ADVERTISEMENT

ಟಿ20 ವಿಶ್ವಕಪ್: ಪಾಕ್‌ಗೆ ಜಯ ತಂದಿತ್ತ ಫಾಹೀಮ್

ಹೋರಾಟ ಪ್ರದರ್ಶಿಸಿದ ನೆದರ್ಲೆಂಡ್ಸ್‌

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 13:43 IST
Last Updated 7 ಫೆಬ್ರುವರಿ 2026, 13:43 IST
ಭರ್ಜರಿ ಹೊಡೆತವಾಡಿದ ಫಾಹೀಮ್ ಅಶ್ರಫ್
ಎಎಫ್‌ಪಿ ಚಿತ್ರ
ಭರ್ಜರಿ ಹೊಡೆತವಾಡಿದ ಫಾಹೀಮ್ ಅಶ್ರಫ್ ಎಎಫ್‌ಪಿ ಚಿತ್ರ   

ಕೊಲಂಬೊ: ಒತ್ತಡದ ಸನ್ನಿವೇಶದಲ್ಲಿ ಫಾಹೀಮ್ ಅಶ್ರಫ್ ಕೇವಲ 11 ಎಸೆತಗಳಲ್ಲಿ 29 ರನ್ (4x2, 6x3) ಬಾಚುವ ಮೂಲಕ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಪಂದ್ಯದಲ್ಲಿ ಶನಿವಾರ ನೆದರ್ಲೆಂಡ್ಸ್ ತಂಡದ ವಿರುದ್ಧ ಮೂರು ವಿಕೆಟ್‌ಗಳ ಜಯಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಮೂಲಕ ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶದ ಸಾಧ್ಯತೆಯನ್ನು ತಡೆದರು.

ಸಿಂಹಳೀಸ್‌ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನೆದರ್ಲೆಂಡ್ಸ್ ತಂಡ ನಿಗದಿಪಡಿಸಿದ 148 ರನ್‌ಗಳ ಗುರಿಯನ್ನು ಎದುರಿಸಿದ ಪಾಕ್ 11 ಓವರುಗಳಲ್ಲೇ 2 ವಿಕೆಟ್‌ಗೆ 98 ರನ್ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆದರೆ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಗೆಲುವಿಗೆ ಕೊನೆಯ ಎರಡು ಓವರುಗಳಲ್ಲಿ 29 ರನ್‌ಗಳು ಬೇಕಿದ್ದವು.

ವ್ಯಾನ್‌ ಬೀಕ್ ಎಸೆದ 19ನೇ ಓವರಿನಲ್ಲಿ ಫಾಹೀಮ್‌ ಮೂರು ಸಿಕ್ಸರ್‌ಗಳು ಸೇರಿದಂತೆ 24 ರನ್ ಬಾರಿಸಿ ಒತ್ತಡ ನಿವಾರಿಸಿದರು. 

ADVERTISEMENT

ಪವರ್‌ಪ್ಲೇ ಅವಧಿಯಲ್ಲೇ ಪಾಕಿಸ್ತಾನ 2 ವಿಕೆಟ್‌ಗೆ 61 ರನ್ ಗಳಿಸಿತ್ತು. ಆರಂಭ ಆಟಗಾರ ಸಾಹಿಬ್‌ಝಾದಾ ಪರ್ಹಾನ್ ಸರಾಗವಾಗಿ ಆಡಿ 31 ಎಸೆತಗಳಲ್ಲಿ 41 ರನ್ ಗಳಿಸಿದರು. ಆದರೆ ಅವರ ನಿರ್ಗಮನ ಪಾಕಿಸ್ತಾನಕ್ಕೆ ಆತಂಕ ಉಂಟುಮಾಡುವಂತೆ ಕುಸಿತಕ್ಕೆ ಕಾರಣವಾಯಿತು. ವೇಗದ ಬೌಲರ್ ಪಾಲ್‌ ವಾನ್ ಮೀಕರನ್ ಮೇಡನ್ ಆಗಿದ್ದ ಓವರಿನಲ್ಲಿ ಎರಡು ವಿಕೆಟ್‌ ಪಡೆದು ಒತ್ತಡ ಹೇರಿದರು.

ಇದಕ್ಕೆ ಮೊದಲು ನೆದರ್ಲೆಂಡ್ಸ್‌ ಒಂದು ಹಂತದಲ್ಲಿ 4 ವಿಕೆಟ್‌ಗೆ 127 ರನ್ ಗಳಿಸಿ 1 ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಪಾಕಿಸ್ತಾನ 20 ರನ್ನಿಗೆ ಉಳಿದ ಆರು ವಿಕೆಟ್ ಪಡೆಯಿತು. ನೆದರ್ಲೆಂಡ್ಸ್ ನಾಯಕ ಸ್ಕಾಟ್‌ ಎಡ್ವರ್ಡ್ಸ್ 29 ಎಸೆತಗಳಲ್ಲಿ ಸೊಗಸಾದ 37 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ನೆದರ್ಲೆಂಡ್ಸ್‌: 19.5 ಓವರುಗಳಲ್ಲಿ 147 (ಮೈಕೆಲ್‌ ಲೆವಿಟ್ 24, ಬಾಸ್‌ ಡೆ ಲೇಡೆ 30, ಸ್ಕಾಟ್‌ ಎಡ್ವರ್ಡ್ಸ್‌ 37; ಸಲ್ಮಾನ್ ಮಿರ್ಝಾ 24ಕ್ಕೆ3, ಮೊಹಮ್ಮದ್ ನವಾಝ್ 38ಕ್ಕೆ2, ಅಬ್ರಾರ್ ಅಹ್ಮದ್ 23ಕ್ಕೆ2, ಸಯೀಮ್ ಅಯೂಬ್ 7ಕ್ಕೆ2); ಪಾಕಿಸ್ತಾನ: 19.3 ಓವರುಗಳಲ್ಲಿ 7 ವಿಕೆಟ್‌ಗೆ 148 (ಸಾಹಿಬ್‌ಝಾದಾ ಫರ್ಹಾನ್ 47, ಸಯೀಮ್ ಅಯೂಬ್ 24, ಫಾಹೀಮ್ ಅಶ್ರಫ್ ಔಟಾಗದೇ 29; ಆರ್ಯನ್ ದತ್‌ 33ಕ್ಕೆ2, ಪಾಲ್‌ ವಾನ್ ಮೀಕೆರನ್ 20ಕ್ಕೆ2). ಪಂದ್ಯದ ಆಟಗಾರ: ಫಾಹಿಂ ಅಶ್ರಫ್.

ವಿಜಯದ ಬೌಂಡರಿ ಬಾರಿಸಿದ ಹರ್ಷದಲ್ಲಿ ಫಾಹೀಮ್ ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.