ADVERTISEMENT

ರೋಹಿತ್ ನಾಯಕತ್ವದ ಶೈಲಿ, ಧೋನಿಯನ್ನು ಹೋಲುತ್ತದೆ: ಸುರೇಶ್ ರೈನಾ

ಏಜೆನ್ಸೀಸ್
Published 23 ಮೇ 2020, 6:27 IST
Last Updated 23 ಮೇ 2020, 6:27 IST
ರೋಹಿತ್ ಶರ್ಮಾ, ಎಂ.ಎಸ್‌. ಧೋನಿ
ರೋಹಿತ್ ಶರ್ಮಾ, ಎಂ.ಎಸ್‌. ಧೋನಿ   

ಮುಂಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ ಅವರ ತಂಡವನ್ನು ಮುನ್ನಡೆಸುವ ರೀತಿ ಸಂಪೂರ್ಣ ಭಿನ್ನವಾಗಿದೆ. ರೋಹಿತ್‌, ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಯವರಂತೆ ಶಾಂತ ಸ್ವಭಾವ ಹೊಂದಿದ್ದಾರೆ ಎಂದು ಹಲವು ಹಿರಿಯ ಆಟಗಾರರು ಮತ್ತು ಕ್ರಿಕೆಟ್‌ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದೇ ಮಾತನ್ನು ಪುನರುಚ್ಛರಿಸಿರುವ ಹಿರಿಯ ಕ್ರಿಕೆಟಿಗ ಸುರೇಶ್‌ ರೈನಾ, ರೋಹಿತ್‌ ನಾಯಕತ್ವದ ಶೈಲಿ ಧೋನಿಯನ್ನು ಹೋಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ರೋಹಿತ್‌, ಶಾಂತ ರೀತಿಯಲ್ಲಿ ಮುನ್ನಡೆಯುವುದು ಮತ್ತು ಆಟಗಾರರನ್ನು ಪ್ರೇರೇಪಿಸುವ ರೀತಿ ಧೋನಿಯನ್ನು ಹೋಲುತ್ತದೆ. ಆತ (ರೋಹಿತ್) ಶಾಂತ ಸ್ವಭಾವದವ. ಯಾವಾಗ ಬ್ಯಾಟಿಂಗ್‌ಗೆ ಇಳಿದರೂ ರನ್‌ ಗಳಿಸುತ್ತೇನೆ ಎಂಬುದು ಆತನಿಗೆ ತಿಳಿದಿದೆ. ಒಬ್ಬ ಆಟಗಾರನಲ್ಲಿರುವ ಇಂತಹ ಆತ್ಮ ವಿಶ್ವಾಸದಿಂದ ಇತರ ಆಟಗಾರರೂ ಉತ್ತೇಜನಗೊಳ್ಳುತ್ತಾರೆ. ಇದು ರೋಹಿತ್‌ ವಿಚಾರದಲ್ಲಿ ನನಗಿಷ್ಟವಾಗುವುದು’ ಎಂದು ಹೇಳಿಕೊಂಡಿದ್ದಾರೆ.

ಸ್ಪೋರ್ಟ್ಸ್‌ಸ್ಕ್ರೀನ್‌ ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ರೈನಾ, ‘ತಂಡ ಸಂಕಷ್ಟದಲ್ಲಿದ್ದಾಗ ರೋಹಿತ್‌ ಕೈಗೊಳ್ಳುವ ಕೆಲ ನಿರ್ಧಾರಗಗಳು ತಂಡದ ಒತ್ತಡವನ್ನು ಕಡಿಮೆ ಮಾಡುತ್ತವೆ. ನಾಯಕನಿಗೆ ಹೊರಗಿನಿಂದ ಸಲಹೆಗಳು ಬರುತ್ತವೆಯಾದರೂ, ಯಾವಾಗ ಏನು ಮಾಡಬೇಕು ಎಂಬುದನ್ನು ನಾಯಕನೇ ನಿರ್ಧರಿಸಬೇಕು. ರೋಹಿತ್‌ ಸಾಕಷ್ಟು ಟ್ರೋಫಿಗಳನ್ನು ಗೆದ್ದುಕೊಂಡಿದ್ದಾರೆ. ಅದರಲ್ಲಿ ಅಚ್ಚರಿಪಡುವಂತದ್ದೇನೂ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.