ADVERTISEMENT

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೂಚನೆ: ನಿವೃತ್ತಿ ನಿರ್ಧಾರ ಹಿಂಪಡೆದ ತಮೀಮ್ ಇಕ್ಬಾಲ್‌

ಎಎಫ್‌ಪಿ
Published 7 ಜುಲೈ 2023, 16:19 IST
Last Updated 7 ಜುಲೈ 2023, 16:19 IST
ತಮೀಮ್‌ ಇಕ್ಬಾಲ್
ತಮೀಮ್‌ ಇಕ್ಬಾಲ್   

ಢಾಕಾ: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್‌ ಇಕ್ಬಾಲ್‌ ಅವರು, ಒಂದೇ ದಿನದಲ್ಲಿ ತಮ್ಮ ನಿರ್ಧಾರ ವಾಪಸ್‌ ಪಡೆದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಸೂಚನೆ ಇದಕ್ಕೆ ಕಾರಣ.

‘ತಮೀಮ್‌ ಅವರು ನಿವೃತ್ತಿ ನಿರ್ಧಾರ ಹಿಂಪಡೆದಿದ್ದಾರೆ. ಪ್ರಧಾನಿ ಶೇಖ್ ಹಸೀನಾ ಅವರ ಭೇಟಿಯ ಬಳಿಕ ತೀರ್ಮಾನ ಬದಲಿಸಿದ್ದಾರೆ’ ಎಂದು ಬಾಂಗ್ಲಾ ದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ನಿರ್ದೇಶಕ ಜಲಾಲ್‌ ಯೂನುಸ್‌ ಶುಕ್ರವಾರ ಹೇಳಿದ್ದಾರೆ.

ತಮೀಮ್‌ ಅವರು ಢಾಕಾದ ನಿವಾಸದಲ್ಲಿ ಪ್ರಧಾನಿ ಅವರನ್ನು ಭೇಟಿಯಾದರು. ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್‌ ಅವರು ಈ ವೇಳೆ ಜತೆಗಿದ್ದರು.

ADVERTISEMENT

‘ಪ್ರಧಾನಿ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಯಿತು. ನಿವೃತ್ತಿ ವಾಪಸ್‌ ಪಡೆದು ಕ್ರಿಕೆಟ್‌ಗೆ ಮರಳುವಂತೆ ಅವರು ಸೂಚಿಸಿದರು. ನನಗೆ ಇಲ್ಲ ಎನ್ನಲು ಆಗಲಿಲ್ಲ’ ಎಂದು ಪ್ರಧಾನಿ ಭೇಟಿಯ ಬಳಿಕ ತಮೀಮ್‌ ತಿಳಿಸಿದರು.

‘ಗಾಯದಿಂದ ಚೇತರಿಸಿಕೊಳ್ಳಲು ತಮೀಮ್‌, ಆರು ವಾರ ವಿಶ್ರಾಂತಿ ಪಡೆಯಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ ಕಪ್‌ ಟೂರ್ನಿಯ ವೇಳೆಗೆ ಅವರು ಪೂರ್ಣ ದೈಹಿಕ ಸಾಮರ್ಥ್ಯ ಹೊಂದುವುದು ಅಗತ್ಯ’ ಎಂದು ನಜ್ಮುಲ್‌ ಹಸನ್‌ ಮಾಹಿತಿ ನೀಡಿದರು.

ಅಫ್ಗಾನಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಇನ್ನುಳಿದ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಲಿಟನ್‌ ದಾಸ್‌ ಮುನ್ನಡೆಸುವರು ಎಂದು ಬಿಸಿಬಿ ಶುಕ್ರವಾರ ಬೆಳಿಗ್ಗೆ ಪ್ರಕಟಿಸಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ತಮೀಮ್‌, ಪ್ರಧಾನಿ ಅವರನ್ನು ಭೇಟಿಯಾಗಿದ್ದಾರೆ.

ತಮೀಮ್‌ ಕೈಗೊಂಡ ನಿರ್ಧಾರ ಅಚ್ಚರಿ ಉಂಟು ಮಾಡಿದೆ ಎಂದು ಲಿಟನ್‌ ಹೇಳಿದ್ದರು. ‘ಅವರಿಂದ ಅಂತಹ ನಿರ್ಧಾರ ಬರಬಹುದು ಎಂದು ಯಾರೂ ಊಹಿಸಿರಲಿಲ್ಲ. ಹಲವು ವರ್ಷಗಳಿಂದ ಅವರು ತಂಡಕ್ಕಾಗಿ ಆಡಿದ್ದಾರೆ. ನಾನು ಹಾಗೂ ಸಹ ಆಟಗಾರರು ಅವರ ನಿರ್ಧಾರವನ್ನು ಗೌರವಿಸುತ್ತೇವೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.