ಕ್ರಿಕೆಟ್
(ಸಾಂಕೇತಿಕ ಚಿತ್ರ)
ಕ್ಯಾಂಟರ್‌ಬರಿ (ಇಂಗ್ಲೆಂಡ್): ಭಾರತ ‘ಎ’ ತಂಡ ಶುಕ್ರವಾರ ಇಲ್ಲಿ ಆರಂಭವಾಗುವ ನಾಲ್ಕು ದಿನಗಳ ‘ಟೆಸ್ಟ್’ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಎದುರಿಸಲಿದೆ. ಈ ತಂಡದಲ್ಲಿರುವ ಯಶಸ್ವಿ ಜೈಸ್ವಾಲ್, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಸೇರಿದಂತೆ ಕೆಲವು ಮುಂಚೂಣಿ ಟೆಸ್ಟ್ ಆಟಗಾರರು ಇಂಗ್ಲೆಂಡ್‌ನ ಪರಿಸ್ಥಿತಿಗೆ ಒಗ್ಗಿಕೊಳ್ಳಲು ತವಕದಲ್ಲಿದ್ದಾರೆ.
ಜೈಸ್ವಾಲ್, ನಿತೀಶ್ ಜೊತೆಗೆ ಅಭಿಮನ್ಯು ಈಶ್ವರನ್, ಧ್ರುವ್ ಜುರೇಲ್, ಕರುಣ್ ನಾಯರ್ ಅವರೂ ತಂಡದಲ್ಲಿದ್ದಾರೆ. ವೇಗದ ಬೌಲರ್‌ಗಳಾದ ಆಕಾಶ್ ದೀಪ್ ಮತ್ತು ಶಾರ್ದೂಲ್ ಠಾಕೂರ್ ಅವರೂ ಆಡಲಿದ್ದು, ಸ್ವಿಂಗ್ ಪಡೆಯುವ ಇಲ್ಲಿನ ಪಿಚ್‌ಗಳ ಅನುಭವ ಪಡೆಯಲಿದ್ದಾರೆ.
ಕರುಣ್ ಬಿಟ್ಟರೆ ಉಳಿದವರಿಗೆ ಇದು ಮೊದಲ ಬಾರಿಯ ಇಂಗ್ಲೆಂಡ್ ಪ್ರವಾಸವಾಗಿದೆ.
ಭಾರತ ಸೀನಿಯರ್ ತಂಡ ಜೂನ್ 20ರಂದು ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಆಡಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟೆಸ್ಟ್ ನಿವೃತ್ತಿಯಿಂದ ತೆರವಾಗಿರುವ ಸ್ಥಾನಗಳಿಗೆ ಪೈಪೋಟಿಯಿದೆ. ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಆಟಗಾರ ಯಾರೆಂಬುದು ಸ್ಪಷ್ಟವಾಗಬೇಕಿದೆ.
ಕೊಹ್ಲಿ ತೆರವು ಮಾಡಿರುವ ನಾಲ್ಕನೇ ಕ್ರಮಾಂಕಕ್ಕೆ ಬಂಗಾಳದ ಅಭಿಮನ್ಯು ಈಶ್ವರನ್ ರೇಸ್‌ನಲ್ಲಿದ್ದಾರೆ. ಹೀಗಾಗಿ ಈ ಎರಡು ಟೆಸ್ಟ್‌ಗಳ ಪ್ರವಾಸದಲ್ಲಿ ಅವರ ಪ್ರದರ್ಶನ ಗಣನೆಗೆ ಬರಲಿದೆ. ಅವರು 101 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಅವರಿಗೆ ಟೆಸ್ಟ್ ತಂಡದ ಸ್ಥಾನ ಸ್ವಲ್ಪದರಲ್ಲೇ ಕೈತಪ್ಪಿತ್ತು. ಆರಂಭ ಆಟಗಾರನ ಮತ್ತು ಮೂರನೇ ಕ್ರಮಾಂಕಕ್ಕೂ ಅವರು ಹೊಂದಿಕೊಳ್ಳಬಲ್ಲರು. ನೂತನ ನಾಯಕ ಶುಭಮನ್ ಗಿಲ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಬಲವಾಗಿದೆ.
ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸಿರುವ ಕರುಣ್ ನಾಯರ್ ಅವರ ನಿರ್ವಹಣೆಯ ಮೇಲೂ ಕಣ್ಣಿಡಲಾಗಿದೆ. ಎಂಟು ವರ್ಷಗಳ ನಂತರ ಅವರು ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಹೊಂದಿರುವ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುವ ಅವಕಾಶ ಇದೆ. ನಾರ್ತಾಂಪ್ಟನ್‌ಶೈರ್ ಕೌಂಟಿ ತಂಡಕ್ಕೂ ಆಡಿದ ಅನುಭವ ಅವರ ಬೆನ್ನಿಗಿದೆ.
ಡಿಸೆಂಬರ್– ಜನವರಿ ತಿಂಗಳ ಬಾರ್ಡರ್– ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ನಿತೀಶ್ ರೆಡ್ಡಿ 37ರ ಸರಾಸರಿಯಲ್ಲಿ 298 ರನ್ ಗಳಿಸಿ ಗಮನ ಸೆಳೆದಿದ್ದರು. ಒಂದು ಕೆಚ್ಚೆದೆಯ ಶತಕವೂ ಇದರಲ್ಲಿ ಒಳಗೊಂಡಿತ್ತು.
ಸೀನಿಯರ್ ಮತ್ತು ಎ ತಂಡದಲ್ಲಿ ಶಾರ್ದೂಲ್ ಅವರ ಸೇರ್ಪಡೆಯು, ಬೌಲಿಂಗ್‌ಗೆ ಹೆಚ್ಚಿನ ಬಲ ನೀಡುವ ಉದ್ದೇಶ ಹೊಂದಿದೆ. ಧ್ರುವ್ ಜುರೇಲ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಈ ತಂಡದಲ್ಲಿದ್ದಾರೆ. ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಋತುರಾಜ್ ಗಾಯವಾಡ್, ಹರ್ಷಿತ್ ರಾಣಾ ಮೊದಲಾದ ಆಟಗಾರರಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ, ಟೆಸ್ಟ್ ಆ ಸ್ಪಿನ್ನರ್ ರೆಹಾನ್ ಅಟಗಾರರಾದ ರೆಹಾನ್ ಅಹ್ಮದ್ ಮತ್ತು ಆಲ್‌ರೌಂಡರ್ ಕ್ರಿಸ್ ವೋಕ್ಸ್ ಇದ್ದಾರೆ. ಅವರ ಫಾರ್ಮ್ ಇಂಗ್ಲೆಂಡ್ ತಂಡಕ್ಕೆ ನಿರ್ಣಾಯಕವಾಗಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.30 (ಭಾರತೀಯ ಕಾಲಮಾನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.