ADVERTISEMENT

ಏಷ್ಯಾ 19 ವರ್ಷದೊಳಗಿನವರ ಕ್ರಿಕೆಟ್‌: ಸೂರ್ಯವಂಶಿ ‘ವೈಭವ’; ಭಾರತ ಫೈನಲ್‌ಗೆ

ಪಿಟಿಐ
Published 6 ಡಿಸೆಂಬರ್ 2024, 15:12 IST
Last Updated 6 ಡಿಸೆಂಬರ್ 2024, 15:12 IST
<div class="paragraphs"><p>ವೈಭವ್ ಸೂರ್ಯವಂಶಿ </p></div>

ವೈಭವ್ ಸೂರ್ಯವಂಶಿ

   

ಎಪಿ/ಪಿಟಿಐ ಚಿತ್ರ

ಶಾರ್ಜಾ: ಉದಯೋನ್ಮುಖ ಬ್ಯಾಟರ್ ವೈಭವ್ ಸೂರ್ಯವಂಶಿ (67, 36ಎ) ಮತ್ತೊಮ್ಮೆ ಮಿಂಚಿದರು. ಬಿಹಾರದ ಈ ಬಾಲಕನ ಮಿಂಚಿನ ಅರ್ಧ ಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾ ಕಪ್ ಏಕದಿನ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಶ್ರೀಲಂಕಾ ತಂಡದ ಮೇಲೆ ಶುಕ್ರವಾರ ಏಳು ವಿಕೆಟ್‌ಗಳಿಂದ ಗೆದ್ದು ಫೈನಲ್‌ ತಲುಪಿತು.

ADVERTISEMENT

ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆರು ಬೌಂಡರಿಗಳ ಜೊತೆ ಐದು ಸಿಕ್ಸರ್‌ಗಳನ್ನೆತ್ತಿದ ವೈಭವ್ ಭಾರತದ ಗೆಲುವನ್ನು ತ್ವರಿತಗೊಳಿಸಿದರು.

ಮೊದಲು ಆಡಿದ ಶ್ರೀಲಂಕಾ 46.2 ಓವರುಗಳಲ್ಲಿ 173 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ವೈಭವ್ ಮತ್ತು ಇತರ ಅಗ್ರ ಆಟಗಾರರ ಉಪಯುಕ್ತ ಆಟದಿಂದ ಭಾರತ 21.4 ಓವರುಗಳಲ್ಲಿ 3 ವಿಕೆಟ್‌ಗೆ 175 ರನ್ ಹೊಡೆದು ಸಂಭ್ರಮಿಸಿತು.

ಭಾರತ ತಂಡವು ಭಾನುವಾರ ನಡೆಯುವ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡ ಏಳು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಸೋಲಿಸಿತು.

ದುಲ್ನಿತ್ ಸಿಗೇರಾ ಮಾಡಿದ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ 31 ರನ್‌ಗಳು ಹರಿದುಬಂದವು. 13 ವರ್ಷ ವಯಸ್ಸಿನ ವೈಭವ್ ಆ ಓವರ್‌ನಲ್ಲಿ ಮೂರು ಸಿಕ್ಸರ್‌, ಎರಡು ಬೌಂಡರಿ ಚಚ್ಚಿದ್ದರು. ಮೊದಲ ವಿಕೆಟ್‌ಗೆ ವೈಭವ್‌– ಆಯುಷ್‌ ಮ್ಹಾತ್ರೆ ಕೇವಲ 8 ಓವರುಗಳಲ್ಲಿ 87 ರನ್ ಸೇರಿಸಲು ಸೇರಿಸಿದ್ದರು.

ಮೊದಲು ಆಡಿದ ಲಂಕಾ ಪರ ಲಕ್ವಿನ್ ಅಭಯಸಿಂಘೆ (69, 110ಎ) ಮತ್ತು ಶಾರುಜನ್ ಷಣ್ಮುಗನಾಥನ್ (42, 78ಎ) ಮಾತ್ರ ಭಾರತದ ಬೌಲರ್‌ಗಳಿಗೆ ಪ್ರತಿರೋಧ ತೋರಿದರು. ಏಳು ಮಂದಿ ಎರಡಂಕಿ ಮೊತ್ತವನ್ನೂ ಗಳಿಸಲಿಲ್ಲ. ಭಾರತದ ಕಡೆ ಚೇತನ್ ಶರ್ಮಾ (34ಕ್ಕೆ3) ಯಶಸ್ವಿ ಎನಿಸಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 46.2 ಓವರುಗಳಲ್ಲಿ 173 (ಶಾರುಜನ್ ಷಣ್ಮುಗನಾಥನ್ 42, ಲಕ್ವಿನ್ ಅಭಯಸಿಂಘೆ 69, ಚೇತನ್ ಶರ್ಮಾ 34ಕ್ಕೆ3, ಕಿರಣ್ ಚೋರ್ಮಲೆ 32ಕ್ಕೆ2, ಆಯುಷ್‌ ಮ್ಹಾತ್ರೆ 37ಕ್ಕೆ2); ಭಾರತ: 21.4 ಓವರುಗಳಲ್ಲಿ 3 ವಿಕೆಟ್‌ಗೆ 175 (ಆಯುಷ್‌ ಮ್ಹಾತ್ರೆ 34, ವೈಭವ್ ಸೂರ್ಯವಂಶಿ 67, ಮೊಹಮದ್‌ ಅಮಾನ್ ಔಟಾಗದೇ 25). ಪಂದ್ಯದ ಆಟಗಾರ: ವೈಭವ್ ಸೂರ್ಯವಂಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.