ADVERTISEMENT

ಟಿ20 ವಿಶ್ವಕಪ್‌ | ಜ್ಯಾಕ್ಸ್‌, ರೆಹಾನ್‌ ಸಾಹಸ: ಇಂಗ್ಲೆಂಡ್‌ಗೆ ಜಯ

ಲಂಕಾ ಕೈಯಲ್ಲಿ ನ್ಯೂಜಿಲೆಂಡ್‌ನ ನಾಕೌಟ್‌ ಭವಿಷ್ಯ

ಪಿಟಿಐ
Published 27 ಫೆಬ್ರುವರಿ 2026, 18:31 IST
Last Updated 27 ಫೆಬ್ರುವರಿ 2026, 18:31 IST
<div class="paragraphs"><p>ವಿಕೆಟ್‌ ಪಡೆದ ವಿಲ್‌ ಜ್ಯಾಕ್ಸ್‌ ಅವರನ್ನು ನಾಯಕ ಹ್ಯಾರಿ ಬ್ರೂಕ್‌ ಅಭಿನಂದಿಸಿದರು </p></div>

ವಿಕೆಟ್‌ ಪಡೆದ ವಿಲ್‌ ಜ್ಯಾಕ್ಸ್‌ ಅವರನ್ನು ನಾಯಕ ಹ್ಯಾರಿ ಬ್ರೂಕ್‌ ಅಭಿನಂದಿಸಿದರು

   

ಕೊಲಂಬೊ: ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಇಂಗ್ಲೆಂಡ್ ತಂಡವು ಶುಕ್ರವಾರ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ನ ಸೂಪರ್ ಎಂಟರ ಹಂತದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿತು. ಇದರಿಂದಾಗಿ ಪಾಕಿಸ್ತಾನ ತಂಡದ ನಾಕೌಟ್‌ ಅವಕಾಶವೂ ಜೀವಂತವಾಗಿದೆ.

ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸುವ ಕನಸು ಕಂಡಿದ್ದ ನ್ಯೂಜಿಲೆಂಡ್‌ಗೆ ಹಿನ್ನಡೆಯಾಯಿತು. ಮಿಚೆಲ್‌ ಸ್ಯಾಂಟನರ್‌ ಪಡೆಯ ನಾಕೌಟ್‌ ಭವಿಷ್ಯ ಶನಿವಾರ ನಡೆಯುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ಫಲಿತಾಂಶವನ್ನು ಅವಲಂಬಿತವಾಗಿದೆ.

ADVERTISEMENT

ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನದಿಂದ ನ್ಯೂಜಿಲೆಂಡ್‌ ತಂಡವನ್ನು 7 ವಿಕೆಟ್‌ಗೆ 159 ರನ್‌ಗಳಿಗೆ ನಿಯಂತ್ರಿಸಿದ ಎರಡು ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡವು ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮುರಿಯದ ಏಳನೇ ವಿಕೆಟ್‌ಗೆ ಆಪತ್ಬಾಂಧವ ವಿಲ್‌ ಜ್ಯಾಕ್ಸ್‌ (ಔಟಾಗದೇ 32;18ಎ) ಮತ್ತು ರೆಹಾನ್ ಅಹ್ಮದ್‌ (ಔಟಾಗದೇ 19;7ಎ) ಅವರು ಕೇವಲ 16 ಎಸೆತಗಳಲ್ಲಿ 44 ರನ್‌ ಸೇರಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ತಂಡವು ಮೂರು ಎಸೆತಗಳಿರುವಂತೆ 6 ವಿಕೆಟ್‌ಗೆ 161 ರನ್‌ ಗಳಿಸಿತು. ಆಲ್‌ರೌಂಡ್‌ ಪ್ರದರ್ಶನ ನೀಡಿದ ಜ್ಯಾಕ್ಸ್‌ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು. 

ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ಎರಡು ರನ್‌ ಗಳಿಸುವಷ್ಟರಲ್ಲಿ ಫಿಲ್‌ ಸಾಲ್ಟ್‌ (2) ಮತ್ತು ಜೋಸ್‌ ಬಟ್ಲರ್‌ (0) ಅವರನ್ನು ಕಳೆದುಕೊಂಡ ತಂಡಕ್ಕೆ ನಾಯಕ ಹ್ಯಾರಿ ಬ್ರೂಕ್‌ (26) ಮತ್ತು ಜೇಕಬ್‌ ಬೆಥೆಲ್‌ (21) ಮೂರನೇ ವಿಕೆಟ್‌ಗೆ 48 ರನ್‌ ಸೇರಿಸಿ ಚೇತರಿಕೆ ನೀಡಿದರು. ನಂತರದಲ್ಲಿ ಟಾಮ್ ಬ್ಯಾಂಟನ್ (33) ಮತ್ತು ಸ್ಯಾಮ್‌ ಕರನ್‌ (24) ಉಪಯುಕ್ತ ಕಾಣಿಕೆ ನೀಡಿದರು. 

ಈ ಹಂತದಲ್ಲಿ ಸ್ಪಿನ್ನರ್‌ ರಚಿನ್‌ ರವೀಂದ್ರ (19ಕ್ಕೆ 3) ದಾಳಿಗೆ ಸಿಲುಕಿದ ಇಂಗ್ಲೆಂಡ್‌ 117 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಯ 19 ಎಸೆತಗಳಲ್ಲಿ ಗೆಲುವಿಗೆ 43 ರನ್‌ ಬೇಕಿತ್ತು. ಈ ಹಂತದಲ್ಲಿ ಜ್ಯಾಕ್ಸ್‌ ಮತ್ತು ರೆಹಾನ್‌ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ, ಸಿಕ್ಸರ್‌, ಬೌಂಡರಿ ಬಾರಿಸಿ ತಂಡವನ್ನು ದಡ ಸೇರಿಸಿದರು. 

ಸ್ಪಿನ್ನರ್‌ಗಳ ಕಡಿವಾಣ:

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಡುಕೊಂಡ ನ್ಯೂಜಿಲೆಂಡ್‌ ದೊಡ್ಡ ಮೊತ್ತ ಗಳಿಸದಂತೆ  ಸ್ಪಿನ್ನರ್‌ಗಳು ಲಗಾಮು ಹಾಕಿದರು.  ನ್ಯೂಜಿಲೆಂಡ್‌ ಇನಿಂಗ್ಸ್‌ನಲ್ಲಿ ಒಬ್ಬರೂ ದೊಡ್ಡ ಇನಿಂಗ್ಸ್ ಆಡದಿರುವುದು ಕೊರತೆ ಎನಿಸಿತು. ಗ್ಲೆನ್‌ ಫಿಲಿಪ್ಸ್‌ (39;28ಎ), ಟಿಮ್ ಸೀಫರ್ಟ್‌ (35; 25ಎ) ಮತ್ತು ಫಿನ್‌ ಅಲೆನ್ (29;19 ಎ) ಕೊಂಚ ಹೋರಾಟ ತೋರಿದರು.

ವೇಗದ ಬೌಲರ್‌ಗಳೆದುರು ಕಿವೀಸ್ ಬ್ಯಾಟರ್‌ಗಳು ಉತ್ತಮವಾಗಿ ಆಡಿದರು. ಆದರೆ ಸ್ಪಿನ್ನರ್‌ಗಳಾದ ವಿಲ್ ಜ್ಯಾಕ್ಸ್‌ (23ಕ್ಕೆ2), ಅದಿಲ್ ರಶೀದ್‌ (28ಕ್ಕೆ2) ಮತ್ತು ರೆಹಾನ್ ಅಹ್ಮದ್ (28ಕ್ಕೆ2) ಮಧ್ಯಮ ಹಂತದಲ್ಲಿ ಪರಿಣಾಮ ಕಾರಿಯಾಗಿ ಬೌಲಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರು:

ನ್ಯೂಜಿಲೆಂಡ್‌: 20 ಓವರುಗಳಲ್ಲಿ 20 ಓವರುಗಳಲ್ಲಿ 7 ವಿಕೆಟ್‌ಗೆ 159 (ಟಿಮ್ ಸೀಫರ್ಟ್ 35, ಫಿನ್ ಅಲೆನ್ 29, ಗ್ಲೆನ್‌ ಫಿಲಿಪ್ಸ್ 39; ಅದಿಲ್ ರಶೀದ್ 28ಕ್ಕೆ2, ವಿಲ್ ಜಾಕ್ಸ್ 23ಕ್ಕೆ2, ರೆಹಾನ್ ಅಹ್ಮದ್ 28ಕ್ಕೆ2) ಇಂಗ್ಲೆಂಡ್: 19.3 ಓವರ್‌ಗಳಲ್ಲಿ 6 ವಿಕೆಟ್‌ಗೆ 161 (ಹ್ಯಾರಿ ಬ್ರೂಕ್‌ 26, ಟಾಮ್‌ ಬ್ಯಾಂಟನ್ 33, ಸ್ಯಾಮ್‌ ಕರನ್‌ 24, ವಿಲ್‌ ಜ್ಯಾಕ್ಸ್‌ ಔಟಾಗದೇ 32, ರೆಹಾನ್‌ ಅಹ್ಮದ್‌ ಔಟಾಗದೇ 19; ರಚಿನ್‌ ರವೀಂದ್ರ). ಪಂದ್ಯದ ಆಟಗಾರ: ವಿಲ್‌ ಜ್ಯಾಕ್ಸ್‌.

ಸೆಮಿಫೈನಲ್‌: ಪಾಕ್‌ಗೆ ಹೀಗಿದೆ ಲೆಕ್ಕಾಚಾರ
ಪಾಕಿಸ್ತಾನ ತಂಡವು ಶನಿವಾರ ನಡೆಯುವ ಎರಡನೇ ಗುಂಪಿನ ಸೂಪರ್ ಎಂಟರ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯ ಪಾಕಿಸ್ತಾನದ ಪಾಲಿಗಷ್ಟೇ ಮಹತ್ವದ್ದು. ಶ್ರೀಲಂಕಾ ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತಿರುವ ಕಾರಣ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿ ಉಳಿದಿದೆ. ಆದರೆ ಪಾಕಿಸ್ತಾನ ಗೆಲುವಷ್ಟೇ ಸಾಲದು. ಅದು 64 ರನ್‌ಗಳ ಅಂತರದಿಂದ ಗೆಲ್ಲಬೇಕು. ಎರಡನೇಯದಾಗಿ ಬ್ಯಾಟ್ ಮಾಡಿದಲ್ಲಿ ಕನಿಷ್ಠ 13.1 ಓವರುಗಳಲ್ಲಿ ಶ್ರೀಲಂಕಾ ನಿಗದಿಪಡಿಸಿದ ಗುರಿ ಸಾಧಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.