ADVERTISEMENT

ENG vs IND Test | ಬೆನ್‌ ಡಕೆಟ್‌ ಶತಕ; ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಜಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 18:07 IST
Last Updated 24 ಜೂನ್ 2025, 18:07 IST
<div class="paragraphs"><p>ಬೆನ್‌ ಡಕೆಟ್‌</p></div>

ಬೆನ್‌ ಡಕೆಟ್‌

   

ಚಿತ್ರ: X/@cricbuzz

ಲೀಡ್ಸ್‌: ಉತ್ತಮ ಮನರಂಜನೆ ಒದಗಿಸಿದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಒಟ್ಟು ಏಳು ಶತಕಗಳು ದಾಖಲಾದವು. ಆದರೆ ಅಂತಿಮ ದಿನದಾಟದಲ್ಲಿ ಬೆನ್‌ ಡಕೆಟ್‌ ಅವರ ಸೊಗಸಾದ ಶತಕ ಇಂಗ್ಲೆಂಡ್‌ ಮುಕುಟದಲ್ಲಿ ಕಂಗೊಳಿಸುವ ವಜ್ರದಂತೆ ಕಂಡಿತು. ಆತಿಥೇಯ ತಂಡ ಮಂಗಳವಾರ ಹೆಡಿಂಗ್ಲೆಯಲ್ಲಿ ಭಾರತದ ವಿರುದ್ಧ ಐದು ವಿಕೆಟ್‌ಗಳ ಅಮೋಘ ಜಯ ಗಳಿಸಿತು.

ADVERTISEMENT

ಕೋಚ್‌ ಬ್ರೆಂಡನ್ ಮೆಕ್ಕಲಂ ಮತ್ತು ನಾಯಕ ಬೆನ್‌ ಸ್ಟೋಕ್ಸ್‌ ಅವರ ಆಕ್ರಮಣಕಾರಿ ತಂತ್ರಗಾರಿಕೆಯ ಕ್ರಿಕೆಟ್‌ನಲ್ಲಿ ಡಕೆಟ್‌ ಅವರದು ಪ್ರಮುಖ ಪಾತ್ರ. ಅವರು ವೈಫಲ್ಯದ ಚಿಂತೆಯಿಲ್ಲದೇ ಆಡಿ ಅಚ್ಚುಕಟ್ಟಾದ 149 ರನ್ (170ಎ, 4x21, 6x1) ಪೋಣಿಸಿದರು. 371 ರನ್‌ಗಳ ದೊಡ್ಡ ಗುರಿಯನ್ನು ಇಂಗ್ಲೆಂಡ್‌ ಸುಲಭವಾಗಿ (5 ವಿಕೆಟ್‌ಗೆ 373) ದಾಟಿತು.

ಡಕೆಟ್‌ ನಿರ್ವಿವಾದವಾಗಿ ಪಂದ್ಯದ ಹೀರೊ ಎನಿಸಿದರು. ಸವಾಲಿನ ಪರಿಸ್ಥಿತಿಯಲ್ಲಿ ಅವರು ಭಾರತದ ಬೌಲರ್‌ಗಳನ್ನು ವ್ಯವಸ್ಥಿತವಾಗಿ ಮಟ್ಟಹಾಕಿದರು. ಕೆಚ್ಚು ಮತ್ತು ದೃಢನಿರ್ಧಾರದಿಂದ ಆಡಿದ ಜಾಕ್‌ ಕ್ರಾಲಿ (65, 126ಎ) ಅವರಿಗೆ ಸಮರ್ಥ ಬೆಂಬಲ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಕೇವಲ 42.2 ಓವರುಗಳಲ್ಲಿ 188 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇಂಥ ತುರಸಿನ ‍ಪೈಪೋಟಿಯ ಪಂದ್ಯದಲ್ಲಿ ಅಗತ್ಯವಿರುವ ಶಿಸ್ತುಬದ್ಧ ದಾಳಿ ಮಾತ್ರ ಭಾರತದ ಬೌಲಿಂಗ್ ಪಡೆಯಲ್ಲಿ ಕಾಣಲಿಲ್ಲ.

ಕೊನೆಯ ದಿನ ಏಷ್ಯಾ ಉಪಖಂಡದ ಪಿಚ್‌ಗಳ ರೀತಿ ಇಲ್ಲಿನ ಪಿಚ್‌ ವರ್ತಿಸಲಿಲ್ಲ. ಒಣ ಪಿಚ್‌ನಲ್ಲಿ ಕೆಲವೇ ಕೆಲವು ಎಸೆತಗಳು ಮಾತ್ರ ನಿರೀಕ್ಷೆ ಮೀರಿ ಪುಟಿದೆದ್ದವು. ಅಗ್ರಗಣ್ಯ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬಿಗುವಾಗಿಯೇ ಬೌಲಿಂಗ್ ಮಾಡಿದರು. ಅವರು ಬ್ಯಾಟ್ಸಮನ್ನರ ಸಹನೆ ಪರೀಕ್ಷಿಸಿದರು. ಕೆಲವು ಎಸೆತಗಳು ಡಕೆಟ್ ಮತ್ತು ಕ್ರಾಲಿ ಅವರ  ಬ್ಯಾಟಿನಂಚಿಗೆ ಮುತ್ತಿಕ್ಕಿದರೂ ದುರದೃಷ್ಟವಶಾತ್‌ ಭಾರತಕ್ಕೆ ವಿಕೆಟ್‌ ಸಿಗಲಿಲ್ಲ.

ಆದರೆ ಪ್ರಸಿದ್ಧ ಕೃಷ್ಣ ಮತ್ತು ರವೀಂದ್ರ ಜಡೇಜ ದಾಳಿಗಿಳಿಯುತ್ತಿದ್ದಂತೆ ಇಂಗ್ಲೆಂಡ್‌ ಆರಂಭಿಕರು ರನ್‌ವೇಗ ಹೆಚ್ಚಿಸತೊಡಗಿದರು. ಲಂಚ್‌ ವೇಳೆಗೆ ಮೊತ್ತ 30 ಓವರುಗಳಲ್ಲಿ117/0. ಆತಿಥೇಯರ ಪಾಳೆಯದಲ್ಲಿ ಗೆಲುವಿನ ವಾಸನೆ ಬಡಿಯತೊಡಗಿತು. ಸಾಕಷ್ಟು ಸಮಯವಿದ್ದ ಕಾರಣ ಇಬ್ಬರೂ ಓವರಿಗೆ ನಾಲ್ಕರ ವೇಗದಲ್ಲಿ ರನ್ ಗಳಿಸಿದರು.

ಆದರೆ ಲಂಚ್‌ ನಂತರ ಓವರಿಗೆ 5.50ರ ವೇಗದಲ್ಲಿ ರನ್‌ಗಳು ಹರಿಯ ತೊಡಗಿದವು. ಕಟ್‌, ಪುಲ್‌, ಸ್ವೀಪ್‌, ರಿವರ್ಸ್ ಸ್ವೀಪ್‌ ಹೊಡೆತಗಳು ಕಂಡುಬಂದವು. ಟೆಸ್ಟ್‌ಗೆ ವಿದಾಯ ಹೇಳಿರುವ  ವಿರಾಟ್‌ ಕೊಹ್ಲಿ ಅವರ
ಅನುಪಸ್ಥಿತಿಯಲ್ಲಿ ಭಾರತ ತಂಡದ ಉತ್ಸಾಹ ಕುಗ್ಗಿದಂತೆ ಕಂಡಿತು.  ಡಕೆಟ್‌ ಅವರು 97 ರನ್‌ ಗಳಿಸಿದ್ದಾಗ ಯಶಸ್ವಿ ಜೈಸ್ವಾಲ್‌ ಕ್ಯಾಚ್‌ ಬಿಟ್ಟರು.

ಆದರೆ ಹತಾಶೆಯ ಈ ವೇಳೆ, ಪ್ರಸಿದ್ಧ ಕೃಷ್ಣ ನೆರವಿಗೆ ಬಂದರು. ಮೊದಲು ದಂಡನೆಗೊಳಗಾಗಿದ್ದ ಅವರು ನಂತರ ಎರಡು ಓವರುಗಳ ಅಂತರದಲ್ಲಿ ಕ್ರಾಲಿ ಮತ್ತು ಓಲಿ ಪೋಪ್‌ ಅವರ ವಿಕೆಟ್‌ಗಳನ್ನು ಪಡೆದರು. ಈ ಪಂದ್ಯದಲ್ಲಿ ಸಪ್ಪೆಯಾಗಿದ್ದಂತೆ ಕಂಡ ಶಾರ್ದೂಲ್ ಠಾಕೂರ್‌ ಅವರು ಬಂಡೆಯಂತೆ ಬೇರೂರಿದ್ದ ಡಕೆಟ್‌ ಮತ್ತು ಅಪಾಯಕಾರಿ ಆಟಗಾರ ಹ್ಯಾರಿ ಬ್ರೂಕ್ ಅವರ ವಿಕೆಟ್‌ಗಳನ್ನು ಚಹಾ ವಿರಾಮಕ್ಕೆ ಸ್ವಲ್ಪ ಮೊದಲು ಪಡೆದರು.

ನಾಯಕ ಬೆನ್‌ ಸ್ಟೋಕ್ಸ್‌ (33) ಅಂತಿಮ ಅವಧಿಯ ಆಟ ಆರಂಭವಾದ ಕೆಲವೇ ಹೊತ್ತಿನಲ್ಲಿ ರಿವರ್ಸ್‌ ಸ್ವೀಪ್‌ ಹೊಡೆತಕ್ಕೆ ಹೋಗಿ ದಂಡ ತೆತ್ತರು. ಆದರೆ ಮಾಜಿ ನಾಯಕ, ಸ್ಥಳೀಯ ತಾರೆ ಜೋ ರೂಟ್‌ ಬೇರೂರಿ 53 ರನ್‌ಗಳೊಡನೆ ಅಜೇಯರಾಗುಳಿದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಎರಡನೇ ಟೆಸ್ಟ್ ಆರಂಭವಾಗಲು ವಾರದ ಅವಧಿಯಿದೆ. ಆದರೆ ಈ ಟೆಸ್ಟ್‌ನಲ್ಲಿ ಉತ್ತಮವಾಗಿ ಆರಂಭ ಮಾಡಿದ ಭಾರತ ಅಂತಿಮವಾಗಿ ಸೋತ ರೀತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ಆಟಗಾರರು ಎರಡು ಇನಿಂಗ್ಸ್‌ಗಳಲ್ಲಿ ಐದು ಶತಕಗಳನ್ನು ಹೊಡೆದಿದ್ದನ್ನು ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.