ADVERTISEMENT

T20 WC | IND vs SA: ‘ಹ್ಯಾಟ್ರಿಕ್’ ಜಯದತ್ತ ಭಾರತ ಚಿತ್ತ

ಆರ್.ಕೌಶಿಕ್
Published 29 ಅಕ್ಟೋಬರ್ 2022, 20:45 IST
Last Updated 29 ಅಕ್ಟೋಬರ್ 2022, 20:45 IST
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ನಾಯಕ ರೋಹಿತ್ ಶರ್ಮಾ ಸಮಾಲೋಚನೆ –ಎಎಫ್‌ಪಿ ಚಿತ್ರ
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ನಾಯಕ ರೋಹಿತ್ ಶರ್ಮಾ ಸಮಾಲೋಚನೆ –ಎಎಫ್‌ಪಿ ಚಿತ್ರ   

ಪರ್ತ್: ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಒಂದೇ ತರಹದ ಹವಾಮಾನದ ಜೊತೆಗೂಡಿ ಪ್ರಯಾಣಿಸುತ್ತಿರುವಂತಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಮೊದಲೆರಡು ಪಂದ್ಯಗಳನ್ನು ಆಡಿದ ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲಿ ಮಸುಕಾದ ಆಗಸ, ಚಳಿಗಾಳಿ ಮತ್ತು ತುಂತುರು ಮಳೆ ಇತ್ತು.

ಪರ್ತ್‌ನಲ್ಲಿ ಕೂಡ ಶನಿವಾರ ಇಂತಹದೇ ವಾತಾವರಣವಿದೆ. ಪೂರ್ವ ಆಸ್ಟ್ರೇಲಿಯಾದ ರಾಜಧಾನಿಯಲ್ಲಿ ಬೆಳಿಗ್ಗೆ ತುಂತುರು ಮಳೆ ಇದ್ದ ಕಾರಣ ಆಪ್ಟಸ್ ಕ್ರೀಡಾಂಗಣದ ಪಿಚ್‌ ಸೇರಿದಂತೆ ಬಹುತೇಕ ಭಾಗಕ್ಕೆ ಕ್ರೀಡಾಂಗಣದ ಸಿಬ್ಬಂದಿಯು ಟಾರ್ಪಾಲಿನ್‌ ಹೊದಿಸಿತ್ತು. ದಿನದಲ್ಲಿ ಒಂದು ಬಾರಿ ಸೂರ್ಯನ ಕಿರಣಗಳ ಬೆಳಕು ಚೆಲ್ಲಿದಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಿಚ್‌ ಬಳಿ ಸಾಗಿದರು. ಹಸಿರು ಹೊದ್ದ ಅಂಕಣವನ್ನು ನೋಡಿದರು.

ಭಾನುವಾರ ಇದೇ ಅಂಕಣದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಸೂಪರ್ 12ರ ಎಡನೇ ಗುಂಪಿನಲ್ಲಿ ರೋಹಿತ್ ಬಳಗಕ್ಕೆ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಕಠಿಣ ಪೈಪೋಟಿಯೊಡ್ಡುವ ಸಾಮರ್ಥ್ಯವಿರುವ ತಂಡಗಳು. ಆದರೆ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಸೋಲಿಸಿರುವ ಭಾರತ ತಂಡ ತೆಂಬಾ ಬವುಮಾ ಬಳಗವನ್ನೂ ಮಣಿಸುವ ತಂತ್ರಗಾರಿಕೆ ಹೆಣೆಯುತ್ತಿದೆ.

ADVERTISEMENT

ಉಭಯ ತಂಡಗಳು ಪರಸ್ಪರರ ಸಾಮರ್ಥ್ಯಗಳ ಕುರಿತು ಚೆನ್ನಾಗಿ ತಿಳಿದುಕೊಂಡಿವೆ. ಏಕೆಂದರೆ, ಈ ವರ್ಷ ಎರಡೂ ತಂಡಗಳೂ ಒಂದು ಟೆಸ್ಟ್, ಆರು ಏಕದಿನ ಹಾಗೂ ಏಳು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟಿ20 ಕ್ರಿಕೆಟ್‌ನಲ್ಲಿ 4–3ರ (ಎರಡು ಪ್ರತ್ಯೇಕ ಸರಣಿ ಸೇರಿ) ಮುನ್ನಡೆಯಲಿದೆ. ಆದರೆ ಇಲ್ಲಿಯ ಪರಿಸ್ಥಿತಿಯೇ ವಿಭಿನ್ನವಾಗಿದೆ. ಉಭಯ ತಂಡಗಳಿಗೆ ವಿಭಿನ್ನ ಸವಾಲು ಎದುರಾಗುವ ನಿರೀಕ್ಷೆಯಿದೆ. ಪಾಯಿಂಟ್‌ ಪಟ್ಟಿಯಲ್ಲಿ ಭಾರತ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಮೂರು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಜಿಂಬಾಬ್ವೆ ಎದುರಿನ ಪಂದ್ಯ ಮಳೆಗಾಹುತಿಯಾಗಿತ್ತು. ಬಾಂಗ್ಲಾ ವಿರುದ್ಧ ತೆಂಬಾ ಬಳಗ ಜಯಿಸಿತ್ತು.

ಒಟ್ಟಿನಲ್ಲಿ ಈ ಎರಡೂ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಸೋಲಿನ ಮುಖ ನೋಡಿಲ್ಲ. ಈ ಪಂದ್ಯದ ಫಲಿತಾಂಶವು ಪಾಕಿಸ್ತಾನ ತಂಡದ ಸೆಮಿಫೈನಲ್‌ ಅವಕಾಶದ ಮೇಲೆ ಪರಿಣಾಮ ಬೀರಲಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಬಾಬರ್ ಆಜಂ ಬಳಗ ಸೋತಿದೆ. ಒಂದೊಮ್ಮೆ ದಕ್ಷಿಣ ಆಫ್ರಿಕಾವು ಭಾರತ ವಿರುದ್ಧ ಸೋತರೆ, ಪಾಕ್ ತಂಡಕ್ಕೆ ಅವಕಾಶ ಜೀವಂತವಾಗುಳಿಯಲಿದೆ.

ಆದರೆ, ಸಮತೋಲನವಾಗಿರುವ ತಂಡವನ್ನು ಸೋಲಿಸುವುದು ಭಾರತಕ್ಕೆ ಸುಲಭವಲ್ಲ. ಅನುಭವಿ ವೇಗಿ ಕಗಿಸೊ ರಬಾಡ, ಎನ್ರಿಚ್ ನಾಕಿಯಾ ಹಾಗೂ ವೇಯ್ನ್ ಪಾರ್ನೆಲ್ ಅವರ ಬೌಲಿಂಗ್ ಎದುರು ಭಾರತದ ಬ್ಯಾಟಿಂಗ್ ಪಡೆ ದಿಟ್ಟತನದಿಂದ ಆಡಬೇಕು. ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಅಮೋಘ ಲಯದಲ್ಲಿದ್ದಾರೆ. ರಾಹುಲ್ ತಮ್ಮ ಮೇಲೆ ಅವರಿಸಿರುವ ವೈಫಲ್ಯದ ಕಾರ್ಮೋಡವನ್ನು ಚದುರಿಸುವಂತಹ ಆಟವಾಡಲು ಕಾದಿದ್ದಾರೆ. ವಿರಾಟ್, ಸೂರ್ಯಕುಮಾರ್ ಹಾಗೂ ರೋಹಿತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಕೂಡ ಉತ್ತಮ ಲಯದಲ್ಲಿಲ್ಲ. ಬಾಂಗ್ಲಾ ಎದುರಿನ ಪಂದ್ಯದಲ್ಲಿ ಶತಕ ಗಳಿಸಿರುವ ರಿಲೀ ರೊಸೊ ಮಧ್ಯಮಕ್ರಮಾಂಕದ ಶಕ್ತಿಯಾಗಿದ್ದಾರೆ. ಡೇವಿಡ್ ಮಿಲ್ಲರ್, ಮರ್ಕರಂ ಹಾಗೂ ಕ್ವಿಂಟನ್ ಡಿಕಾಕ್‌ ಸ್ಪೋಟಕ ಬ್ಯಾಟಿಂಗ್ ಮಾಡುವ ಸಮರ್ಥರು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಆರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್.

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸನ್, ಕೇಶವ್ ಮಹಾರಾಜ, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ರಿಲೀ ರೋಸೊ, ತಬ್ರೇಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್.

ಪಂದ್ಯ ಆರಂಭ: ಸಂಜೆ 4.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.