ನರೇಂದ್ರ ಮೋದಿ ಕ್ರೀಡಾಂಗಣ
ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಟಿ–20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ನಡೆಸಲು ಅಹಮದಾಬಾದ್, ದೆಹಲಿ, ಕೋಲ್ಕತ್ತ, ಚೆನ್ನೈ ಹಾಗೂ ಮುಂಬೈ ನಗರಗಳನ್ನು ಬಿಸಿಸಿಐ ಆಯ್ಕೆ ಮಾಡಿದೆ. ಅಹಮಾದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಬೆಂಗಳೂರಿಗೆ ಆತಿಥ್ಯ ಸಿಕ್ಕಿಲ್ಲ.
2023ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯವೂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು.
2023ರ ವಿಶ್ವಕಪ್ ಪಂದ್ಯಗಳು 10 ಕಡೆ ನಡೆದಿದ್ದವು.
ಭಾರತವು ಈ ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ. 2024ರ ಜೂನ್‌ನಲ್ಲಿ ಬಾರ್ಬಡೋಸ್‌ನಲ್ಲಿ ಭಾರತ ಚುಟುಕು ಮಾದರಿಯ ವಿಶ್ವಕಪ್ ಗೆದ್ದುಕೊಂಡಿತ್ತು. 2026ರ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಟೂರ್ನಿ ನಡೆಯಲಿದ್ದು, ಐಸಿಸಿ ಮುಂದಿನ ವಾರ ವೇಳಾಪಟ್ಟಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಉದ್ಘಾಟನಾ ಪಂದ್ಯ ಫೆ. 7 ಹಾಗೂ ಫೈನಲ್ ಪಂದ್ಯ ಮಾರ್ಚ್ 8ಕ್ಕೆ ನಡೆಯುವ ಸಾಧ್ಯತೆ ಇದೆ.
ಟಿ20 ವಿಶ್ವಕಪ್‌ಗೆ ಅಂತಿಮಗೊಳಿಸಿರುವ ಐದೂ ನಗರಗಳು ಟೈರ್ 1 ನಗರಗಳಾಗಿದ್ದು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.
ಶ್ರೀಲಂಕಾ ಕೂಡ ಜಿಂಟಿ ಆತಿಥ್ಯ ವಹಿಸಲಿದ್ದು, ಕ್ಯಾಂಡಿ ಹಾಗೂ ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿದೆ. ಮೂರನೇ ತಾಣ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಒಪ್ಪಂದ ಇರುವ ಕಾರಣ ಶ್ರೀಲಂಕಾವೂ ಆತಿಥ್ಯ ವಹಿಸುತ್ತಿದೆ.
ಒಂದು ವೇಳೆ ಪಾಕಿಸ್ತಾನ ಫೈನಲ್‌ಗೆ ಬಂದರೆ ಆ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ.
ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಒಪ್ಪಂದದ ಪ್ರಕಾರ, ಯಾವುದೇ ದೇಶ ಆತಿಥ್ಯ ವಹಿಸಿದರೂ ಭಾರತ ಹಾಗೂ ಪಾಕಿಸ್ತಾನದ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.