ADVERTISEMENT

IML 2025 | ಚೊಚ್ಚಲ ಆವೃತ್ತಿಯ ಫೈನಲ್‌ ಇಂದು: ತೆಂಡೂಲ್ಕರ್‌–ಲಾರಾ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 0:41 IST
Last Updated 16 ಮಾರ್ಚ್ 2025, 0:41 IST
ಸಚಿನ್ ತೆಂಡೂಲ್ಕರ್‌
ಸಚಿನ್ ತೆಂಡೂಲ್ಕರ್‌   

ರಾಯಪುರ: ಸಚಿನ್‌ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್‌ ತಂಡವು ಭಾನುವಾರ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಬ್ರಯನ್‌ ಲಾರಾ ಸಾರಥ್ಯದ ವೆಸ್ಟ್‌ ಇಂಡೀಸ್‌ ಮಾಸ್ಟರ್ಸ್‌ ತಂಡವನ್ನು ಎದುರಿಸಲಿದೆ.

ಎಸ್‌ವಿಎನ್‌ಎಸ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಇಂಡಿಯಾ ಮಾಸ್ಟರ್ಸ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಲೀಗ್‌ ಹಂತದಲ್ಲಿ ಈ ತಂಡಗಳು ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಇಂಡಿಯಾ ತಂಡವು 7 ರನ್‌ಗಳಿಂದ ರೋಚಕ ಜಯ ಗಳಿಸಿತ್ತು.

ಸಚಿನ್‌ ಪಡೆಯು ಲೀಗ್‌ ಹಂತದಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು ಎಂಟು ಅಂಕ ಪಡೆದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಸೆಮಿಫೈನಲ್‌ ತಲುಪಿತ್ತು. ಲೀಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 95 ರನ್‌ಗಳಿಂದ ಸೋತಿದ್ದ ಇಂಡಿಯಾ, ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಶೇನ್ ವಾಟ್ಸನ್‌ ನಾಯಕತ್ವದ ಅದೇ ತಂಡವನ್ನು 94 ರನ್‌ಗಳಿಂದ ಸೋಲಿಸಿ ಫೈನಲ್‌ ತಲುಪಿದೆ.

ADVERTISEMENT

ಲಾರಾ ಬಳಗವು ಲೀಗ್‌ ಹಂತದಲ್ಲಿ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಆರು ಅಂಕ ಗಳಿಸಿ, ನಾಲ್ಕನೇ ಸ್ಥಾನದೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಕುಮಾರ ಸಂಗಕ್ಕಾರ ನಾಯಕತ್ವದ ಶ್ರೀಲಂಕಾ ತಂಡವನ್ನು 6 ರನ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆಸಿದೆ. 

ಮೊದಲ ಆವೃತ್ತಿಯ ಟೂರ್ನಿಯಲ್ಲಿ ಒಟ್ಟು ಐದು ತಂಡಗಳು ಕಣದಲ್ಲಿದ್ದವು. ಇಂಗ್ಲೆಂಡ್‌ ಮಾಸ್ಟರ್ಸ್‌ ತಂಡವು ಲೀಗ್‌ ಹಂತದಲ್ಲೇ ಹೊರಬಿದ್ದಿದೆ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಜಿಯೊ ಹಾಟ್‌ಸ್ಟಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.