
ಬೆಂಗಳೂರು: ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮತ್ತೊಂದು ಆಘಾತಕಾರಿ ಸೋಲಿನೊಂದಿಗೆ ಈ ಬಾರಿಯ ಅಭಿಯಾನ ಮುಗಿಸಿತು. ಅಹಮದಾಬಾದ್‌ನಲ್ಲಿ ಸೋಮವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಮಯಂಕ್ ಅಗರವಾಲ್ ಬಳಗವು ಸೂಪರ್ ಓವರ್‌ನಲ್ಲಿ ಅನನುಭವಿ ತ್ರಿಪುರ ತಂಡಕ್ಕೆ ಶರಣಾಯಿತು.
ಕ್ವಾರ್ಟರ್ ಫೈನಲ್ ರೇಸ್‌ನಿಂದ ಈ ಮೊದಲೇ ಹೊರಬಿದ್ದಿದ್ದ ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು ಗೆಲುವಿನೊಡನೆ ಅಭಿಯಾನ ಮುಗಿಸುವ ಗುರಿಯಲ್ಲಿತ್ತು. ಆದರೆ, ನಾಯಕ ಮಣಿಶಂಕರ್ ಮುರಾಸಿಂಗ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ತ್ರಿಪುರ ತಂಡವು ರೋಚಕ ಗೆಲುವು ಸಾಧಿಸಿ, ಮಯಂಕ್ ಪಡೆಗೆ ಆಘಾತ ನೀಡಿತು. ತ್ರಿಪುರ ತಂಡವು ದೆಹಲಿ ತಂಡಕ್ಕೂ ಸೋಲುಣಿಸಿತ್ತು.
ಏಳು ಪಂದ್ಯಗಳ ಪೈಕಿ ಎರಡನ್ನು ಗೆದ್ದು, ಐದರಲ್ಲಿ ಸೋತಿರುವ ಕರ್ನಾಟಕ ತಂಡವು 8 ಅಂಕಗಳೊಂದಿಗೆ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಅಷ್ಟೇ ಅಂಕ ಗಳಿಸಿರುವ ತ್ರಿಪುರ ತಂಡವು ಆರನೇ ಸ್ಥಾನ ಗಳಿಸಿತು. ಜಾರ್ಖಂಡ್ (28 ಅಂಕ), ರಾಜಸ್ಥಾನ (24) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದವು.
ನಿಗದಿತ ಓವರ್‌ನಲ್ಲಿ ಉಭಯ ತಂಡಗಳು 197 ರನ್ ಗಳಿಸಿ ರೋಚಕ ಟೈ ಆದ ಬಳಿಕ ಪಂದ್ಯವು ಸೂಪರ್ ಓವರ್‌ಗೆ ಸಾಗಿತು. ಮೊದಲು ಬ್ಯಾಟ್ ಮಾಡಿದ ತ್ರಿಪುರ ತಂಡವು ವಿದ್ಯಾಧರ ಪಾಟೀಲ್ ಓವರ್‌ನಲ್ಲಿ 22 ರನ್ ಸೂರೆ ಮಾಡಿತು. ಮಣಿಶಂಕರ್ (ಔಟಾಗದೇ 5;2ಎ) ಮತ್ತು ಶ್ರೀದಂ ಪಾಲ್ (ಔಟಾಗದೇ 16;4ಎ) ಅಬ್ಬರಿಸಿದರು.
23 ರನ್‌ಗಳ ಕಠಿಣ ಗುರಿ ಪಡೆದ ಕರ್ನಾಟಕ ತಂಡವು 1 ವಿಕೆಟ್‌ಗೆ 18 ರನ್ ಗಳಿಸಲಷ್ಟೇ ಶಕ್ತವಾಯಿತು. ಅಭಿನವ್ ಮನೋಹರ್ (ಔಟಾಗದೇ 11;3ಎ) ಹೋರಾಟ ತೋರಿದರು. ಮೂರನೇ ಎಸೆತದಲ್ಲಿ ಆರ್.ಸ್ಮರಣ್ ಖಾತೆ ತೆರೆಯುವ ಮುನ್ನ ಔಟಾದರು. ಮೆಕ್ನಿಲ್ ನೊರೊನ್ಹಾ 2 ಎಸೆತಗಳಲ್ಲಿ ಔಟಾಗದೇ 5 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ದುಕೊಂಡಿತ್ತು. ಬಿ.ಆರ್. ಶರತ್ (44;22ಎ) ಮತ್ತು ಮಯಂಕ್ (29;26ಎ) ಅವರು ಮೊದಲ ವಿಕೆಟ್‌ಗೆ ವೇಗದ 57 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಬಳಿಕ ದೇವದತ್ತ ಪಡಿಕ್ಕಲ್ (32;24ಎ) ಮತ್ತು ಮೆಕ್ನಿಲ್ (34;21ಎ) ಉಪಯುಕ್ತ ಕಾಣಿಕೆ ನೀಡಿದ್ದರು. ಕೊನೆಯಲ್ಲಿ ಸ್ಮರಣ್ ಮಿಂಚಿನ 24 ರನ್ (11ಎ) ಗಳಿಸಿ ತಂಡದ ಮೊತ್ತವನ್ನು ದ್ವಿಶತಕದ ಸಮೀಪ ತಲುಪಿಸಲು ನೆರವಾಗಿದ್ದರು. ಅನುಭವಿಗಳಾದ ಕರುಣ್ ನಾಯರ್, ಶ್ರೇಯಸ್ ಗೋಪಾಲ್, ವೈಶಾಖ ವಿಜಯಕುಮಾರ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
198 ರನ್‌ಗಳ ಸವಾಲಿನ ಗುರಿ ಪಡೆದ ತ್ರಿಪುರ ತಂಡಕ್ಕೆ ಹನುಮ ತಿವಾರಿ (36;49ಎ) ಮತ್ತು ಶ್ರೀದಾಂ ಪಾಲ್ (28;15ಎ) ಮಿಂಚಿನ ಆರಂಭ ನೀಡಿದರು. ಈ ಜೋಡಿಯು ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 65 ರನ್ ಪೇರಿಸಿತ್ತು. ಆದರೆ, 41 ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳು ಪತನಗೊಂಡು ಕರ್ನಾಟಕ ತಂಡವು ಗೆಲುವಿನತ್ತ ಸಾಗಿತ್ತು. ಒಂದು ಹಂತದಲ್ಲಿ ನಾಯಕ ಮಣಿಶಂಕರ್ ಮುರಾಸಿಂಗ್ (69;35ಎ, 4X2, 6X6) ವಿರೋಚಿತ ಆಟವಾಡಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಕೊನೆಯ ಎಸೆತದಲ್ಲಿ ಅವರು ರನೌಟ್ ಆಗುವುದರೊಂದಿಗೆ ಪಂದ್ಯ ಟೈ ಆಯಿತು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 197 (ಬಿ.ಆರ್.ಶರತ್ 44, ಮಯಂಕ್ ಅಗರವಾಲ್ 29, ದೇವದತ್ತ ಪಡಿಕ್ಕಲ್ 32, ಮ್ಯಾಕ್ನಿಲ್ ನೊರೊನ್ಹಾ 34, ಆರ್.ಸ್ಮರಣ್ 24; ಮಣಿಶಂಕರ್ ಮುರಾಸಿಂಗ್ 30ಕ್ಕೆ 2, ಶಾರುಕ್ ಹುಸೇನ್ 35ಕ್ಕೆ 2). ತ್ರಿಪುರ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 197 (ಹನುಮ ತಿವಾರಿ 36, ಶ್ರೀದಾಂ ಪಾಲ್ 28, ಮಣಿಶಂಕರ್ ಮುರಾಸಿಂಗ್ 69; ಶುಭಾಂಗ್ 31ಕ್ಕೆ 2, ಪ್ರವೀಣ್ ದುಬೆ 6ಕ್ಕೆ 2). ಫಲಿತಾಂಶ: ತ್ರಿಪುರ ತಂಡಕ್ಕೆ ಸೂಪರ್ ಓವರ್‌ನಲ್ಲಿ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.