ADVERTISEMENT

IPL | ಧನ್ಯವಾದಗಳು ಮುಂಬೈ ಇಂಡಿಯನ್ಸ್‌: ವಿರಾಟ್ ಕೊಹ್ಲಿ

ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿಸಿದ ರೋಹಿತ್ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದ ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 22 ಮೇ 2022, 14:13 IST
Last Updated 22 ಮೇ 2022, 14:13 IST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗ್ಲೆನ್ ಮ್ಯಾಕ್ಸ್‌ವೆಲ್, ನಾಯಕ ಫಫ್ ಡುಪ್ಲೆಸಿ ಮತ್ತು ವಿರಾಟ್ ಕೊಹ್ಲಿ ಸಂಭ್ರಮ  – ಆರ್‌ಸಿಬಿ ಟ್ವಿಟರ್ ಚಿತ್ರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗ್ಲೆನ್ ಮ್ಯಾಕ್ಸ್‌ವೆಲ್, ನಾಯಕ ಫಫ್ ಡುಪ್ಲೆಸಿ ಮತ್ತು ವಿರಾಟ್ ಕೊಹ್ಲಿ ಸಂಭ್ರಮ  – ಆರ್‌ಸಿಬಿ ಟ್ವಿಟರ್ ಚಿತ್ರ   

ಮುಂಬೈ (ಪಿಟಿಐ): ‘ಧನ್ಯವಾದಗಳು ಮುಂಬೈ, ನಾವು ಇದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ’–

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿಕಟಪೂರ್ವ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ಗೆ ಸಲ್ಲಿಸಿದ ಕೃತಜ್ಞತೆ ಇದು.

ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಜಯಿಸಿದ್ದರಿಂದ ಆರ್‌ಸಿಬಿಗೆ ಪ್ಲೇ ಆಫ್‌ ಪ್ರವೇಶದ ಅವಕಾಶ ದೊರೆತಿದೆ. ಇದು ಬೆಂಗಳೂರು ಬಳಗದಲ್ಲಿ ಸಂತಸಕ್ಕೆ ಕಾರಣವಾಗಿದೆ.

ADVERTISEMENT

‘ನಮ್ಮ ತಂಡದಲ್ಲಿ ಸಂತಸ, ಭಾವುಕತೆಗಳು ಮಹಾಪೂರವಾಗಿವೆ. ಇದೊಂದು ಅಸಾಧಾರಣವಾದ ವಿಷಯ. ಧನ್ಯವಾದಗಳು ಮುಂಬೈ’ ಎಂದು ಪ್ರಕಟಣೆಯಲ್ಲಿ ಕೊಹ್ಲಿ ತಿಳಿಸಿದ್ದಾರೆ.

ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆರ್‌ಸಿಬಿಯು ಗುಜರಾತ್ ಟೈಟನ್ಸ್‌ ವಿರುದ್ಧ ಜಯಿಸಿತ್ತು. ಅದರೊಂದಿಗೆ ಒಟ್ಟು 16 ಅಂಕಗಳನ್ನು ಗಳಿಸಿತ್ತು. ಆದರೆ, ನೆಗೆಟಿವ್ ರನ್‌ರೇಟ್ ಹೊಂದಿತ್ತು. 14 ಅಂಕ ಗಳಿಸಿ ಪಾಸಿಟಿವ್ ರನ್‌ರೇಟ್ ಹೊಂದಿದ್ದ ಡೆಲ್ಲಿ ತಂಡವು ಶನಿವಾರ ಮುಂಬೈ ಎದುರು ಜಯಿಸಿದ್ದರೆ ಆರ್‌ಸಿಬಿಗೆ ಪ್ಲೇ ಆಫ್‌ ಅವಕಾಶ ಕೈಜಾರುತ್ತಿತ್ತು. ಆದ್ದರಿಂದ ತಂಡದ ಆಟಗಾರರು, ಅಭಿಮಾನಿಗಳು ಮುಂಬೈ ತಂಡದ ಜಯಕ್ಕಾಗಿ ಹಾರೈಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಫ್ರ್ಯಾಂಚೈಸಿಯು ಮುಂಬೈ ಗೆಲುವಿಗಾಗಿ ಶುಭಕೋರಿತ್ತು. ಅದಕ್ಕಾಗಿ ತನ್ನ ಪ್ಲೇ ಬೋಲ್ಡ್‌ ಲಾಂಛನಕ್ಕೆ ಕೆಂಪು ಬದಲಿಗೆ ನೀಲಿ ಬಣ್ಣವನ್ನೂ ಹಾಕಿತ್ತು.

ಹೋಟೆಲ್‌ನಲ್ಲಿ ಇಡೀ ಬಳಗವೇ ದೊಡ್ಡ ಪರದೆಯ ಮುಂದೆ ಕುಳಿತು ಇಡೀ ಪಂದ್ಯ ವೀಕ್ಷಿಸಿತ್ತು. ಮುಂಬೈ ಗೆದ್ದ ನಂತರ ವಿರಾಟ್ ಸಹಿತ ಎಲ್ಲರೂ ಸಂತಸದಿಂದ ಕುಣಿದು ಕುಪ್ಪಳಿಸಿದ ದೃಶ್ಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

‘ಪಂದ್ಯದಲ್ಲಿ ಡೆಲ್ಲಿಯ ಪ್ರತಿಯೊಂದು ವಿಕೆಟ್ ಪತನವಾದಾಗಲೂ ಸಂತಸದಿಂದ ಕೂಗಾಡುತ್ತಿದ್ದೆವು. ಮುಂಬೈ ಬ್ಯಾಟಿಂಗ್ ಮಾಡುವಾಗ ಪ್ರತಿಯೊಂದು ಬೌಂಡರಿ ಹೊಡೆದಾಗಲೂ ಸಂತಸದಿಂದ ಕೇಕೆ ಹಾಕುತ್ತಿದ್ದೇವು. ಇದೊಂದು ವಿಶೇಷ ಅನುಭವ ಕೊಟ್ಟ ದಿನ’ ಎಂದು ಕೊಹ್ಲಿ ಹೇಳಿದ್ದಾರೆ.

ಇದೇ 25ರಂದು ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಎಲಿಮಿನೇಟರ್‌ನಲ್ಲಿ ಆರ್‌ಸಿಬಿಯು ಲಖನೌ ಸೂಪರ್ ಜೈಂಟ್ಸ್‌ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.