ADVERTISEMENT

ನೋವಿನ ದಿನಗಳಿಗೆ ಬೆನ್ನುತೋರಿದ ನಿಕೋಲಸ್‌ ಪೂರನ್‌

ಬಸವರಾಜ ದಳವಾಯಿ
Published 29 ಸೆಪ್ಟೆಂಬರ್ 2020, 19:30 IST
Last Updated 29 ಸೆಪ್ಟೆಂಬರ್ 2020, 19:30 IST
ನಿಕೋಲಸ್‌ ಪೂರನ್‌
ನಿಕೋಲಸ್‌ ಪೂರನ್‌   

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡ ಚೇಸಿಂಗ್‌ನಲ್ಲಿ ದಾಖಲೆ ಬರೆದಿತ್ತು. ಕಿಂಗ್ಸ್ ಇಲೆವನ್‌ ಪಂಜಾಬ್‌ ನೀಡಿದ 224 ರನ್‌ಗಳ ಗುರಿಯನ್ನು, ಸಂಜು ಸ್ಯಾಮ್ಸನ್‌ ಹಾಗೂ ರಾಹುಲ್‌ ತೆವಾಟಿಯಾ ಅವರ ಬ್ಯಾಟಿಂಗ್‌ ಬಲದಿಂದ ಯಶಸ್ವಿಯಾಗಿ ಬೆನ್ನತ್ತಿ ಇತಿಹಾಸ ಬರೆದಿತ್ತು. ಈ ಹಣಾಹಣಿಯಲ್ಲಿ ತೆವಾಟಿಯಾ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ ಬಾರಿಸಿ ಗಮನಸೆಳೆದಿದ್ದು ಒಂದೆಡೆಯಾದರೆ, ಇನ್ನೊಂದು ಆಕರ್ಷಣೆ ಪಂಜಾಬ್‌ ತಂಡದ ನಿಕೋಲಸ್‌ ಪೂರನ್‌ ಅವರ ‘ಸೂಪರ್‌ ಮ್ಯಾನ್‌‘ ಫೀಲ್ಡಿಂಗ್‌‌.

ರಾಜಸ್ಥಾನ್‌ ಇನಿಂಗ್ಸ್‌ನ 8ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್‌ ಬಡಿದಟ್ಟಿದ ಚೆಂಡು ಇನ್ನೇನೂ ಬೌಂಡರಿ ಗೆರೆ ದಾಟಿತು ಎನ್ನುವಾಗಲೇ ಮಿಂಚಿನ ವೇಗದಲ್ಲಿಜಿಗಿದ ಪೂರನ್‌, ಸಿಕ್ಸರ್‌ ತಡೆದಿದ್ದರು. ತಂಡದ ಪರ ಅಮೂಲ್ಯ ನಾಲ್ಕು ರನ್‌ ಉಳಿಸಿದ್ದರು. ಈ ವಿಡಿಯೊ ಬಹಳಷ್ಟು ವೈರಲ್‌ ಆಗಿತ್ತು. ಈ ವೆಸ್ಟ್‌ಇಂಡೀಸ್‌ ಆಟಗಾರನಿಗೆ ‘ರೆಕ್ಕೆಗಳಿವೆ’ ಎಂದೂಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶಂಸಿಸಿದ್ದರು.

ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಕೂಡ ‘ನನ್ನ ಜೀವನದಲ್ಲಿ ನೋಡಿದ ಅತ್ಯಂತ ಶ್ರೇಷ್ಠ ರನ್‌ ಸೇವ್‌ ಇದು. ಅದ್ಭುತ! ಎಂದು ಟ್ವೀಟ್‌ ಮಾಡಿದ್ದರು. ಭೂಮಿಯ ಗುರುತ್ವಾಕರ್ಷಣ ಶಕ್ತಿಗೆ ಸವಾಲು ಎಸೆಯುವ ಕಾರ್ಯವಿದು ಎಂದು ಅನೇಕರು ಬರೆದಿದ್ದರು.

ADVERTISEMENT

ಈ ರೀತಿಯ ಫಿಟ್‌ನೆಸ್‌ ಒಲಿಸಿಕೊಳ್ಳಲು ಪೂರನ್‌ ಸಾಕಷ್ಟು ಕಷ್ಟಪಟ್ಟಿದ್ದಾರೆ. ನೋವಿನ ದಿನಗಳಿಂದ ಮೇಲೆದ್ದು ಬಂದಿದ್ದಾರೆ. 2015ರ ಜನವರಿಯಲ್ಲಿ ಟ್ರನಿಡಾಡ್‌ನಲ್ಲಿ ಸಂಭವಿಸಿದ ಕಾರು ಅಪಘಾತವೊಂದರಲ್ಲಿ ಪೂರನ್‌ ಅವರ ಎರಡೂ ಕಾಲುಗಳಿಗೆ ವಿಪರೀತ ಗಾಯಗಳಾಗಿದ್ದವು. ಮೂಳೆಗಳು ಮುರಿದಿದ್ದವು. ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಆರು ತಿಂಗಳುಗಳ ಕಾಲ ಅವರಿಗೆ ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲೂ ಸಾಧ್ಯವಾಗಿರಲಿಲ್ಲ. ನಂತರವೂ ಹಲವು ದಿನಗಳ ಕಾಲಅವರಿಗೆ ಗಾಲಿಕುರ್ಚಿಯೇ‌ ಆಧಾರವಾಗಿತ್ತು. ಪೂರನ್‌ ಧೃತಿಗೆಡಲಿಲ್ಲ. ಫೀನಿಕ್ಸ್‌ನಂತೆ ಮೇಲೆದ್ದರು. ದೇಹ, ಮನಸ್ಸನ್ನು ಹುರಿಗೊಳಿಸಿದರು. ದೇಶಿ ಟೂರ್ನಿಗಳಲ್ಲಿ ಹಂತ ಹಂತವಾಗಿ ಪ್ರಗತಿ ಕಾಣುತ್ತ 2016ರಲ್ಲಿ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಗಟ್ಟಿ ಮಾಡಿಕೊಂಡರು. ವೆಸ್ಟ್‌ ಇಂಡೀಸ್‌ನ ಟ್ವೆಂಟಿ–20 ತಂಡದ ಪ್ರಮುಖ ಆಟಗಾರನಾಗಿ ಪೂರನ್ ಈಗ‌ ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್‌ ಬದುಕು ಇನ್ನೇನು ಮುಗಿದೇ ಹೋಯಿತು ಎನ್ನುವಾಗ ಅವರಿಗೆ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬಿದವರಲ್ಲಿ ಸಹ ಆಟಗಾರ ಕೀರನ್‌ ಪೊಲಾರ್ಡ್ ಅವರ ಪಾತ್ರವೂ ಸಾಕಷ್ಟಿದೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.