ADVERTISEMENT

ಐಪಿಎಲ್‌ ಮುಖ್ಯ ಪ್ರಾಯೋಜಕತ್ವ ವಹಿಸಲಿದೆ ಟಾಟಾ ಗ್ರೂಪ್

ಪಿಟಿಐ
Published 11 ಜನವರಿ 2022, 13:21 IST
Last Updated 11 ಜನವರಿ 2022, 13:21 IST
ವಿವೊ ಐಪಿಎಲ್ ಟ್ರೋಫಿ (ಪಿಟಿಐ ಸಂಗ್ರಹ ಚಿತ್ರ)
ವಿವೊ ಐಪಿಎಲ್ ಟ್ರೋಫಿ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಭಾರತದ ಪ್ರತಿಷ್ಠಿತ ಉದ್ಯಮ ಸಂಸ್ಥೆ ಟಾಟಾ ಸಮೂಹವು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್‌ ಟೂರ್ನಿಗೆ ಟೈಟಲ್ ಪ್ರಾಯೋಜಕತ್ವ ನೀಡಲಿದೆ.

ಚೀನಾ ಮೂಲದ ವಿವೊ ಮೊಬೈಲ್ ಕಂಪೆನಿಯ ಬದಲಿಗೆ ಟಾಟಾ ಸಮೂಹವು ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆದುಕೊಂಡಿದೆ. ಮಂಗಳವಾರ ನಡೆದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಟಾಟಾ ಸಮೂಹಕ್ಕೆ ಪ್ರಾಯೋಜಕತ್ವ ಹಕ್ಕುಗಳನ್ನು ನೀಡಲು ನಿರ್ಧರಿಸಲಾಯಿತು.

‘ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಟಾಟಾ ಸಮೂಹವು ಟೈಟಲ್ ಪ್ರಾಯೋಜಕತ್ವ ನೀಡಲಿದೆ‘ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ.

ADVERTISEMENT

2018 ರಿಂದ 2022ರವರೆಗೆ ಅವಧಿಗೆ ಐಪಿಎಲ್ ಪ್ರಾಯೋಜಕತ್ವದ ಹಕ್ಕುಗಳನ್ನು ₹ 2200 ಕೋಟಿ ಮೌಲ್ಯಕ್ಕೆ ವಿವೊ ಪಡೆದುಕೊಂಡಿತ್ತು. 2020ರಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತದ ಮತ್ತು ಚೀನಾ ಸೇನೆಗಳ ನಡುವಿನ ಸಂಘರ್ಷದ ಪರಿಣಾಮವಾಗಿ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ನಡೆದಿತ್ತು. ಆ ವರ್ಷ ವಿವೊ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದರಿಂದ ಡ್ರೀಮ್ ಇಲೆವನ್‌ ಹಕ್ಕು ಪಡೆದಿತ್ತು. ಆದರೆ 2021ರ ಐಪಿಎಲ್‌ನಲ್ಲಿ ವಿವೊ ಮರಳಿ ಪ್ರಾಯೋಜಕತ್ವ ನೀಡಿತ್ತು.

ಆದರೆ 2022ರ ಟೂರ್ನಿಯ ಪ್ರಾಯೋಜಕತ್ವದ ಹಕ್ಕುಗಳನ್ನು ವರ್ಗಾಯಿಸಲು ವಿವೊ ಒಲವು ತೋರಿದೆಯೆಂಬ ಸುದ್ದಿಗಳು ಕೆಲವು ದಿನಗಳ ಹಿಂದೆ ಕೇಳಿಬಂದಿದ್ದವು. ಇದೀಗ ಟಾಟಾ ಸಮೂಹಕ್ಕೆ ಹಕ್ಕುಗಳು ಲಭಿಸಿದ್ದು, ಬಿಸಿಸಿಐ ಕೂಡ ಒಪ್ಪಿಗೆ ನೀಡಿದೆ.

ಐಪಿಎಲ್‌ಗೆ ಮತ್ತೆರಡು ಹೊಸ ಫ್ರ್ಯಾಂಚೈಸಿಗಳನ್ನು ಸೇರ್ಪಡೆ ಮಾಡಲಾಗಿದೆ. ಇದೇ ತಿಂಗಳು ಮೇಗಾ ಹರಾಜು ಪ್ರಕ್ರಿಯೆ ನಡೆಯಲಿದೆ. 2023ರಲ್ಲಿ ಹೊಸ ಪ್ರಾಯೋಜಕತ್ವಕ್ಕಾಗಿ ಮತ್ತೆ ಟೆಂಡರ್ ಕರೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.