ADVERTISEMENT

IND vs SL: ಭಾರತ ತಂಡದ ಶುಭಾರಂಭ

ಮೊದಲ ಟಿ20 ಪಂದ್ಯ: ನಾಯಕ ಸೂರ್ಯಕುಮಾರ್‌ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 19:15 IST
Last Updated 27 ಜುಲೈ 2024, 19:15 IST
ಸೂರ್ಯಕುಮಾರ್‌ ಯಾದವ್
ಸೂರ್ಯಕುಮಾರ್‌ ಯಾದವ್   

ಕ್ಯಾಂಡಿ (ಶ್ರೀಲಂಕಾ), (ಎಎಫ್‌ಪಿ): ನೂತನ ನಾಯಕ ಸೂರ್ಯಕುಮಾರ್ ಯಾದವ್ ಆಕ್ರಮಣಕಾರಿ ಅರ್ಧಶತಕ ಗಳಿಸಿದ ನಂತರ ಶ್ರೀಲಂಕಾ ತಂಡದ ಪ್ರತಿಹೋರಾಟಕ್ಕೆ ಭಾರತದ ಬೌಲರ್‌ಗಳು ತಡೆ ಹಾಕಿದರು. ಶನಿವಾರ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 43 ರನ್‌ಗಳಿಂದ ಜಯಗಳಿಸಿತು.

ಸೂರ್ಯಕುಮಾರ್‌ ಆ ಮೂಲಕ ನಾಯಕನಾಗಿ ಉತ್ತಮ ಆರಂಭ ಮಾಡಿದರು. ಅವರು ಕೇವಲ 26 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳ ನೆರವಿನಿಂದ 56 ರನ್ ಹೊಡೆದರು. ಭಾರತ 20 ಓವರುಗಳಲ್ಲಿ 7 ವಿಕೆಟ್‌ಗೆ 213 ರನ್‌ಗಳ ದೊಡ್ಡ ಮೊತ್ತ ಗಳಿಸಿತು. ಉಪಯುಕ್ತ ಆಟವಾಡಿದ ವಿಕೆಟ್‌ ಕೀಪರ್ ರಿಷಭ್ ಪಂತ್ (49, 33 ಎಸೆತ) ಜೊತೆ ಸೂರ್ಯ ಮೂರನೇ ವಿಕೆಟ್‌ಗೆ 76 ರನ್ ಸೇರಿಸಿದ್ದರು.

ಶ್ರೀಲಂಕಾ ಉತ್ತಮ ಆರಂಭ ಮಾಡಿತು. ನಿಸಾಂಕ (79, 48 ಎಸೆತ) ಮತ್ತು ಕುಶಲ್ ಮೆಂಡಿಸ್‌ (45, 27ಎಸೆತ) ಲಂಕಾ ತಂಡಕ್ಕೆ ಕೇವಲ 8.4 ಓವರುಗಳಲ್ಲಿ 84 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಒಂದು ಹಂತದಲ್ಲಿ 14 ಓವರುಗಳಲ್ಲಿ 1 ವಿಕೆಟ್‌ಗೆ 140 ರನ್ ಗಳಿಸಿದ್ದ ಆತಿಥೇಯರು ಗೆಲುವಿನತ್ತ ದಾಪುಗಾಲು ಹಾಕಿದ್ದರು. ಆದರೆ ನಂತರ ಭಾರತದ ಬೌಲರ್‌ಳು ತಿರುಗೇಟು ನೀಡಿದರು. ತಂಡ 19.2 ಓವರುಗಳಲ್ಲಿ 170 ರನ್ನಿಗೆ ಕುಸಿಯಿತು.

ADVERTISEMENT

ಆರಂಭ ಆಟಗಾರರನ್ನು ಬಿಟ್ಟರೆ, ಕುಶಲ್ ಪೆರೀರಾ ಗಳಿಸಿದ 20 ರನ್‌ಗಳೇ ದೊಡ್ಡ ಮೊತ್ತ ಎನಿಸಿತು. ಉಳಿದ ಬ್ಯಾಟರ್‌ಗಳು ವಿಫಲರಾದರು. ಕೊನೆಯವರಾಗಿ ದಾಳಿಗಿಳಿದ ಲೆಗ್‌ಬ್ರೇಕ್‌ ಬೌಲರ್‌ ರಿಯಾನ್ ಪರಾಗ್ 5 ರನ್ನಿಗೆ 3 ವಿಕೆಟ್‌ ಪಡೆದು ಮಿಂಚಿದರು. ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಪಡೆದು ಲಂಕಾ ಕುಸಿತಕ್ಕೆ ಕಾಣಿಕೆ ನೀಡಿದರು.

ಟಾಸ್‌ ಗೆದ್ದ ಭಾರತಕ್ಕೆ ಯಶಸ್ವಿ ಜೈಸ್ವಾಲ್ (40) ಮತ್ತು ಶುಭಮನ್ ಗಿಲ್ (34) ಪವರ್‌ಪ್ಲೇ ಅವಧಿಯಲ್ಲಿ 74 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ನಂತರ ಸೂರ್ಯ ಮತ್ತು ಪಂತ್ ತಂಡಕ್ಕೆ ಆಧಾರವಾದರು.

ಸ್ಕೋರುಗಳು:

ಭಾರತ: 20 ಓವರುಗಳಲ್ಲಿ 7 ವಿಕೆಟ್‌ಗೆ 213 (ಯಶಸ್ವಿ ಜೈಸ್ವಾಲ್ 40, ಶುಭಮನ್ ಗಿಲ್ 34, ಸೂರ್ಯಕುಮಾರ್ ಯಾದವ್ 58, ರಿಷಭ್ ಪಂತ್ 49; ಮಥೀಶ ಪತಿರಾಣ 40ಕ್ಕೆ4);

ಶ್ರೀಲಂಕಾ: 19.2 ಓವರುಗಳಲ್ಲಿ 170 (ಪಥುಮ್ ನಿಸಾಂಕ 79, ಕುಸಲ್ ಮೆಂಡಿಸ್‌ 45, ಕುಶಲ್ ಪೆರೀರಾ 20; ಅರ್ಷದೀಪ್ ಸಿಂಗ್ 24ಕ್ಕೆ2, ಅಕ್ಷರ್ ಪಟೇಲ್ 38ಕ್ಕೆ2, ರಿಯಾನ್ ಪರಾಗ್‌ 5ಕ್ಕೆ3). ಪಂದ್ಯದ ಆಟಗಾರ: ಸೂರ್ಯಕುಮಾರ್‌ ಯಾದವ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.