ADVERTISEMENT

ಮುಂಬೈ ಮುಡಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ; ಮಧ್ಯಪ್ರದೇಶಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 16:31 IST
Last Updated 15 ಡಿಸೆಂಬರ್ 2024, 16:31 IST
<div class="paragraphs"><p>ಸೂರ್ಯ, ರಹಾನೆ</p></div>

ಸೂರ್ಯ, ರಹಾನೆ

   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಸೇರಿದ್ದ 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಮುಂದೆ ಮುಂಬೈ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಗೆ ಮುತ್ತಿಟ್ಟರು. 

ತಾರಾ ವರ್ಚಸ್ಸಿನ ಆಟಗಾರರು ತುಂಬಿರುವ ಮುಂಬೈ ತಂಡವು ನಿರೀಕ್ಷೆಯಂತೆಯೇ ಫೈನಲ್‌ನಲ್ಲಿ ಮಧ್ಯಪ್ರದೇಶ ಎದುರು 5 ವಿಕೆಟ್‌ಗಳಿಂದ ಜಯಿಸಿತು. ಮುಂಬೈ ತಂಡವು ಎರಡನೇ ಬಾರಿಗೆ ಈ ಪ್ರಶಸ್ತಿ ಗೆದ್ದಿತು. 2022ರ–23ರಲ್ಲಿ ಮುಂಬೈ ಟ್ರೋಫಿ ಜಯಿಸಿದಾಗ ನಾಯಕರಾಗಿದ್ದ ಅಜಿಂಕ್ಯ ರಹಾನೆ ಈ ಬಾರಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. 

ADVERTISEMENT

ಫೈನಲ್‌ನಲ್ಲಿ ಭಾರತ ತಂಡದ ಆರು ಆಟಗಾರರಿದ್ದ ಮುಂಬೈ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಶಾರ್ದೂಲ್ ಠಾಕೂರ್ ಮತ್ತು ರಾಯಸ್ಟನ್ ದಿಯಾಸ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಮಧ್ಯಪ್ರದೇಶ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 174 ರನ್ ಗಳಿಸಿತ್ತು. ಮಧ್ಯಪ್ರದೇಶ ತಂಡದ ನಾಯಕ ರಜತ್ ಪಾಟೀದಾರ್ 40 ಎಸೆತಗಳಲ್ಲಿ ಅಜೇಯ 81 ರನ್‌ ಗಳಿಸಿದರು. ಅರ್ಧ ಡಜನ್ ಬೌಂಡರಿ ಮತ್ತು ಅಷ್ಟೇ ಸಂಖ್ಯೆ ಸಿಕ್ಸರ್‌ಗಳನ್ನು ಸಿಡಿಸಿದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ರಜತ್ ಬೆಂಗಳೂರು ಅಭಿಮಾನಿಗಳಿಗೆ ಚಿರಪರಿಚಿತರು. ಅದರಿಂದಾಗಿ ಪಂದ್ಯದುದ್ದಕ್ಕೂ ಗ್ಯಾಲರಿಯಿಂದ ಆರ್‌ಸಿಬಿ..ಆರ್‌ಸಿಬಿ.. ಘೋಷಣೆಗಳು ಮೊಳಗುತ್ತಲೇ ಇದ್ದವು. ಅದಕ್ಕೆ ತಕ್ಕಂತೆ ಅವರೂ ತಮ್ಮ ಬ್ಯಾಟಿಂಗ್ ಮೂಲಕ ರಂಜಿಸಿದರು. ಆದರೆ, ಅವರ ತಂಡದ ಬೌಲರ್‌ಗಳು ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. 

ಟೂರ್ನಿಯುದ್ದಕ್ಕೂ ಮಿಂಚಿರುವ ಅಜಿಂಕ್ಯ ರಹಾನೆ (37; 30ಎ), ಸೂರ್ಯಕುಮಾರ್ ಯಾದವ್ (48; 35ಎ) ಹಾಗೂ ಸೂರ್ಯಾಂಶ್ ಶೇಡಗೆ (ಅಜೇಯ 36; 15ಎ) ಅವರ ಅಬ್ಬರದ ಆಟದಿಂದಾಗಿ ತಂಡವು 17.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 180 ರನ್ ಗಳಿಸಿ ಜಯಿಸಿತು.  

ಮುಂಬೈ ತಂಡದ ಆರಂಭಿಕ ಬ್ಯಾಟರ್ ಪೃಥ್ವಿ ಶಾ (10), ಶ್ರೇಯಸ್ (16) ಮತ್ತು ಶಿವಂ ದುಗೆ (9) ಅವರು ಬೇಗನೆ ಔಟಾದರು. ಈ ಸಂದರ್ಭಗಳಲ್ಲಿ ಇನಿಂಗ್ಸ್ ಮೇಲೆ ಹಿಡಿತ ಸಾಧಿಸುವ ಅವಕಾಶ ರಜತ್ ಬಳಗಕ್ಕೆ ಇತ್ತು. ಆದರೆ, ಅವರ ಪ್ರಯತ್ನಕ್ಕೆ ಸೂರ್ಯಕುಮಾರ್ ಮತ್ತು ಸೂರ್ಯಾಂಶ್ ಅವರು ಅಡ್ಡಗಾಲು ಹಾಕಿದರು. ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಜಯದ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು:

ಮಧ್ಯಪ್ರದೇಶ: 20 ಓವರ್‌ಗಳಲ್ಲಿ 8ಕ್ಕೆ174 (ಸುಧ್ರಾಂಶು ಸೇನಾಪತಿ 23, ರಜತ್ ಪಾಟೀದಾರ್ ಔಟಾಗದೆ 81, ಶಾರ್ದೂಲ್ ಠಾಕೂರ್ 41ಕ್ಕೆ2, ರಾಯಸ್ಟನ್ ದಾಸ್ 32ಕ್ಕೆ2) ಮುಂಬೈ: 17.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 180 (ಅಜಿಂಕ್ಯ ರಹಾನೆ 37, ಸೂರ್ಯಕುಮಾರ್ ಯಾದವ್ 48, ಸೂರ್ಯಾಂಶ್ ಶೆಡಗೆ ಔಟಾಗದೆ 36, ತ್ರಿಪುರೇಶ್ ಸಿಂಗ್ 34ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ 5 ವಿಕೆಟ್ ಜಯ. ಪಂದ್ಯಶ್ರೇಷ್ಠ: ಸೂರ್ಯಾಂಶ್ ಶೆಡಗೆ.  ಸರಣಿ ಶ್ರೇಷ್ಠ: ಅಜಿಂಕ್ಯ ರಹಾನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.