ADVERTISEMENT

ಟಿ20 ಕ್ರಿಕೆಟ್‌ ವಿಶ್ವಕಪ್‌: ತಂಡದಲ್ಲಿ 15 ಆಟಗಾರರು, 8 ಅಧಿಕಾರಿಗಳಿಗೆ ಅವಕಾಶ

ಪಿಟಿಐ
Published 13 ಆಗಸ್ಟ್ 2021, 15:05 IST
Last Updated 13 ಆಗಸ್ಟ್ 2021, 15:05 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ಕರಾಚಿ: ಈ ಬಾರಿಯ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿ ತಂಡಕ್ಕೆ 15 ಆಟಗಾರರು ಹಾಗೂ ಎಂಟು ಅಧಿಕಾರಿಗಳನ್ನು ಕರೆತರಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಅವಕಾಶ ನೀಡಿದೆ.

‘ಟೂರ್ನಿಯಲ್ಲಿ ಭಾಗವಹಿಸುವ ದೇಶಗಳು ತಮ್ಮ ತಂಡದ 15 ಆಟಗಾರರು, ಎಂಟು ಅಧಿಕಾರಿಗಳ (ಕೋಚ್‌ಗಳು ಮತ್ತು ನೆರವು ಸಿಬ್ಬಂದಿ ಸೇರಿ) ಅಂತಿಮ ಪಟ್ಟಿ ಸಲ್ಲಿಸಲು ಐಸಿಸಿ ಸೆಪ್ಟೆಂಬರ್ 10ರ ಗಡುವು ಎಂದು ನಿಗದಿಪಡಿಸಿದೆ‘ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧಿಕಾರಿಯೊಬ್ಬರು ಶುಕ್ರವಾರ ಖಚಿತಪಡಿಸಿದ್ದಾರೆ.

‘ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟು ಮತ್ತು ಬಯೋಬಬಲ್‌ ಹಿನ್ನೆಲೆಯಲ್ಲಿ ಹೆಚ್ಚುವರಿ ಆಟಗಾರರನ್ನು ಕರೆತರಲೂ ಐಸಿಸಿ ಅವಕಾಶ ನೀಡಿದೆ. ಆದರೆ ಈ ಆಟಗಾರರ ವೆಚ್ಚವನ್ನು ಆಯಾ ದೇಶದ ಮಂಡಳಿಗಳೇ ಭರಿಸಬೇಕಿದೆ‘ ಎಂದು ಅಧಿಕಾರಿ ನುಡಿದರು. 15 ಆಟಗಾರರ ವೆಚ್ಚವನ್ನು ಮಾತ್ರ ಐಸಿಸಿ ನೋಡಿಕೊಳ್ಳಲಿದೆ.

ADVERTISEMENT

2016ರ ಬಳಿಕ ಮೊದಲ ಬಾರಿ ಟಿ20 ವಿಶ್ವಕಪ್ ನಿಗದಿಯಾಗಿದೆ. ಅಕ್ಟೋಬರ್‌ 17ರಿಂದ ನವೆಂಬರ್‌ 14ರವರೆಗೆ ಒಮನ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಮೂರು ತಾಣಗಳಾದ ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.