ADVERTISEMENT

ಟಿ20 ಕ್ರಿಕೆಟ್ ವಿಶ್ವಕಪ್: ಕೊಲಂಬೊದಲ್ಲಿ ಭಾರತ–ಪಾಕ್ ಮುಖಾಮುಖಿ

ಫೆ. 7ರಿಂದ ಟಿ20 ಕ್ರಿಕೆಟ್ ವಿಶ್ವಕಪ್: ಕಣದಲ್ಲಿ 20 ತಂಡಗಳು; ಇಟಲಿ ಪದಾರ್ಪಣೆ

ಪಿಟಿಐ
Published 25 ನವೆಂಬರ್ 2025, 19:49 IST
Last Updated 25 ನವೆಂಬರ್ 2025, 19:49 IST
ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಟ್ರೋಫಿಯನ್ನು ಮಂಗಳವಾರ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ರಾಜೀವ್ ಶುಕ್ಲಾ, ದೇವಜೀತ್ ಸೈಕಿಯಾ, ರೋಹಿತ್ ಶರ್ಮಾ, ಐಸಿಸಿ ಮುಖ್ಯಸ್ಥ ಜಯ್ ಶಾ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಜರಿದ್ದರು 
ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಟ್ರೋಫಿಯನ್ನು ಮಂಗಳವಾರ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ರಾಜೀವ್ ಶುಕ್ಲಾ, ದೇವಜೀತ್ ಸೈಕಿಯಾ, ರೋಹಿತ್ ಶರ್ಮಾ, ಐಸಿಸಿ ಮುಖ್ಯಸ್ಥ ಜಯ್ ಶಾ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಜರಿದ್ದರು    

ಮುಂಬೈ: ಬದ್ಧ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ವರ್ಷ ನಡೆಯಲಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಎ ಗುಂಪಿನಲ್ಲಿ ಕಣಕ್ಕಿಳಿಯಲಿವೆ. ಉಭಯ ತಂಡಗಳು  ಫೆಬ್ರುವರಿ 15ರಂದು ಕೊಲಂಬೊದಲ್ಲಿ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ಹೋದ ಏಪ್ರಿಲ್‌ನಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದನಾ ದಾಳಿ ನಡೆದಿತ್ತು. ಅದರಿಂದಾಗಿ ಪಾಕಿಸ್ತಾನ ತಂಡದೊಂದಿಗಿನ ದ್ವಿಪಕ್ಷೀಯ ಕ್ರೀಡಾ ಸಂಬಂಧಗಳನ್ನು ಕಡಿತಗೊಳಿಸಿತ್ತು.  ಬಹುರಾಷ್ಟ್ರಗಳ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಲು (ಅದೂ ತಟಸ್ಥ ಸ್ಥಳದಲ್ಲಿ) ಅನುಮತಿ ಇದೆ. 

ಈ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡವು ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಈಚೆಗೆ ಟಿ20 ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿದ್ದವು. 

ADVERTISEMENT

ಎಂಟು ತಾಣ-55 ಪಂದ್ಯ

ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಒಟ್ಟು ಎಂಟು ತಾಣಗಳಲ್ಲಿ 55 ಪಂದ್ಯಗಳು  ನಡೆಯಲಿವೆ. ಒಟ್ಟು 20 ತಂಡಗಳು ಕಣದಲ್ಲಿವೆ. ಇದೇ ಮೊದಲ ಬಾರಿಗೆ ಇಟಲಿ ತಂಡವು ಆಡಲಿದೆ. 

ಒಟ್ಟು ನಾಲ್ಕು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿಯೂ ಐದು ತಂಡಗಳಿವೆ. ಒಟ್ಟು ಎಂಟು ತಂಡಗಳು ಸೂಪರ್ ಏಯ್ಟ್‌ ಹಂತ ಪ್ರವೇಶಿಸಲಿವೆ. ಈ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಆಡಲಿವೆ. ನಾಲ್ಕರ ಘಟ್ಟದ ಪಂದ್ಯಗಳು ಕೋಲ್ಕತ್ತ ಅಥವಾ ಕೊಲಂಬೊ ಮತ್ತು ಮುಂಬೈನಲ್ಲಿ ನಡೆಯಲಿವೆ. 

ಒಂದೊಮ್ಮೆ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸಿದರೆ ಆ ಪಂದ್ಯಕ್ಕೆ ಕೊಲಂಬೊ ಆತಿಥ್ಯ ವಹಿಸಲಿದೆ. ಇಲ್ಲದಿದ್ದರೆ ಅಹಮದಾಬಾದಿನಲ್ಲಿ ಫೈನಲ್ ನಡೆಯಲಿದೆ. 

ಹಾಲಿ ಚಾಂಪಿಯನ್ ಭಾರತ ತಂಡವು ಮುಂಬೈನಲ್ಲಿ  ಫೆ 7ರಂದು ತನ್ನ ಮೊದಲ ಪಂದ್ಯ ಆಡಲಿದ್ದು,  ಅಮೆರಿಕ ತಂಡವನ್ನು ಎದುರಿಸುವರು.  ಎರಡನೇ ಪಂದ್ಯವನ್ನು ನಮಿಬಿಯಾ ವಿರುದ್ಧ (ಫೆ.12) ಆಡಲಿದೆ.   

‘ಎ ಗುಂಪು ಉತ್ತಮವಾಗಿ ಕಾಣುತ್ತಿದೆ. ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಯಾವುದೇ ತಂಡವನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಪಂದ್ಯ ದಿನ ಚೆನ್ನಾಗಿ ಆಡುವ ತಂಡ ಮೇಲುಗೈ ಸಾಧಿಸುತ್ತದೆ’ ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. 

2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಅವರು ಈ ಬಾರಿಯ ಟೂರ್ನಿಯ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. 

ಗುಂಪುಗಳು ಎ: ಭಾರತ ಅಮೆರಿಕ ನಮಿಬಿಯಾ ನೆದರ್ಲೆಂಡ್ಸ್ ಪಾಕಿಸ್ತಾನ ಬಿ:ಆಸ್ಟ್ರೇಲಿಯಾ ಶ್ರೀಲಂಕಾ ಜಿಂಬಾಬ್ವೆ ಐರ್ಲೆಂಡ್ ಒಮನ್ ಸಿ: ಇಂಗ್ಲೆಂಡ್ ವೆಸ್ಟ್ ಇಂಡೀಸ್ ಬಾಂಗ್ಲಾದೇಶ ಇಟಲಿ ನೇಪಾಳ ಡಿ: ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ಅಫ್ಗಾನಿಸ್ತಾನ ಕೆನಡಾ ಯುಎಇ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.