ADVERTISEMENT

ನ್ಯೂಜಿಲೆಂಡ್‌ನ ವರ್ಷದ ಕ್ರಿಕೆಟಿಗ ಟೇಲರ್

ಪಿಟಿಐ
Published 1 ಮೇ 2020, 19:30 IST
Last Updated 1 ಮೇ 2020, 19:30 IST
ರಾಸ್‌ ಟೇಲರ್- ಎಎಫ್‌ಪಿ ಚಿತ್ರ
ರಾಸ್‌ ಟೇಲರ್- ಎಎಫ್‌ಪಿ ಚಿತ್ರ   

ವೆಲ್ಲಿಂಗ್ಟನ್‌: ಅನುಭವಿ ಬ್ಯಾಟ್ಸಮನ್‌ ರಾಸ್‌ ಟೇಲರ್‌ ಅವರಿಗೆ ನ್ಯೂಜಿಲೆಂಡ್‌ನ ಪ್ರತಿಷ್ಠಿತ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದಿದೆ. ದಿಗ್ಗಜ ಆಟಗಾರ ರಿಚರ್ಡ್‌ ಹ್ಯಾಡ್ಲಿ ಹೆಸರಿನ ಈ ಗೌರವವನ್ನು ಅವರು ಮೂರನೇ ಬಾರಿಗೆ ತಮ್ಮದಾಗಿಸಿಕೊಂಡಿದ್ದಾರೆ.

ಟೆಸ್ಟ್‌ ಮಾದರಿಯಲ್ಲಿ ಹಿರಿಯ ಆಟಗಾರ ಸ್ಟೀಫನ್‌ ಫ್ಲೆಮಿಂಗ್‌ ಅವರ ಅತ್ಯಧಿಕ ರನ್‌ ದಾಖಲೆಯನ್ನು ಅಳಿಸಿಹಾಕಿರುವ ಟೇಲರ್‌, ಮೂರೂ ಮಾದರಿಯ (ಏಕದಿನ, ಟೆಸ್ಟ್‌ ಹಾಗೂ ಟ್ವೆಂಟಿ–20) ಕ್ರಿಕೆಟ್‌ನಲ್ಲಿ ನೂರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

2019ರ ಸಾಲಿನ ಕ್ರಿಕೆಟ್‌ ಋತುವಿನಲ್ಲಿ ಎಲ್ಲ ಮಾದರಿಗಳೂ ಸೇರಿ ಟೇಲರ್‌ 1389 ರನ್‌ ಕಲೆಹಾಕಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿದ ಕಿವೀಸ್‌ ತಂಡದ ಅವಿಭಾಜ್ಯ ಅಂಗವಾಗಿದ್ದರು.‌

ADVERTISEMENT

‘ಇದು ನನ್ನ ಸಾಮರ್ಥ್ಯದ ಏರಿಳಿತದ ವರ್ಷವಾಗಿತ್ತು. ವಿಶ್ವಕಪ್‌ ಫೈನಲ್‌ ಸೋಲು, ಬಾಕ್ಸಿಂಗ್‌ ಡೇ ಟೆಸ್ಟ್‌ನ ಭಾಗವಾಗಿದ್ದು, ಅಲ್ಲಿ ನಮ್ಮ ಆಟಗಾರರಿಗೆ ಸಿಕ್ಕ ಬೆಂಬಲ ಅವಿಸ್ಮರಣೀಯ’ ಎಂದು ಪ್ರಶಸ್ತಿ ಪ್ರದಾನ ಸಮಾರೋಪದಲ್ಲಿ ಟೇಲರ್‌ ನುಡಿದರು.

‘ರನ್‌ ದಾಹ ಹಾಗೂ ಮಾನಸಿಕ ಪ್ರೇರಣೆ ಉತ್ತಮ ಸಾಧನೆಗೆ ಸಹಕಾರಿಯಾಗಬಲ್ಲವು. ಇವೆರಡೂ ಇದ್ದರೆ ವಯಸ್ಸಿನ ಅಡ್ಡಿ ಬರುವುದಿಲ್ಲ’ ಎಂದು 36 ವರ್ಷದ ಆಟಗಾರ ಅಭಿಪ್ರಾಯಪಟ್ಟರು.

ಗೌರವಕ್ಕೆ ಭಾಜನರಾದ ಟೇಲರ್‌ ಅವರಿಗೆ ಹ್ಯಾಡ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ವರ್ಷದ ಟೆಸ್ಟ್‌ ಆಟಗಾರ ಎನಿಸಿಕೊಂಡ ವೇಗಿ ಟಿಮ್‌ ಸೌಥಿ, ತಂಡದ ಶ್ರೇಷ್ಠ ಬೌಲರ್‌ ಗೌರವ ಕೂಡ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.