
ಲಂಡನ್: ಭಾರತ ತಂಡದ ಮಾಜಿ ಕ್ರಿಕೆಟಿಗ, ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ದಿನೇಶ್ ಕಾರ್ತಿಕ್ ಅವರು ಇಂಗ್ಲೆಂಡ್‌ನ ಜನಪ್ರಿಯ ಲೀಗ್ ‘ದಿ ಹಂಡ್ರೆಡ್’ ಟೂರ್ನಿಯಲ್ಲಿ ಲಂಡನ್ ಸ್ಪಿರಿಟ್ ತಂಡದ ಮಾರ್ಗದರ್ಶಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.
ಹಲವು ವರ್ಷಗಳ ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಕಾರ್ತಿಕ್ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಾರ್ತಿಕ್ ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಹೊರತುಪಡಿಸಿ ಬೇರೊಂದು ಲೀಗ್‌ನಲ್ಲಿ ಸಹಾಯಕ ಸಿಬ್ಬಂದಿಯಾಗಿ ನೇಮಕಗೊಳ್ಳುತ್ತಿದ್ದಾರೆ.
‘ಲಂಡನ್ ಸ್ಪಿರಿಟ್‌ಗೆ ಡಿಕೆ ಅವರನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ಅವರು ಉತ್ತಮ ಚಿಂತನೆಯುಳ್ಳವರು ಮತ್ತು ಶಾರ್ಟ್ ಫಾರ್ಮ್ಯಾಟ್‌ನಲ್ಲಿ ಅವರಿಗಿರುವ ಅಪಾರ ಅನುಭವ ನಮಗೆ ಅಮೂಲ್ಯ’ ಎಂದು ಸ್ಪಿರಿಟ್ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ದಿನೇಶ್ ಕಾರ್ತಿಕ್ ಜೊತೆ ಕೆಲಸ ಮಾಡುವುದು ತುಂಬಾ ಖುಷಿ ನೀಡುತ್ತದೆ ಮತ್ತು ಅವರು ತೆಗೆದುಕೊಳ್ಳುವ ಪ್ರತೀ ನಿರ್ಧಾರಗಳು ಕೂಡ ತಂಡಕ್ಕೆ ಉಪಯುಕ್ತವಾಗಿರುತ್ತವೆ’ ಎಂದು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕರೂ ಆಗಿರುವ ಬೊಬಾಟ್ ಹೇಳಿದರು.
‘ಲಂಡನ್ ಸ್ಪಿರಿಟ್ ತಂಡದ ಭಾಗವಾಗಿರುವುದು ನಿಜಕ್ಕೂ ಖುಷಿಯ ಸಂಗತಿ. ಬೇಸಿಗೆಯಲ್ಲಿ ಲಾರ್ಡ್ಸ್ ಮೈದಾನದಲ್ಲಿ ಕೆಲಸ ಮಾಡುವುದು ನಿಜಕ್ಕೂ ನನ್ನ ಕನಸಾಗಿತ್ತು. ಈಗ ಅದು ನನಸಾಗಿದೆ.
‘ನಾನು ಭಾರತಕ್ಕೆ ಪಾದಾರ್ಪಣೆ ಮಾಡಿದ ಮತ್ತು ಕೊನೆಯ ಟೆಸ್ಟ್ ಪಂದ್ಯ ಆಡಿದ ಮೈದಾನ ಲಾರ್ಡ್ಸ್. ಹಾಗಾಗಿ ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾಗಿದೆ’ ಎಂದು ಕಾರ್ತಿಕ್ ಹೇಳಿದರು. ಕಾರ್ತಿಕ್ ಅವರು, ಭಾರತ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.