಕ್ರಿಕೆಟ್‌ ಪಂದ್ಯಗಳ ವೇಳೆ, ವಿಭಿನ್ನ ವೇಷಭೂಷಣ, ಮೈಗೆಲ್ಲಾ ತ್ರಿವರ್ಣ ಧ್ವಜದ ಅಥವಾ ತಂಡ ಪ್ರತಿನಿಧಿಸುವ ಬಣ್ಣ ಬಳಿದು, ಎದೆಯ ಮೇಲೆ ತಮ್ಮ ನೆಚ್ಚಿನ ಆಟಗಾರನ ಹೆಸರು, ಜರ್ಸಿ ನಂಬರ್‌ ಬರೆದು, ರಾಷ್ಟ್ರ ಧ್ವಜ ಬೀಸಿ ತಂಡವನ್ನು ಪ್ರೋತ್ಸಾಹಿಸುವವರನ್ನು ಕಂಡೇ ಇರುತ್ತೀರಿ. ಇವರೇ ಆ ಸೂಪರ್‌ಫ್ಯಾನ್‌ಗಳು.

ADVERTISEMENT

ನೆಚ್ಚಿನ ಕ್ರಿಕೆಟಿಗರ ಮೇಲೆ ಇರುವ ಪ್ರೀತಿ– ಅಭಿಮಾನವೇ ಸೂಪರ್‌ ಫ್ಯಾನ್‌ಗಳನ್ನು ಈ ಕೆಲಸಕ್ಕೆ ಪ್ರೇರೇಪಿಸಿವೆ. ಸುಗುಮಾರ್‌ ಅವರಂತೆಯೇ ದೀಪಕ್ ಪಟೇಲ್ (ರೋಹಿತ್ ಶರ್ಮಾ ಸೂಪರ್‌ಫ್ಯಾನ್‌), ಸುಧೀರ್‌ ಕುಮಾರ್‌ ಚೌಧರಿ (ಸಚಿನ್ ತೆಂಡೂಲ್ಕರ್ ಸೂಪರ್‌ಫ್ಯಾನ್‌), ರಾಮ್‌ಬಾಬು, ಸರವಣನ್ ಹರಿ (ಮಹೇಂದ್ರ ಸಿಂಗ್ ಧೋನಿ ಸೂಪರ್‌ಫ್ಯಾನ್‌), ಪಿಂಟು ಬೆಹರಾ (ವಿರಾಟ್‌ ಕೊಹ್ಲಿ ಸೂಪರ್‌ಫ್ಯಾನ್) ಕೂಡ ಪ್ರಮುಖ ಸೂಪರ್‌ ಫ್ಯಾನ್‌ಗಳು. ಇಂಥವರಿಗೆ ಆಯಾ ಆಟಗಾರರು ಅಥವಾ ಕೆಲವೊಮ್ಮೆ ತಂಡ ಟಿಕೆಟ್‌ಗಳನ್ನು ನೀಡುತ್ತದೆ. ಇವರಲ್ಲಿ ಸಚಿನ್ ಅಭಿಮಾನಿ ಸುಧೀರ್ ದೇಶದ ‘ಸೀನಿಯರ್‌ ಮೋಸ್ಟ್‌ ಸೂಪರ್‌ಫ್ಯಾನ್’!

ಸೂಪರ್‌ಫ್ಯಾನ್‌ಗಳು ಭಾರತದಲ್ಲಿ ಮಾತ್ರ ಅಲ್ಲ, ಇತರ ದೇಶಗಳಲ್ಲೂ ಕಾಣಸಿಗುತ್ತಾರೆ. ಪಾಕಿಸ್ತಾನದ ಚಾಚಾ ಎಂಬ ಬಿಳಿಯ ಗಡ್ಡಧಾರಿ ವ್ಯಕ್ತಿಯೂ ಕ್ರಿಕೆಟ್‌ ಪ್ರಿಯರಿಗೆ ಪರಿಚಿತ ಸೂಪರ್‌ಫ್ಯಾನ್. ಪಾಕ್‌ ತಂಡ ಹೋದಕಡೆಯಲ್ಲೆಲ್ಲಾ ಅವರು ಹಾಜರು. ಗಯಾನ್ ಎಂಬ ಅಂಗವಿಕಲ ವ್ಯಕ್ತಿ ಶ್ರೀಲಂಕಾ ತಂಡದ ಸೂಪರ್‌ ಫ್ಯಾನ್. ಬಾಂಗ್ಲಾದೇಶ ತಂಡದ ಶೋಯೆಬ್ ಅಲಿ ‘ಟೈಗರ್‌’ ಅವರೂ ಕ್ರೀಡಾಂಗಣದಲ್ಲಿ ಕಾಣಸಿಗುತ್ತಾರೆ.

ಇತ್ತೀಚೆಗೆ ಮುಂಬೈನಲ್ಲಿ ಟೆನಿಸ್‌ಬಾಲ್‌ ಲೀಗ್‌ ಆರಂಭಕ್ಕೆ ಸಂಬಂಧಿಸಿ ನಡೆದ ಕಾರ್ಯಕ್ರಮದಲ್ಲಿ ಸುಗುಮಾರ್, ದೀಪಕ್ ಅಶೋಕ್ ಪಟೇಲ್ ಮತ್ತು ಸರಣವನ್ ಹರಿ ‘ಭಾನುವಾರದ ಪುರವಣಿ’ ಜೊತೆ ತಮ್ಮ ಸ್ಮರಣೀಯ ಅನುಭವ, ಹಿನ್ನೆಲೆ ಕುರಿತು ಮಾತನಾಡಿದರು.

ವೇಷಗಳು ಹಲವು, ಪ್ರೀತಿ ಮಾತ್ರ ಕ್ರಿಕೆಟ್‌

ನಾನು ಸೇನೆಗೆ ಸೇರಬೇಕೆಂಬ ಕನಸು ಕಂಡಿದ್ದೆ. ಆದರೆ ಅಣ್ಣ ಮೊದಲು ಸೇರಿದ. ಒಂದೇ ಮನೆಯಿಂದ ಇಬ್ಬರು ಬೇಡವೆಂದು ತಂದೆ–ತಾಯಿ ಹೇಳಿದ್ದರಿಂದ ನಾನು ಹೋಗಲಿಲ್ಲ. ಬಾಲ್ಯದಲ್ಲಿ ನನಗೆ ಕ್ರೀಡೆ ಮತ್ತು ಛದ್ಮವೇಷದಲ್ಲಿ ಆಸಕ್ತಿ. ಫ್ಯಾನ್ಸಿ ಡ್ರೆಸ್‌ಗಳಲ್ಲಿ ಬಹುಮಾನಗಳು ಬರುತ್ತಿದ್ದವು. ಕ್ರಿಕೆಟ್‌ ಪಂದ್ಯಗಳಿಗೆ ಜನರು ಬಣ್ಣದ ವಿಗ್‌ಹಾಕಿಕೊಂಡು ಹೋಗುತ್ತಿರುವುದನ್ನು ನೋಡುತ್ತಿದ್ದೆ, ಒಮ್ಮೆ ಮೇಕಪ್‌ ಮ್ಯಾನ್‌ನನ್ನು ಕರೆಸಿ ಮೈಸೂರು ಮಹಾರಾಜರ ಧಿರಿಸಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವೊಂದಕ್ಕೆ ಹೋಗಿದ್ದೆ. ಮಾಧ್ಯಮಗಳು ಸೇರಿದಂತೆ ಎಲ್ಲರ ಗಮನ ನನ್ನ ಮೇಲೆ ಬಿತ್ತು. ಮರುದಿನ ಪತ್ರಿಕೆಗಳಲ್ಲಿ ಚಿತ್ರವೂ ಬಂತು. ಜನಸಾಮಾನ್ಯನಾಗಿ ಇದು ನನಗೆ ಬಹಳ ಖುಷಿ ಕೊಟ್ಟಿತು.

ಮಾತೃಭಾಷೆ ತೆಲುಗು ಆದರೂ, ಬೆಂಗಳೂರಿನಲ್ಲಿ ಹುಟ್ಟಿ, ಕನ್ನಡಿಗನಾಗಿ ಬೆಳೆದ ನನಗೆ ಕನ್ನಡದ ಮೇಲೆ ಪ್ರೀತಿ. ಬಸವಣ್ಣ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ವೀರಗಾಸೆ ವೇಷ ತೊಟ್ಟು ಪಂದ್ಯಗಳಿಗೆ ಹೋಗುತ್ತಿದ್ದೆ. ಆದರೆ ಬೇರೆ ರಾಜ್ಯಗಳಿಗೆ ಹೋಗುವಾಗ ಅಲ್ಲಿನ ಸಾಂಪ್ರದಾಯಿಕ ಉಡುಗೆ, ವೇಷಭೂಷಣ ತೊಡುತ್ತೇನೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್‌ಗೆ ಹೋಗಿದ್ದೆ. ಅಲ್ಲಿ ಭಾರತ– ಪಾಕ್‌ ಪಂದ್ಯಕ್ಕೆ ಮೊದಲು ನನಗೆ ಗ್ಲೋಬಲ್‌ ಸ್ಪೋರ್ಟ್ಸ್‌ಮ್ಯಾನ್‌ ಪ್ರಶಸ್ತಿ ನೀಡಿದರು

ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ವಾ ಅವರು 2021ರಲ್ಲಿ ಬರೆದಿರುವ ‘ಸ್ಪಿರಿಟ್‌ ಆಫ್‌ ಕ್ರಿಕೆಟ್‌’ ಕೃತಿಯಲ್ಲಿ ಭಾರತೀಯರ ಕ್ರಿಕೆಟ್‌ ಹುಚ್ಚಿನ ಬಗ್ಗೆ ಬರೆದಿದ್ದಾರೆ. ಅದರಲ್ಲಿ ನನ್ನ ಬಗ್ಗೆ ಎರಡು ಪುಟ ಬರೆದಿದ್ದಾರೆ’ ಎನ್ನುತ್ತಾರೆ ಹೆಮ್ಮೆಯಿಂದ. ತಂಡವನ್ನು ಪ್ರೋತ್ಸಾಹಿಸಲು 2020–21ರಲ್ಲಿ ಆಸ್ಟ್ರೇಲಿಯಾಕ್ಕೂ ಹೋಗಿದ್ದೆ. ಆ ಪ್ರವಾಸದ ವೇಳೆ ವಿರಾಟ್‌ ಕೊಹ್ಲಿ ಹುಟ್ಟುಹಬ್ಬ ಆಚರಿಸಿದೆವು. ತಂಡದವರು ನನ್ನ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಮರೆಯಲಾಗದ ಕ್ಷಣ. ನನ್ನ ಮನೆಯಲ್ಲಿ ಕ್ರಿಕೆಟಿಗರ ಹಸ್ತಾಕ್ಷರಗಳಿರುವ ಬ್ಯಾಟು, ಟೀ ಶರ್ಟ್‌ಗಳು, ಹೆಲ್ಮೆಟ್‌ಗಳು, ಸ್ಟಂಪ್‌ಗಳು ಇವೆ.

ನಾನು ‘ಕೆರಿ ಇಂಡೆವ್‌ ಲಾಜಿಸ್ಟಿಕ್ಸ್‌’ ಹೆಸರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕಂಪನಿಯ ಮಾಲೀಕ ಎಸ್‌.ಕ್ಸೇವಿಯರ್‌ ಬ್ರಿಟ್ಟೊ ಅವರು ನನ್ನ ಪಾಲಿಗೆ ದೇವರಿದ್ದಂತೆ. ನನ್ನ ಕ್ರೀಡಾಪ್ರೇಮ ಕೆಲಸ ಪ್ರೋತ್ಸಾಹಿಸುತ್ತಾರೆ. ಕ್ರೀಡಾ ರಾಯಭಾರಿಯ ಸ್ಥಾನ ಕೊಟ್ಟಿದ್ದಾರೆ. ನನ್ನ ಪತ್ನಿ ಸುಮಾ ಅವರೂ ಬೆನ್ನಿಗೆ ನಿಂತಿದ್ದರಿಂದ ನಾನು ಬೇರೆ ಬೇರೆ ಕಡೆ ಹೋಗಲು ಆಗುತ್ತಿದೆ’ ಎನ್ನುತ್ತಾರೆ
–ಸುಗುಮಾರ್‌, ಬೆಂಗಳೂರು
ಸುಗುಮಾರ್ ಮತ್ತು ವಿರಾಟ್‌ ಕೊಹ್ಲಿ

ರೋಹಿತ್‌ಗಾಗಿ ಆರು ದಿನ ಕಾಯ್ದದ್ದು...

ಅದು 2021. ಲಾಕ್‌ಡೌನ್‌ ಕಳೆದಿತ್ತು. ನನಗೆ ರೋಹಿತ್ ಸರ್ ಮಾಲ್ಡೀವ್ಸ್‌ ಪ್ರವಾಸಕ್ಕೆ ಹೋದ ವಿಷಯ ಗೊತ್ತಿರಲಿಲ್ಲ. ಮುಂಬೈಗೆ ಹೋಗಿ ಅವರ ಮನೆಯ ಮುಂದೆ ಕಾದೆ. ಒಂದಲ್ಲ, ಎರಡಲ್ಲ... ಆರು ದಿನ. ಎಲ್ಲವೂ ಅಲ್ಲೇ. ನಂತರ ಭೇಟಿಯಾದೆ. ಮನೆಗೆ ಕರೆದರು. ಅಂದಿನಿಂದ ನನ್ನ ಈ ಪಯಣ ಮುಂದುವರಿದಿದೆ.

ನನ್ನ ಅಂಗೈನಲ್ಲಿ ಒಂಬತ್ತು ಭಾಷೆಗಳಲ್ಲಿ ರೋಹಿತ್ ಹೆಸರನ್ನು ಬರೆಸಿಕೊಂಡಿದ್ದೇನೆ. ರೋಹಿತ್‌ ಹಸ್ತಾಕ್ಷರವೂ ಇದೆ. ಮುಂಬೈನಲ್ಲಿ ಹಾಕಿದ್ದ ಆ ಹಸ್ತಾಕ್ಷರ ಹಾಳಾಗದಂತೆ ನಾಗ್ಪುರಕ್ಕೆ ಹೋಗಿ ಅದನ್ನೇ ಟ್ಯಾಟೂ ಮಾಡಿಸಿದ್ದೆ.

ಈ ವರ್ಷದ ಏಪ್ರಿಲ್‌ ತಿಂಗಳು. ಮುಂಬೈನ ಹೋಟೆಲ್‌ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನನಗೂ ಆಹ್ವಾನವಿತ್ತು. ಅಲ್ಲಿ ರೋಹಿತ್‌ ಶರ್ಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವಂತೆ ತಿಳಿಸಿದರು. ಅಲ್ಲೆಲ್ಲೂ ರೋಹಿತ್‌ ಸರ್ ಕಂಡಿರಲಿಲ್ಲ. ನಾನು ಶುಭಾಶಯ ಕೋರಿದ ಮೇಲೆ ಹಠಾತ್ತನೇ ಹಿಂದಿನಿಂದ ಧ್ವನಿ ಕೇಳಿತು: ‘ಅಲ್ಲೇಕೆ ಶುಭಾಶಯ ಕೋರುತ್ತಿ. ನಾನಿಲ್ಲಿ ಇದ್ದೇನಲ್ಲ’. ಸ್ವತಃ ರೋಹಿತ್ ಸರ್  ಹೀಗೆ ಹೇಳಿದಾಗ ನಂಬಲಾಗಲಿಲ್ಲ. ಆ ಸಂದರ್ಭ ನನ್ನ ಪಾಲಿಗೆ ಅವಿಸ್ಮರಣೀಯ.

ನನಗೆ ಟಿಕೆಟ್‌ ಕಳಿಸುತ್ತಾರೆ. ಆದರೆ ನಾನು ಹಣ ಕೇಳುವುದಿಲ್ಲ. ಊರಿನಲ್ಲಿ ಝೊಮೆಟೊದಲ್ಲಿ ಕೆಲಸ ಮಾಡುತ್ತೇನೆ. ಬಣ್ಣ ಹಚ್ಚಲು ಮೂರು ಗಂಟೆ, ತೆಗೆಯಲು ಒಂದೂವರೆ ಗಂಟೆ ಬೇಕಾಗುತ್ತದೆ. ಈ ಅವಧಿಯಲ್ಲಿ ನಿದ್ರೆ ಮಾಡುವಂತಿಲ್ಲ.
–ದೀಪಕ್ ಪಟೇಲ್, ನಾಗ್ಪುರ
ಮಹೇಂದ್ರ ಸಿಂಗ್ ಧೋನಿ ಜೊತೆ ಸರವಣನ್ ಹರಿ

ಧೋನಿಗೆ ಇಬ್ಬರು ಸೂಪರ್ ಫ್ಯಾನ್ಸ್

ಭಾರತ ತಂಡದ ಮಾಜಿ ನಾಯಕ ಧೋನಿ ಅವರಿಗೆ ಇಬ್ಬರು ಸೂಪರ್‌ಫ್ಯಾನ್‌ಗಳಿದ್ದಾರೆ. ಚಂಡೀಗಢದ ರಾಮ್‌ಬಾಬು ಎಂಬುವವರು ಮೊದಲು ಸೂಪರ್‌ಫ್ಯಾನ್‌ ಆದವರು. ಈಗ ಚೆನ್ನೈನ ಸರವಣನ್ ಹರಿ ಎಂಬವರೂ ಫ್ಯಾನ್‌ ಆಗಿದ್ದಾರೆ. ‘ನನ್ನ ಉಸಿರು ಕ್ರೀಡೆ. ಚೆನ್ನೈ ಸೂಪರ್‌ ಕಿಂಗ್ಸ್‌, ಧೋನಿ ನನ್ನ ಎರಡು ಕಣ್ಣುಗಳಿದ್ದಂತೆ’ ಎಂದೇ ಲವಲವಿಕೆಯಿಂದ ಮಾತು ಆರಂಭಿಸಿದರು ಸರವಣನ್.

ಸೂಪರ್‌ ಫ್ಯಾನ್‌ಗಳಾದ ಚೆನ್ನೈನ ಸರವಣನ್ ಹರಿ ಬೆಂಗಳೂರಿನ ಸುಗುಮಾರ್ ಮತ್ತು ನಾಗ್ಪುರದ ದೀಪಕ್ ಪಟೇಲ್

ಚೆನ್ನೈನ ಸರವಣನ್ ಹರಿ ಚೆನ್ನೈ ಸೂಪರ್‌ ಕಿಂಗ್ಸ್ ಕಟ್ಟಾ ಅಭಿಮಾನಿ. ಗುಂಗುರುಕೂದಲಿನ ವಿಗ್‌ ಧರಿಸಿ ಮೈಗೆಲ್ಲಾ ಹಳದಿ ಬಣ್ಣವನ್ನು ಬಳಿದುಕೊಳ್ಳುವ ಅವರು 2013ರಿಂದ ಸಿಎಸ್‌ಕೆ ತಂಡದ ಒಂದೂ ಪಂದ್ಯ ತಪ್ಪಿಸಿಲ್ಲ. ಅವರು ಧೋನಿ ಅವರನ್ನು 2017ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ‘ನನ್ನ ಮಗಳಿಗೆ ದಿಯಾ ಎಂದು ಹೆಸರು ಸೂಚಿಸಿದವರೇ ಧೋನಿ ಸರ್‌’ ಎನ್ನುತ್ತಾರೆ 38 ವರ್ಷ ವಯಸ್ಸಿನ ಸರಣವನ್ ಭಾವನಾತ್ಮಕವಾಗಿ. ಅಷ್ಟರಲ್ಲಿ ಅವರ ಜೊತೆ ಒಂದಷ್ಟು ಮಂದಿ ಸೆಲ್ಫಿಗಾಗಿ ಮುಗಿಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.