ADVERTISEMENT

T20 WC | ಭಾರತ ತಂಡವನ್ನು ‘ಚೋಕರ್ಸ್‘ ಎಂದರೆ ತಪ್ಪಲ್ಲ: ಕಪಿಲ್‌ ದೇವ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2022, 11:05 IST
Last Updated 11 ನವೆಂಬರ್ 2022, 11:05 IST
   

ನವದೆಹಲಿ: ಐಸಿಸಿ ಟಿ–20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಭಾರತ ಕ್ರಿಕೆಟ್ ತಂಡದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು, ‌ಮಾಜಿ ಆಟಗಾರರು ಭಾರತ ತಂಡದ ಪ್ರದರ್ಶನಕ್ಕೆ ಕಿಡಿ ಕಾರುತ್ತಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್‌ ಗೆದ್ದ ತಂಡದ ನಾಯಕ ಕಪಿಲ್‌ ದೇವ್ ಅವರು ಸೋತ ಭಾರತ ತಂಡವನ್ನು ‘ಚೋಕರ್ಸ್‌‘ ಎಂದು ಕರೆದಿದ್ದಾರೆ.

‘ಭಾರತ ತಂಡವನ್ನು ಚೋಕರ್ಸ್‌ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಕೊನೆವರೆಗೂ ಬಂದು ಸೋಲುತ್ತಾರೆ‘ ಎಂದು ಕಪಿಲ್ ದೇವ್‌ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಅಲ್ಲದೇ ಇದೇ ವೇಳೆ ಭಾರತ ತಂಡವನ್ನು ಅತಿಯಾಗಿ ಟೀಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ಭಾರತ ತಂಡವು ಕೆಟ್ಟ ಆಟ ಆಡಿದೆ ನಿಜ. ಆದರೆ ನಾವು ಆಟಗಾರರನ್ನು ತೀವ್ರವಾಗಿ ಟೀಕೆ ಮಾಡುವುದು ಬೇಡ. ಒಂದು ಪಂದ್ಯದಿಂದ ಇಡೀ ತಂಡವನ್ನು ಟೀಕೆಗೆ ಗುರಿಪಡಿಸುವುದು ಸರಿಯಲ್ಲ‘ ಎಂದು ಅವರು ಹೇಳಿದ್ದಾರೆ.

ಗುರುವಾರ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಸೋಲು ಅನುಭಿಸಿತ್ತು. ‌ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 168 ರನ್‌ ಗಳಿಸಿತು.

ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡ ವಿಕೆಟ್‌ ನಷ್ಟವಿಲ್ಲದೇ ಕೇವಲ 16 ಓವರ್‌ಗಳಲ್ಲಿ 170 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.