ADVERTISEMENT

ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 16:27 IST
Last Updated 19 ಜನವರಿ 2026, 16:27 IST
ಬಿಸಿಬಿ
ಬಿಸಿಬಿ   

ನವದೆಹಲಿ: ‘ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ ಇದೇ 21ರ ಒಳಗೆ ನಿರ್ಧಾರಕ್ಕೆ ಬರಬೇಕು. ಇಲ್ಲದೇ ಹೋದರೆ ಬದಲಿಯಾಗಿ ಬೇರೆ ತಂಡದ ಆಯ್ಕೆಗೆ ಸಿದ್ಧವಾಗಿರಿ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ) ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ ಸೂಚಿಸಿದೆ.

ಫೆಬ್ರುವರಿ 7ರಂದು ಟಿ20 ವಿಶ್ವಕಪ್ ಆರಂಭವಾಗಲಿದೆ. ಐಸಿಸಿ ಮತ್ತು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ನಡುವೆ ಶನಿವಾರ ಮಾತುಕತೆ ನಡೆದರೂ, ಕಗ್ಗಂಟಿಗೆ ಪರಿಹಾರ ದೊರೆತಿಲ್ಲ.

ಬಿಸಿಸಿಐ ಸೂಚನೆ ಮೇರೆಗೆ ಕೋಲ್ಕತ್ತ ನೈಟ್‌ ರೈಡರ್ಸ್ ತಂಡವು ಇದೇ ತಿಂಗಳ ಆರಂಭದಲ್ಲಿ ಐಪಿಎಲ್‌ ತಂಡದಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈಬಿಟ್ಟಿತ್ತು. ಇದರಿಂದ ಆಕ್ರೋಶಗೊಂಡ ಬಾಂಗ್ಲಾದೇಶ, ಭಾರತದಲ್ಲಿ ನಿಗದಿಯಾಗಿರುವ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ (ಜಂಟಿ ಆತಿಥೇಯ) ಸ್ಥಳಾಂತರಿಬೇಕು. ಇಲ್ಲದಿದ್ದಲ್ಲಿ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಐಸಿಸಿ ಮುಂದೆ ಬೇಡಿಕೆಯಿಟ್ಟಿತ್ತು. ಹೀಗಾಗಿ ಬಿಕ್ಕಟ್ಟು ತಲೆದೋರಿತ್ತು.

ADVERTISEMENT

‘ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಂಬಂಧಿಸಿ ಜನವರಿ 21ರೊಳಗೆ ತೀರ್ಮಾನಕ್ಕೆ ಬರಬೇಕೆಂದು ಬಿಸಿಬಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದೊಮ್ಮೆ ಭಾರತದಲ್ಲಿ ಆಡಲು ನಿರಾಕರಿಸಿದರೆ, ರ್‍ಯಾಂಕಿಂಗ್ ಆಧಾರದಲ್ಲಿ ಇನ್ನೊಂದು ತಂಡದ ಸೇರ್ಪಡೆೆ ಮಾಡಲಾಗುವುದು. ಇದಕ್ಕೆ ತಯಾರಾಗಿರುವಂತೆ ತಿಳಿಸಲಾಗಿದೆ’ ಎಂದು ಐಸಿಸಿ ಮೂಲವೊಂದು ತಿಳಿಸಿದೆ.

ಭದ್ರತೆಯ ಕಳವಳ ವ್ಯಕ್ತಪಡಿಸಿ, ಕೋಲ್ಕತ್ತ ಮತ್ತು ಮುಂಬೈನಲ್ಲಿ ನಡೆಯುವ ಗುಂಪು ಹಂತದ ಪಂದ್ಯಗಳನ್ನು ಆಡಲು ಬಾಂಗ್ಲಾದೇಶ ಭಾರತಕ್ಕೆ ಪಯಣಿಸುವುದಿಲ್ಲ ಎಂದು ಬಿಸಿಬಿ ಘೋಷಿಸಿತ್ತು.

ಆದರೆ ವೇಳಾಪಟ್ಟಿ ಈಗಾಗಲೇ ಅಂತಿಮಗೊಂಡಿರುವ ಕಾರಣ ಬಾಂಗ್ಲಾದೇಶ ಆಡಬೇಕಾದ ಪಂದ್ಯಗಳನ್ನು ಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ಹಿಂದೇಟುಹಾಕಿತ್ತು. ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದ್ದು, ಪಾಕಿಸ್ತಾನ ತಂಡದ ಪಂದ್ಯಗಳು ಅಲ್ಲಿ ನಿಗದಿಯಾಗಿವೆ.

ಒಂದೊಮ್ಮೆ ಬಾಂಗ್ಲಾದೇಶ ಬಿಗಿಪಟ್ಟು ಮುಂದುವರಿಸಿದಲ್ಲಿ, ಹಾಲಿ ರ್‍ಯಾಂಕಿಂಗ್ ಪ್ರಕಾರ ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆಗೊಳಿಸಬೇಕಾಗುತ್ತದೆ. ಈಗಿನ ವೇಳಾಪಟ್ಟಿಯಂತೆ ಬಾಂಗ್ಲಾದೇಶವು ಮೂರು ಲೀಗ್‌ ಪಂದ್ಯಗಳನ್ನು ಕೋಲ್ಕತ್ತದಲ್ಲಿ ಮತ್ತು ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಬೇಕಾಗಿದೆ.

ತಾಣಗಳನ್ನು ಅಥವಾ ತನ್ನ ತಂಡ ಇರುವ ಗುಂಪನ್ನು ಬದಲಿಸಿ ಶ್ರೀಲಂಕಾದಲ್ಲಿ ಆಡುವ ಅವಕಾಶ ನೀಡಬೇಕು ಎಂದು ಬಿಸಿಬಿ ಬಿಗಿ ನಿಲುವು ತಾಳಿದೆ. ಬಾಂಗ್ಲಾದೇಶ ಸದ್ಯ ಸಿ ಗುಂಪಿನಲ್ಲಿದ್ದು, ಇದರಲ್ಲಿ ವೆಸ್ಟ್‌ ಇಂಡೀಸ್‌, ಇಟಲಿ, ಇಂಗ್ಲೆಂಡ್ ಮತ್ತು ನೇಪಾಳ ತಂಡಗಳಿವೆ.

‘ಬಿ’ ಗುಂಪಿನಲ್ಲಿರುವ ಐರ್ಲೆಂಡ್‌ ತಂಡವನ್ನು ಸಿ ಗುಂಪಿಗೆ ಸೇರ್ಪಡೆಗೊಳಿಸಿ, ತನ್ನನ್ನು ‘ಬಿ’ ಗುಂಪಿನಲ್ಲಿ ಸೇರಿಸುವಂತೆ ಶನಿವಾರ ನಡೆದ ಮಾತುಕತೆ ವೇಳೆ ಬಿಸಿಬಿ ಪ್ರಸ್ತಾವ ಮುಂದಿಟ್ಟಿತ್ತು. ಆ ಮೂಲಕ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡುವ ಉದ್ದೇಶ ಹೊಂದಿತ್ತು.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಭಾರತದ ಜೊತೆ ದ್ವಿಪಕ್ಷೀಯ ಸಂಬಂಧ ಈಗ ಹದಗೆಟ್ಟಿದೆ.

ಬಿಸಿಬಿಯು ಕ್ರಿಕೆಟ್‌ ವಿಷಯದಲ್ಲಿ ಕಠಿಣ ನಿಲುವು ತಳೆದಲ್ಲಿ ಅದರ ಪರಿಣಾಮವನ್ನು ಮುಂದಿನ 10 ವರ್ಷಗಳ ಕಾಲ ಅನುಭವಿಸಬೇಕಾದೀತು ಎಂದು ಬಾಂಗ್ಲಾದೇಶ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಮತ್ತು ಹಾಲಿ ಟೆಸ್ಟ್ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.