ಫೋಟೊಶೂಟ್‌ನಲ್ಲಿ ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್
ಚಿತ್ರ ಕೃಪೆ: ಬಿಸಿಸಿಐ
ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಸೋತಿರುವ ಭಾರತ ತಂಡ ಅಕ್ಟೋಬರ್ 29 (ಬುಧವಾರ)ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಈ ನಡುವೆ ಸೂರ್ಯಕುಮಾರ್ ಯಾದವ್ ಬಳಗದ ಸದಸ್ಯರು ಡ್ರೆಸ್ಸಿಂಗ್ ಕೋಣೆಯಲ್ಲಿ ಫೊಟೋಶೂಟ್ ಸಂರ್ಭದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ವಿಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ.
ಬಿಸಿಸಿಐ ಹಂಚಿಕೊಂಡಿರುವ ವಿಡಿಯೋಗೆ, ‘ತಮಾಷೆ, ನಗು ಮತ್ತು ಉತ್ತಮ ವಾತಾವರಣ‘ ಎಂದು ತಲೆಬರಹ ನೀಡಿದೆ. ಈ ವಿಡಿಯೋದಲ್ಲಿ, ಟೀಂ ಇಂಡಿಯಾ ಆಟಗಾರರಾದ ಸಂಜು ಸ್ಯಾಮ್ಸನ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಅಭಿಷೇಕ್ ಶರ್ಮಾ, ರಿಂಕೂ ಸಿಂಗ್, ಕುಲದೀಪ ಯಾದವ್, ತಿಲಕ್ ವರ್ಮಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಪ್ರತಿಯೊಬ್ಬ ಆಟಗಾರರು ಇರುವುದನ್ನು ಕಾಣಬಹುದು.
ವಿಡಿಯೊ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರಿಂದ ಆರಂಭವಾಗುತ್ತದೆ. ಬಹುತೇಕ ಯುವ ಆಟಗಾರರಿಂದ ಕೂಡಿರುವ ಟಿ20 ತಂಡದ ಸದಸ್ಯರು ಸರಣಿ ಆರಂಭಕ್ಕೂ ಮೊದಲು ಸಂತೋಷದ ಕ್ಷಣಗಳನ್ನು ಕಳೆಯುತ್ತಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ಆಟಗಾರರು ಅಭ್ಯಾಸದ ಜೊತೆಗೆ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಮೋಜು ಮಸ್ತಿ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ಇದರ ಜೊತೆಗೆ ಬಿಸಿಸಿಐ ಹಂಚಿಕೊಂಡಿರುವ ಇನ್ನೊಂದು ವಿಡಿಯೊದಲ್ಲಿ ಆಸ್ಟ್ರೇಲಿಯಾದ ಚಳಿಯನ್ನೂ ಲೆಕ್ಕಿಸದೆ ತಂಡದ ಆಟಗಾರರು ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
ಒಟ್ಟಾರೆ ಸೂರ್ಯಕುಮಾರ್ ಯಾದವ್ ನೇತೃತ್ವದ ಯುವ ಆಟಗಾರರು, ಆಟದ ಜೊತೆಗೆ ಫೋಟೋಶೂಟ್ ಸೇರಿದಂತೆ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಅಕ್ಟೋಬರ್ 29ರಂದು ಆರಂಭವಾಗಲಿದೆ. ನಂತರದ ಪಂದ್ಯಗಳು ಅಕ್ಟೋಬರ್ 31, ನವೆಂಬರ್ 2, 6, ಮತ್ತು 8ರಂದು ನಡೆಯಲಿವೆ. ಎಲ್ಲಾ ಪಂದ್ಯಗಳು ಕೂಡ ಮಧ್ಯಾಹ್ನ 1.45 ಕ್ಕೆ ಆರಂಭವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.