
ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ದುಬೈ (ಪಿಟಿಐ): ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹಾಲಿ ಟಿ20 ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಅವರು ಐದು ಸ್ಥಾನಗಳಷ್ಟು ಬಡ್ತಿ ಪಡೆದಿದ್ದಾರೆ.
ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರನಾಗಿರುವ ಸೂರ್ಯ ಈ ಸರಣಿಯಲ್ಲಿ 32, ಅಜೇಯ 82 ಮತ್ತು ಅಜೇಯ 57 ರನ್ ಗಳಿಸಿದ್ದರು. ಅಭಿಷೇಕ್ ಶರ್ಮಾ ಮೊದಲ ಸ್ಥಾನ ಕಾಪಾಡಿಕೊಂಡಿದ್ದು, ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಅಫ್ಗಾನಿಸ್ತಾನದ ಬ್ಯಾಟರ್ ಇಬ್ರಾಹಿಂ ಜದ್ರಾನ್ ಎರಡು ಸ್ಥಾನ ಬಡ್ತಿ ಪಡೆದು 13ನೇ ಸ್ಥಾನದಲ್ಲಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಅವರು ಮೂರು ಸ್ಥಾನ ಮೇಲೇರಿ 15ನೇ ಸ್ಥಾನಕ್ಕೇರಿದ್ದಾರೆ. ಈ ಇಬ್ಬರೂ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು.
ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್ ಮುಜಿಬುರ್ ರಹಮಾನ್ ಅವರು 9ನೇ ಸ್ಥಾನಕ್ಕೇರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಎರಡನೇ ಪಂದ್ಯದಲ್ಲಿ ಅವರು 21 ರನ್ನಿಗೆ 4 ವಿಕೆಟ್ ಕಬಳಿಸಿದ್ದು, ಐದು ಸ್ಥಾನ ಮೇಲೇರಲು ನೆರವಾಗಿದೆ. ಜಸ್‌ಪ್ರೀತ್ ಬೂಮ್ರಾ (4 ಸ್ಥಾನ ಮೇಲೇರಿ 13ನೇ ಸ್ಥಾನ) ಮತ್ತು ರವಿ ಬಿಷ್ಣೋಯಿ (13 ಸ್ಥಾನ ಬಡ್ತಿ ಪಡೆದು 19ನೇ ಸ್ಥಾನ) ಕೂಡ ಪ್ರಗತಿ ಕಂಡಿದ್ದಾರೆ.
ಏಕದಿನ ಕ್ರಮಾಂಕಪಟ್ಟಿಯಲ್ಲಿ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಅವರು ಶ್ರೀಲಂಕಾ ವಿರುದ್ಧ ತೋರಿದ ಉತ್ತಮ ಆಟದಿಂದಾಗಿ ಪ್ರಗತಿ ಸಾಧಿಸಿದ್ದಾರೆ. ಬ್ರೂಕ್ 3 ಪಂದ್ಯಗಳಿಂದ 247 ರನ್ ಗಳಿಸಿದ್ದು, 17 ಸ್ಥಾನಗಳಷ್ಟು ಬಡ್ತಿ ಪಡೆದು 11ನೇ ಸ್ಥಾನಕ್ಕೇರಿದ್ದಾರೆ. ಅನುಭವಿ ರೂಟ್ 23 ರಿಂದ 17ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಇಂಗ್ಲೆಂಡ್‌ನ ಲೆಗ್ ಸ್ಪಿನ್ನರ್ ಅದಿಲ್ ರಶೀದ್ ಅವರು ಬೌಲರ್‌ಗಳ ವಿಭಾಗದಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಏಳು ವಿಕೆಟ್ ಪಡೆದಿದ್ದರಿಂದ ಅವರಿಗೆ ಆರು ಸ್ಥಾನಗಳಷ್ಟು ಮೇಲೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.