ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ಕರ್ನಾಟಕ ತಂಡಕ್ಕೆ ಗೆಲುವಿನ ‘ಹ್ಯಾಟ್ರಿಕ್'

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 16:04 IST
Last Updated 6 ನವೆಂಬರ್ 2021, 16:04 IST
ಮನೀಷ್ ಪಾಂಡೆ
ಮನೀಷ್ ಪಾಂಡೆ   

ಗುವಾಹಟಿ: ನಾಯಕ ಮನೀಷ್ ಪಾಂಡೆಯ ಅರ್ಧಶತಕ ಮತ್ತು ವೈಶಾಖ್ ವಿಜಯಕುಮಾರ್ ಅವರ ನಿಖರ ದಾಳಿಯ ಬಲದಿಂದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಸರ್ವಿಸಸ್‌ ವಿರುದ್ಧ ಜಯಿಸಿತು.

ಬಿ ಗುಂಪಿನಲ್ಲಿ ಸತತ ಮೂರು ಪಂದ್ಯಗಳನ್ನು ಜಯಿಸಿ ‘ಹ್ಯಾಟ್ರಿಕ್’ ಸಾಧಿಸಿತು. ಟಾಸ್ ಗೆದ್ದ ಸರ್ವಿಸಸ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 142 ರನ್ ಗಳಿಸಿತು. ಅದಕ್ಕುತ್ತರವಾಗಿ ಸರ್ವಿಸಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 109 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪಾಂಡೆ ಬಳಗವು 33 ರನ್‌ಗಳಿಂದ ಗೆದ್ದಿತು.

ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೂರನೇ ಓವರ್‌ನಲ್ಲಿ ದೇವದತ್ತ ಪಡಿಕ್ಕಲ್ ಔಟಾದರು. ಮಯಂಕ್ ಅಗರವಾಲ್ (28) ಮತ್ತು ಪಾಂಡೆ (51; 48ಎಸೆತ) ಎರಡನೇ ವಿಕೆಟ್‌ಗೆ 43 ರನ್‌ ಸೇರಿಸಿದರು. ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು. ಆದರೆ 11ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ರಾಹುಲ್ ಸಿಂಗ್ ಮುರಿದರು. ಮಯಕ್ ಅವಿಕೆಟ್ ಗಳಿಸಿದರು. ಕರುಣ್ ನಾಯರ್ ಕೇವಲ ಆರು ರನ್ ಗಳಿಸಿದ ನಿರ್ಗಮಿಸಿದರು.

ADVERTISEMENT

ಅನಿರುದ್ಧ ಜೋಶಿ (23, 16ಎ) ರನ್‌ ಗಳಿಕೆಯ ವೇಗ ಹೆಚ್ಚಿಸಲು ಪ್ರಯತ್ನಿಸಿದರು. ಇನ್ನೊಂದು ಕಡೆ ಮನೀಷ್ ಕೂಡ ಬೀಸಾಟವಾಡಿದರು. ಇದರಿಂದಾಗಿ ಬೌಲರ್‌ಗಳಿಗೆ ಒತ್ತಡ ಹೆಚ್ಚಿತು. ಆದರೆ, ಸಚ್ಚಿದಾನಂದ ಪಾಂಡೆಯ ಬೌಲಿಂಗ್‌ನಲ್ಲಿ ಮನೀಷ್ ಔಟಾದರು.

ಕ್ರೀಸ್‌ಗೆ ಕೆ. ಗೌತಮ್ ಮತ್ತು ಬಿ.ಆರ್. ಶರತ್ ಹೆಚ್ಚು ರನ್ ಗಳಿಸಲಿಲ್ಲ. ಅನಿರುದ್ಧ ತುಸು ಹೋರಾಟ ತೋರಿ, ಕೊನೆಯ ಓವರ್‌ನಲ್ಲಿ ರನೌಟ್ ಆದರು.

ಗುರಿ ಬೆನ್ನಟ್ಟಿದ ಸರ್ವಿಸಸ್ ತಂಡಕ್ಕೆ ಆರಂಭದಲ್ಲಿಯೇ ಗೌತಮ್ ಮತ್ತು ಸುಚಿತ್ ಜೋಡಿಯು ಪೆಟ್ಟುಕೊಟ್ಟಿತು. ಇದರಿಂದಾಗಿ ಕೇವಲ 20 ರನ್‌ ಗಳಿಸುವಷ್ಟರಲ್ಲಿ ತಂಡವು ಎರಡು ವಿಕೆಟ್ ಕಳೆದುಕೊಂಡಿತ್ತು. ಗೆಹ್ಲೋಟ್ ರಾಹುಲ್ ಸಿಂಗ್ (34 ರನ್) ಮತ್ತು ಅಮಿತ್ ಪಚಾರ್ (23 ರನ್) ಅವರು ರನ್‌ ಗಳಿಸುವ ಪ್ರಯತ್ನ ಮಾಡಿದರು. ಆದರೆ, ಎಂಬಿ. ದರ್ಶನ್ ಮತ್ತು ವೈಶಾ ವಿಜಯಕುಮಾರ್ (3 ವಿಕೆಟ್) ಅವರ ಬೌಲಿಂಗ್ ಮುಂದೆ ಸರ್ವಿಸಸ್‌ ತಲೆಬಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.