ADVERTISEMENT

ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌: ಭಾರತಕ್ಕೆ 260 ರನ್‌ ಮುನ್ನಡೆ

ಪಿಟಿಐ
Published 25 ಆಗಸ್ಟ್ 2019, 5:35 IST
Last Updated 25 ಆಗಸ್ಟ್ 2019, 5:35 IST
ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ
ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ   

ನಾರ್ತ್‌ ಸೌಂಡ್‌, ಆ್ಯಂಟಿಗ:ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡ 260 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 297 ರನ್‌ ಗಳಿಸಿತ್ತು. ವೆಸ್ಟ್‌ ಇಂಡೀಸ್‌ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್‌ಗೆ ಆಲೌಟ್‌ ಆಯಿತು.ಬಿರುಗಾಳಿ ವೇಗದ ಬೌಲಿಂಗ್‌ ಮೂಲಕ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಿದ ಇಶಾಂತ್‌ ಶರ್ಮಾ (43ಕ್ಕೆ5) ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಮುನ್ನಡೆ ಗಳಿಸಲು ನೆರವಾದರು.

ಎರಡನೇ ಇನ್ನಿಂಗ್ಸ್‌ಆರಂಭಿಸಿರುವ ಭಾರತ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 185 ರನ್‌ ಗಳಿಸಿದೆ. ತಲಾ ಅರ್ಧ ಶತಕಗಳಿಸಿರುವ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಕ್ರೀಸ್‌ನಲ್ಲಿ ಇದ್ದಾರೆ.

ಮೂರನೇ ದಿನದ ಮೊದಲ ಅವಧಿಯಲ್ಲಿ ಆತಿಥೇಯರು 15.2 ಓವರ್‌ಗಳನ್ನು ಆಡಿದರು. ಹೀಗಾಗಿ ಎದುರಾಳಿಗಳನ್ನು ಬೇಗನೆ ಆಲೌಟ್‌ ಮಾಡುವ ಕೊಹ್ಲಿ ಪಡೆಯ ಆಸೆ ಫಲಿಸಲಿಲ್ಲ. ಆರಂಭದ ಒಂದು ಗಂಟೆ ವಿಂಡೀಸ್‌ ನಾಯಕ ಹೋಲ್ಡರ್‌ (39; 65ಎ, 5ಬೌಂ) ಮತ್ತು ಮಿಗುಯೆಲ್‌ ಕಮಿನ್ಸ್‌ ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು. ಜಿಗುಟು ಆಟದ ಮೂಲಕ ಭಾರತದ ಬೌಲರ್‌ಗಳನ್ನು ಕಾಡಿದ ಈ ಜೋಡಿ ಒಂಬತ್ತನೇ ವಿಕೆಟ್‌ಪಾಲುದಾರಿಕೆಯಲ್ಲಿ 41ರನ್‌ಗಳನ್ನು ಸೇರಿಸಿತು.

ಈ ಜೊತೆಯಾಟವನ್ನು ಮುರಿಯಲು ನಾಯಕ ಕೊಹ್ಲಿ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರು. 74ನೇ ಓವರ್‌ ಬೌಲ್‌ ಮಾಡಿದ ಮೊಹಮ್ಮದ್‌ ಶಮಿ, ಯಶಸ್ಸು ತಂದು ಕೊಟ್ಟರು. ಅವರು ಮೊದಲ ಎಸೆತದಲ್ಲಿ ಹೋಲ್ಡರ್‌ ವಿಕೆಟ್‌ ಉರುಳಿಸಿದರು. ಮರು ಓವರ್‌ನಲ್ಲಿ ಸ್ಪಿನ್ನರ್‌ ರವೀಂದ್ರ ಜಡೇಜ, ಕಮಿನ್ಸ್‌ (0) ಅವರನ್ನು ಬೌಲ್ಡ್‌ ಮಾಡಿ ಆತಿಥೇಯರ ಇನಿಂಗ್ಸ್‌ಗೆ ತೆರೆ ಎಳೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಆರಮಭಿಕ ಆಘಾತ ಅನುಭವಿಸಿತು. ಮಯಂಕ್‌ ಅಗರ್‌ವಾಲ್‌ 16 ರನ್‌ ಗಳಿಸಿ ಔಟಾದರು. ನಂತರ ಚೇತೇಶ್ವರ ಪೂಜಾರ ಬಹಳ ಹೊತ್ತು ನಿಲ್ಲದೆ 25 ರನ್‌ಗಳಿಗೆ ಔಟಾದರು. ವಿಂಡೀಸ್‌ ಬೌಲರ್‌ಗಳನ್ನು ದಂಡಿಸಿದ ಕೆ.ಎಲ್‌ ರಾಹುಲ್‌ 38 ರನ್‌ಗೆ ಔಟಾದರು. ರಹಾನೆ ಮತ್ತು ಕೊಹ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಸಫಲರಾದರು.

ಸಂಕ್ಷಿಪ್ಪ ಸ್ಕೋರ್‌

ಭಾರತ: ಮೊದಲ ಇನಿಂಗ್ಸ್‌;96.4 ಓವರ್‌ಗಳಲ್ಲಿ 297.
ವೆಸ್ಟ್‌ ಇಂಡೀಸ್‌: ಪ್ರಥಮ ಇನಿಂಗ್ಸ್‌:74.2 ಓವರ್‌ಗಳಲ್ಲಿ 222

ಭಾರತ: ಎರಡನೇ ಇನಿಂಗ್ಸ್‌: 72 ಓವರ್‌ಗಳಲ್ಲಿ 3 ವಿಕೆಟ್‌ಗೆ 185

ಲೀಡ್‌: ಭಾರತಕ್ಕೆ 260 ರನ್‌ಗಳ ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.