ADVERTISEMENT

ಮೊದಲ ಪಂದ್ಯದಲ್ಲೇ 150 ರನ್: ಪಾಕ್ ಕ್ರಿಕೆಟಿಗನ ದಾಖಲೆ ಮುರಿದ ದ.ಆಫ್ರಿಕಾದ ಲುಹಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2025, 8:03 IST
Last Updated 30 ಜೂನ್ 2025, 8:03 IST
<div class="paragraphs"><p>ಲುಹಾನ್‌ ಡ್ರೆ ಪ್ರಿಟೋರಿಯಸ್‌</p></div>

ಲುಹಾನ್‌ ಡ್ರೆ ಪ್ರಿಟೋರಿಯಸ್‌

   

ಬುಲವಾಯೊ (ಜಿಂಬಾಬ್ವೆ): ಪದಾರ್ಪಣೆ ಪಂದ್ಯದಲ್ಲಿಯೇ ಅಮೋಘ ಶತಕ ಬಾರಿಸಿರುವ ದಕ್ಷಿಣ ಆಪ್ರಿಕಾ ಕ್ರಿಕೆಟಿಗ ಲುಹಾನ್‌ ಡ್ರೆ ಪ್ರಿಟೋರಿಯಸ್‌ ಅವರು ಪಾಕಿಸ್ತಾನದ ದಿಗ್ಗಜ ಜಾವೇದ್‌ ಮಿಯಾಂದಾದ್‌ ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದಿದ್ದಾರೆ.

ADVERTISEMENT

ಆತಿಥೇಯ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘ ಮಾದರಿಗೆ ಪದಾರ್ಪಣೆ ಮಾಡಿರುವ ಲುಹಾನ್‌, ಮೊದಲ ಇನಿಂಗ್ಸ್‌ನಲ್ಲಿ 153 ರನ್‌ ಬಾರಿಸಿದ್ದಾರೆ.

19 ವರ್ಷ 93 ದಿನಗಳಲ್ಲೇ 150ರ ಗಡಿ ದಾಟಿರುವ ಲುಹಾನ್‌, ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಅತಿ ಕಿರಿಯ ಬ್ಯಾಟರ್‌ ಎನಿಸಿದ್ದಾರೆ. ಇದುವರೆಗೆ ಈ ದಾಖಲೆ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ ಅವರ ಹೆಸರಿನಲ್ಲಿತ್ತು.

ಮಿಯಾಂದಾದ್‌ ಅವರು 1976ರಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ 163 ರನ್‌ ಗಳಿಸಿದ್ದರು. ಆಗ ಅವರ ವಯಸ್ಸು 19 ವರ್ಷ 119 ದಿನಗಳು.

ಭಾರತದ ಸಚಿನ್ ತೆಂಡೂಲ್ಕರ್‌ ಅವರು ಇಂಗ್ಲೆಂಡ್‌ ವಿರುದ್ಧ 1993ರಲ್ಲಿ ನಡೆದ ಪಂದ್ಯದಲ್ಲಿ 165 ರನ್‌ ಗಳಿಸಿದ್ದರು. ಆಗ ಅವರಿಗೆ 19 ವರ್ಷ 293 ದಿನ ವಯಸ್ಸಾಗಿತ್ತು.

ಹರಿಣಗಳ ಹಿಡಿತದಲ್ಲಿ ಪಂದ್ಯ
ಲುಹಾನ್‌ ಆಟದ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 418 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದ ಹರಿಣಗಳ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

ಪ್ರವಾಸಿ ಪಡೆ ಎದುರು ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗಿರುವ ಆತಿಥೇಯ ತಂಡ 251 ರನ್‌ ಗಳಿಗೆ ಆಲೌಟ್‌ ಆಗಿದ್ದು, 167 ರನ್‌ಗಳ ಹಿನ್ನಡೆ ಅನುಭವಿಸಿದೆ.

ಭಾರಿ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿರುವ ಹರಿಣಗಳ ಪಡೆ, ಎರಡನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 49 ರನ್ ಗಳಿದೆ. ಮುನ್ನಡೆಯನ್ನು 216 ರನ್‌ಗಳಿಗೆ ಹೆಚ್ಚಿಸಿಕೊಂಡಿದ್ದು, ಇನ್ನೂ 9 ವಿಕೆಟ್‌ ಬಾಕಿ ಇರುವುದರಿಂದ ಭಾರಿ ಗುರಿ ನೀಡುವ ಲೆಕ್ಕಾಚಾರದಲ್ಲಿದೆ.

ಮೂರನೇ ದಿನದಾಟ ಇನ್ನಷ್ಟೇ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.