ADVERTISEMENT

ಚೆನ್ನಾಗಿ ಆಡುತ್ತಿದ್ದರೂ ನನ್ನನ್ನು ಕೈ ಬಿಟ್ಟದ್ದು ಏಕೆಂದು ಗೊತ್ತಾಗಲಿಲ್ಲ: ರೈನಾ

ಏಜೆನ್ಸೀಸ್
Published 15 ಏಪ್ರಿಲ್ 2020, 6:48 IST
Last Updated 15 ಏಪ್ರಿಲ್ 2020, 6:48 IST
   

ನವದೆಹಲಿ: ತಂಡದ ಆಯ್ಕೆದಾರರು ಹಿರಿಯ ಆಟಗಾರರ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಭಾರತ ಕ್ರಿಕೆಟ್‌ ತಂಡದ ಎಡಗೈ ಬ್ಯಾಟ್ಸ್‌ಮನ್ ಸುರೇಶ್‌ ರೈನಾ, ತಾವು ಸಿಕ್ಕ ಅವಕಾಶಗಳಲ್ಲಿ ಚೆನ್ನಾಗಿ ಆಡಿದ್ದರೂ ಮತ್ತು ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆದರೂ ತಂಡದಿಂದ ಕೈ ಬಿಟ್ಟದ್ದು ಏಕೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಹಿಂದಿ ಸುದ್ದಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ರೈನಾ, ‘ಆಯ್ಕೆದಾರರು ಹಿರಿಯ ಆಟಗಾರರ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ನನಗನಿಸುತ್ತದೆ. ನೀವು ಎಷ್ಟು ದೊಡ್ಡ ಆಟಗಾರ ಎಂಬುದು ಮುಖ್ಯವಾಗುವುದಿಲ್ಲ. ನೀವು ಏನೇ ಆಗಿದ್ದರೂ ಅಂತಿಮವಾಗಿ ತಂಡಕ್ಕಾಗಿ ಆಡಬೇಕಾಗುತ್ತದೆ. ಇಂದು ಉತ್ತಮಪ್ರದರ್ಶನ ನೀಡಿಯೇ ಮನೆಗೆ ತೆರಳಬೇಕು. ಒಂದುವೇಳೆ ಮರುದಿನ ನೀವು ಚೆನ್ನಾಗಿ ಆಡಲು ಆಗದಿದ್ದರೆ, ಅದಕ್ಕೆ ಕಾರಣವೇನೆಂದು ತಿಳಿದುಕೊಳ್ಳಬೇಕು. ನನ್ನಲ್ಲೇನಾದರೂ ಕೊರತೆಯಿದ್ದರೆ ಹೇಳಿ. ಕಷ್ಟಪಟ್ಟು ಕಲಿಯುತ್ತೇನೆ. ವೈಫಲ್ಯಕ್ಕೆ ಕಾರಣವೇನೆಂದು ಗೊತ್ತಿಲ್ಲವಾದರೆ, ಸುಧಾರಸಿಕೊಳ್ಳುವುದಾದರೂ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

2019ರಲ್ಲಿ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ರೈನಾ ಗುಣಮುಖರಾಗುತ್ತಿದ್ದಾರೆ. 2018ರಿಂದ ಈಚೆಗೆ ಅವರು ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಕಣಕ್ಕಿಳಿಯುವ ರೈನಾ, ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌ (5,368) ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ.

ADVERTISEMENT

ಟೀಂ ಇಂಡಿಯಾಗೆ ಮರಳುವ ಉತ್ಸಾಹದಲ್ಲಿರುವ ಅವರು, ‘ನೀವು ರಣಜಿ ಕ್ರಿಕೆಟ್‌ನಲ್ಲಿ ಆಡುವಾಗ ಯಾರೊಬ್ಬರೂ ನೋಡಲು ಬರುವುದಿಲ್ಲ. ಹಾಗಾಗಿ ಐಪಿಎಲ್‌ವರೆಗೆ ಕಾಯಬೇಕಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನು ಎದುರಿಸುವ ಅವಕಾಶ ಅಲ್ಲಿ ಸಿಗುತ್ತದೆ. ನೀವು ಫ್ರ್ಯಾಂಚೈಸ್‌ನಿಂದ ಹಣ ಪಡೆಯುತ್ತೀರಿ ಎಂದಾದರೆ, ಪ್ರತಿ ಪಂದ್ಯದಲ್ಲೂ ಪ್ರದರ್ಶನ ನೀಡಬೇಕಾಗುತ್ತದೆ. ಐಪಿಎಲ್‌ನಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಅಲ್ಲಿ ನಿಮಗೆ ಯೋಚನೆ ಮಾಡುವುದಕ್ಕೂ ಸಮಯ ಸಿಗದು’ ಎಂದಿದ್ದಾರೆ.

ಭವಿಷ್ಯದಲ್ಲಿ ತಾವೇನಾದರೂ ಆಯ್ಕೆ ಸಮಿತಿ ಸೇರಿದರೆ, ಆಟಗಾರರನ್ನು ಕೈಬಿಡುವಾಗ ಕೈ ಬಿಡುತ್ತಿರುವುದು ಏಕೆ ಎಂದು ಕಾರಣ ತಿಳಿಸುತ್ತೇನೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.