ADVERTISEMENT

ಟಿ20 ವಿಶ್ವಕಪ್ | ಭಾರತ–ಐರ್ಲೆಂಡ್ ಹಣಾಹಣಿ ಇಂದು: ರೋಹಿತ್ ಬಳಗಕ್ಕೆ ಶುಭಾರಂಭದ ಛಲ

ಪಿಟಿಐ
Published 4 ಜೂನ್ 2024, 23:45 IST
Last Updated 4 ಜೂನ್ 2024, 23:45 IST
<div class="paragraphs"><p>ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ</p></div>

ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

   

ನ್ಯೂಯಾರ್ಕ್: ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಈ ಹಿಂದೆ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಡಿದ್ದ ಸಂತಸ ಅನುಭವಿಸಿದ್ದಾರೆ.

ಆದರೆ ಸದ್ಯ ತಂಡದಲ್ಲಿರುವ ಇನ್ನುಳಿದ ಆಟಗಾರರಿಗೆ ಅಂತಹದೊಂದು ಅನುಭವ ಲಭಿಸಿಲ್ಲ. ಜಸ್‌ಪ್ರೀತ್ ಬೂಮ್ರಾ ಮತ್ತು ರವೀಂದ್ರ ಜಡೇಜ ಸೇರಿದಂತೆ ತಂಡದಲ್ಲಿರುವ ಇನ್ನುಳಿದ ಯುವ ಆಟಗಾರರು ಐಸಿಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಲು ಕಾದಿದ್ದಾರೆ. ಈಗ ಅಂತಹದೊಂದು ಅವಕಾಶ ಲಭಿಸಿದೆ. 

ADVERTISEMENT

ಇಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎ ಗುಂಪಿನಲ್ಲಿರುವ ಭಾರತ ತಂಡವು ಬುಧವಾರ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಐರ್ಲೆಂಡ್ ಬಳಗವನ್ನು ಎದುರಿಸಲಿದೆ.   ‘ಹೊಸ ಬಾಟಲಿಯಲ್ಲಿ ಹಳೆ ಮದ್ಯ’ ಎಂಬಂತೆ ತನ್ನ ಹಳೆಯ ಸಿದ್ಧಸೂತ್ರವಾದ ಸ್ಪಿನ್ ಶಕ್ತಿಯೊಂದಿಗೆ ಕಣಕ್ಕಿಳಿಯುತ್ತಿದೆ.  ಟೂರ್ನಿಯಲ್ಲಿ ಇದುವರೆಗೆ ನಡೆದ ಪಂದ್ಯಗಳಲ್ಲಿ ಬ್ಯಾಟರ್‌ಗಳು ರನ್‌ಗಳ ಹೊಳೆ ಹರಿಸಲು ಸಾಧ್ಯವಾಗಿಲ್ಲ. ಹೊಚ್ಚಹೊಸ ಪಿಚ್‌ಗಳು ಇದಕ್ಕೆ ಆಸ್ಪದ ಕೊಡುತ್ತಿಲ್ಲ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕಂಡುಬಂದ ಅಬ್ಬರದ ಬ್ಯಾಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಕಾಣಸಿಗುತ್ತಿಲ್ಲ. 

ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ರೋಹಿತ್ ಬಳಗವು ಸೋತಿತ್ತು. ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಆ ಪಂದ್ಯದ ನಂತರ ತಮ್ಮ ಮೇಲೆಯೇ ದೃಷ್ಟಿ ಇಟ್ಟಿದ್ದ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ರೋಹಿತ್ ಪ್ರಯತ್ನಿಸಿದ್ದರು.  ವಿರಾಟ್ ಕೊಹ್ಲಿ ಆ ಟೂರ್ನಿಯಲ್ಲಿ 765 ರನ್‌ ಗಳಿಸಿದ್ದರು.  ಕೆಲವೊಮ್ಮೆ ಶ್ರೇಷ್ಠ ಆಟಗಾರರಿದ್ದರೂ ತಂಡವು ಅತ್ಯುನ್ನತ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವುದಿಲ್ಲವೆಂಬ ಮಾತು ಭಾರತ ತಂಡಕ್ಕೆ ಅನ್ವಯಿಸುತ್ತದೆ. 37 ವರ್ಷದ ರೋಹಿತ್ ಅವರಿಗೆ ಇದು ಬಹುತೇಕ ಕೊನೆಯ ವಿಶ್ವಕಪ್ ಟೂರ್ನಿಯಾಗಲಿದೆ. ಗೆಲುವಿನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳುವ ಗುರಿ ಅವರದ್ದು.    

ಅನುಭವ ಮತ್ತು ಸಾಮರ್ಥ್ಯದಲ್ಲಿ ಭಾರತ ತಂಡವು ಐರ್ಲೆಂಡ್‌ಗಿಂತಲೂ ಬಲಶಾಲಿಯಾಗಿದೆ. ಆದರೆ ಜಯಿಸುವ ನೆಚ್ಚಿನ ತಂಡವಾಗಿ ಆಡುವ ಒತ್ತಡವೂ ರೋಹಿತ್ ಶರ್ಮಾ ಬಳಗಕ್ಕೆ ಇದೆ. ಐರ್ಲೆಂಡ್ ಮೊದಲಿನಿಂದಲೂ ತನ್ನ ದಿಟ್ಟ ಆಟಕ್ಕೆ ಹೆಸರಾಗಿದೆ.  ಭಾರತವು ಇಲ್ಲಿ ಆಡುತ್ತಿರುವ ಗುಂಪಿನಲ್ಲಿ ಪಾಕಿಸ್ತಾನ ಬಿಟ್ಟರೆ ಇನ್ನುಳಿದ ತಂಡಗಳಿಂದ ಕಠಿಣ ಸವಾಲು ಎದುರಾಗುವುದಿಲ್ಲ. ಐರ್ಲೆಂಡ್ ತಂಡದಲ್ಲಿ  ಪಾಲ್ ಸ್ಟರ್ಲಿಂಗ್, ಜೋಷ್ ಲಿಟಲ್, ಹ್ಯಾರಿ ಟೆಕ್ಟರ್, ಆ್ಯಂಡಿ ಬಾಲ್‌ಬಿರಿನಿ ಅವರು ಭಾರತಕ್ಕೆ ದಿಟ್ಟ ಸವಾಲೊಡ್ಡಬಲ್ಲ ಆಟಗಾರರಾಗಿದ್ದಾರೆ. 

ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.  ಆದರೆ ಕೊಹ್ಲಿ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುವುದಾದರೆ ಯಶಸ್ವಿ ಜೈಸ್ವಾಲ್ ಅವರಿಗೆ ರೋಹಿತ್ ಜೊತೆಗೆ ಇನಿಂಗ್ಸ್ ಆರಂಭಿಸುವ ಅವಕಾಶ ಸಿಗಬಹುದು.  ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅವರಿದ್ದಾರೆ.  

ಬೌಲರ್‌ಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಸಿಂಗ್ ಅವರ ಮೇಲೆ ನಿರೀಕ್ಷೆ ಇದೆ. ಆದರೆ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. 

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್.

ಐರ್ಲೆಂಡ್: ಪಾಲ್ ಸ್ಟರ್ಲಿಂಗ್ (ನಾಯಕ), ಮಾರ್ಕ್ ಅಡೇರ್, ರಾಸ್ ಅಡೇರ್, ಆ್ಯಂಡಿ ಬಾಲ್‌ಬಿರಿನಿ, ಕರ್ಟಿಸ್ ಕ್ಯಾಂಪರ್, ಗರೆತ್ ಡೆಲನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ತಿ, ನೀಲ್ ರಾಕ್ (ವಿಕೆಟ್‌ಕೀಪರ್), ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.

ಸೌಲಭ್ಯಗಳ ಬಗ್ಗೆ ಕ್ರಿಕೆಟಿಗರ ಅಸಮಾಧಾನ
ನ್ಯೂಯಾರ್ಕ್ (ಪಿಟಿಐ): ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುತ್ತಿರುವ ಅಮೆರಿಕದಲ್ಲಿ ಸೌಲಭ್ಯಗಳ ಕುರಿತು ಕೆಲವು ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೇಳಾಪಟ್ಟಿ, ಅಭ್ಯಾಸದ ಪಿಚ್‌, ಪ್ರಯಾಣ ಮತ್ತಿತರ ಸೌಲಭ್ಯಗಳ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಡಿ ಗುಂಪಿನಲ್ಲಿ ಆಡುತ್ತಿರುವ ಶ್ರೀಲಂಕಾ ತಂಡದ ನಾಯಕ ವನಿಂದು ಹಸರಂಗಾ ಹಾಗೂ ಬೌಲರ್‌ ಮಹೀಷ ತೀಕ್ಷಣ ಅವರು ಈಗ ಸೌಲಭ್ಯಗಳ ಬಗ್ಗೆ ದೂರಿದ್ದಾರೆ. ‘ಒಂದು ಪಂದ್ಯ ಮುಗಿಸಿ ಇನ್ನೊಂದರಲ್ಲಿ ಆಡಲು ಬೇರೆ ಕ್ರೀಡಾಂಗಣಕ್ಕೆ ಪ್ರಯಾಣಿಸುವ ಅವಧಿಯು ಸುದೀರ್ಘವಾಗಿದೆ. ನಾವು ಫ್ಲಾರಿಡಾದಿಂದ ಮಿಯಾಮಿ ಮೂಲಕ ಪ್ರಯಾಣಿಸುವ ವಿಮಾನಕ್ಕಾಗಿ ಎಂಟು ಗಂಟೆ ಕಾಯಬೇಕಾಯಿತು. ಅದಕ್ಕಾಗಿ ರಾತ್ರಿ 8 ಗಂಟೆಗೆ ಪ್ರಯಾಣ ಆರಂಭಿಸಬೇಕಿತ್ತು. ಆದರೆ ವಿಮಾನವು ಬೆಳಗಿನ ಜಾವ 5ಕ್ಕೆ ಹೊರಟಿತು. ಇದು ಸರಿಯಿಲ್ಲ. ಈ ರೀತಿಯ ವ್ಯವಸ್ಥೆಯಿಂದಾಗಿ ನಾವುಬಹುತೇಕ ಪ್ರತಿ ದಿನವೂ ಪ್ರಯಾಣ ಮಾಡಬೇಕಾಗಿದೆ’ ಎಂದು ತೀಕ್ಷಣ ದೂರಿದ್ದಾರೆ. ‘ಪ್ರಯಾಣದ ಒತ್ತಡ ಹಾಗೂ ವಿಶ್ರಾಂತಿ ಇಲ್ಲದ ಕಾರಣಕ್ಕೆ ಆಟಗಾರರ ಸಾಮರ್ಥ್ಯದಲ್ಲಿ ಕುಸಿತವಾಗಿದೆ. ಹೋಟೆಲ್‌ನಿಂದ ಅಭ್ಯಾಸದ ಕ್ರೀಡಾಂಗಣಕ್ಕೆ ಬರಲು ಕೂಡ ಸುಮಾರು ಒಂದು ಗಂಟೆ ಪ್ರಯಾಣಿಸಬೇಕಿದೆ. ಅದಕ್ಕಾಗಿ ಬೆಳಿಗ್ಗೆ 5ಕ್ಕೆ ಎದ್ದು ಹೊರಡಬೇಕು’ ಎಂದೂ ಹೇಳಿದರು. ಶ್ರೀಲಂಕಾ ತಂಡವು ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದೆ. ಭಾರತ ತಂಡದ ಆಟಗಾರರು ಇಲ್ಲಿರುವ ಸೌಲಭ್ಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.